ಕಾಪು: ಪಾದೂರು ಬಳಿ ಐಎಸ್‌ಪಿಆರ್‌ಎಲ್ ಕಚ್ಚಾ ತೈಲ ಸಂಗ್ರಹಣ ಘಟಕದ ಎರಡನೇ ಹಂತದ ಯೋಜನೆಯಿಂದ ಸುತ್ತಮುತ್ತಲಿನ ಪರಿಸರದ ಗ್ರಾಮಸ್ಥರಿಗೆ ತೊಂದರೆಯಾ ದಲ್ಲಿ ಅವರೊಂದಿಗೆ ಪ್ರತಿಭಟನೆಯಲ್ಲಿ ಕೈಜೋಡಿಸುತ್ತೇನೆೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
ಪಾದೂರು ಕಚ್ಚಾ ತೈಲದ ಎರಡನೇ ಹಂತದ ಯೋಜನೆಯಿಂದ ಸ್ಥಳೀಯರಿಗೆ ಆಗಿರುವ ಗೊಂದಲ ಗಳ ಬಗ್ಗೆ ಅವರು ಶನಿವಾರ ಗ್ರಾಮಸ್ಥ ರೊಂದಿಗೆ ನೇರ ಸಂವಾದದಲ್ಲಿ ಮಾತನಾಡಿದರು.
ಪಾದೂರು ಘಟಕದ ಮೊದಲ ಹಂತ ದಲ್ಲಾಗಿದ್ದ ತೊಂದರೆ, ನಷ್ಟಕಷ್ಟಗಳ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ. ಅಧಿವೇಶನದ ಸಂದರ್ಭ ಅಹವಾಲು ಮಂಡಿಸುವ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆ ನೀಡಿದರು.
ಪಾದೂರು ಜನಜಾಗೃತಿ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು ಪ್ರಸ್ತಾವನೆಗೈದು, ಪ್ರಥಮ ಹಂತದಲ್ಲಿ 180 ಎಕ್ರೆ ಜಮೀನು ಪಡಕೊಂಡ ಐಎಸ್‌ಪಿಆರ್‌ಎಲ್ ತೋಕೂರು ಪಾದೂರು ಪೈಪ್‌ಲೈನ್ ಕಾಮಗಾರಿ ಸಂದರ್ಭ ಹಾನಿಗೀಡಾದ 47 ಮನೆ ಗಳಿಗೆ 48 ಲಕ್ಷ ರೂ. ಪರಿಹಾರ ಮಾತ್ರ ನೀಡಿದೆ. ಮಜೂರು ಗ್ರಾ.ಪಂ. ವ್ಯಾಪ್ತಿಯ ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲ. ಎರಡನೇ ಘಟಕಕ್ಕೆ 250 ಎಕರೆ ಪ್ರದೇಶಕ್ಕೆ ನೋಟಿಸ್ ನೀಡಿದ್ದಾರೆ. ಇವುಗಳಲ್ಲಿ ಪಾದೂರು ಶಿರ್ವ, ಕಳತ್ತೂರು ಗ್ರಾಮಗಳು ಸೇರಿವೆ. ಆದರೆ ಶೇ. 80 ಭಾಗ ಪಾದೂರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುತ್ತದೆ ಎಂದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರು, ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕುತ್ಯಾರು ಗ್ರಾ.ಪಂ. ಅಧ್ಯಕ್ಷ ಧೀರಜ್ ಶೆಟ್ಟಿ, ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್ ರಾವ್ ಮೊದಲಾದವರು ಉಪಸ್ಥಿತರಿದ್ದರು.