ಬೀಳಗಿ: ಗ್ರಾಮದಲ್ಲಿ ಮೀಟರಯುಕ್ತ ನಲ್ಲಿ ಆಳವಡಿಸಿದ್ದರೂ ಕಳೆದ ಒಂದು ತಿಂಗಳಿನಿಂದ ಕುಡಿಯಲು ಹನಿ ನೀರು ಬರುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ. ಕೂಡಲೇ ನೀರು ಪೂರೈಕೆ ಮಾಡಬೇಕು. ಇಲ್ಲವಾದರೆ ನೇಣು ಹಾಕಬೇಕೆಂದು ತಾಲೂಕಿನ ನಾಗರಾಳ ಗ್ರಾಮಸ್ಥರು ಗ್ರಾಪಂ ಎದುರು ನೇಣಿನ ಕುಣಿಕೆಗೆ ಕೊರಳೊಡ್ಡಿ, ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.
ನಮಗೆ ನೀರು ಕೊಡಿ ಎಂದು ಕೇಳಿದರೆ, ಸ್ನಾನ ಮಾಡಿದ್ದೀರಿ. ನೀರು ಸಹ ಕುಡಿಯುತ್ತಿದ್ದೀರಿ. ಹಾಗಾದರೆ, ನಿಮಗೇಕೆ ನೀರು ಬೇಕು ಎಂದು ಗ್ರಾಪಂ ಪಿಡಿಒ ಉಡಾಫೆ ಮಾತನಾಡುತ್ತಾರೆ. ಗ್ರಾಮಸ್ಥರು ಎಂದರೆ ಅವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬೇರೆ ಕಡೆಯಿಂದ ನೀರು ತಂದು ಜೀವನ ಸಾಗಿಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯರೋಧನವಾದ ಗ್ರಾಮಸ್ಥರ ಕೂಗು: ಗ್ರಾಮದ ವಾಸ್ತವ ಸ್ಥಿತಿ ಇಲ್ಲಿನ ಗ್ರಾಪಂ ಪಿಡಿಒ ಗಮನಕ್ಕೆ ಬಂದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಗ್ರಾಮದ 704ನಲ್ಲಿಗಳಿಗೆ ಮೀಟರ್ ಅಳವಡಿಸಿ ವರ್ಷ ಗತಿಸಿದೆ. ಆದರೆ, ನಲ್ಲಿಗಳಿಗೆ ಮೀಟರ್ ಆರಂಭಿಸಿಲ್ಲ. ಗ್ರಾಮದ ಪ್ರತಿ ನಲ್ಲಿಗೆ 540ರೂ. ವಾರ್ಷಿಕ ತೆರಿಗೆ ತುಂಬಿಸಿಕೊಳ್ಳುತ್ತಾರೆ. ಗ್ರಾಮದ ಕೆಲವರು ಸಾವಿರಾರು ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿ ನೀರು ಸಂಗ್ರಹಿಸಿಕೊಂಡು ಮಾರಿಕೊಳ್ಳುತ್ತಾರೆ. ಆದರೆ, ನಲ್ಲಿಯ ತೆರಿಗೆಯನ್ನು ಮಾತ್ರ ಎಲ್ಲರೂ ಒಂದೇ ತೆರನಾಗಿ ಕಟ್ಟಬೇಕಾಗಿದೆ. ಇದು ಯಾವ ನ್ಯಾಯ ಎಂದು ಕೇಳಿದರೆ, ನಮ್ಮ ಕೂಗು ಮಾತ್ರ ಅರಣ್ಯರೋಧನವಾಗಿದೆ ಎಂದು ಅಳಲು ತೋಡಿಕೊಂಡರು.
ಗ್ರಾಪಂನಲ್ಲಿ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ನಿತ್ಯ ಸಾವಿರಾರು ಲೀಟರ್ ನೀರು ದುರ್ಬಳಕೆಯಾಗುತ್ತಿದೆ. ಆದರೆ, ಗ್ರಾಮದ 400ನಲ್ಲಿಗಳ ಕೊಳವೆಯಲ್ಲಿ ಒಂದು ಹನಿ ನೀರು ಕೂಡ ಬಾರದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಸ್ಪಂದಿಸುತ್ತಿಲ್ಲ: ಐದು ಇಂಚಿನ ಕೊಳವೆ ಮಾರ್ಗವಿರುವ ಗ್ರಾಮದ ಒಂದು ಭಾಗಕ್ಕೆ ನೀರು ಸರಬರಾಜು ಸರಿಯಾಗಿ ಆಗುತ್ತದೆ. ಕೇವಲ ಎರಡೂವರೆ ಇಂಚಿನ ಕೊಳವೆ ಮಾರ್ಗವಿರುವ ಗ್ರಾಮದ ಇನ್ನೊಂದು ಭಾಗಕ್ಕೆ ನೀರೇ ಬರುತ್ತಿಲ್ಲ. ಕೇಳಿದರೆ ಸ್ಪಂದಿಸುವ ಅಧಿಕಾರಿಗಳಿಲ್ಲ. ಹೀಗಾದರೆ, ಗ್ರಾಮಸ್ಥರ ಗತಿಯೇನು. ಅಧಿಕಾರಿಗಳಿಗೆ ಇಚ್ಛಾಶಕ್ತಿಯಿದ್ದರೆ ಅಲ್ಪಸ್ವಲ್ಪ ನೀರು ಕೊಡಬಹುದು. ಕಾಣದ ಕೈಗಳ ಷಡ್ಯಂತ್ರದಿಂದ ನೀರು ಸಿಗದಂತಾಗಿದೆ. ನಮಗೆ ನೀರು ಪೂರೈಸುವ ವರೆಗೆ ಗ್ರಾಮದ ಯಾವ ಭಾಗಕ್ಕೂ ನೀರು ಸರಬರಾಜು ಮಾಡಲು ಬಿಡುವುದಿಲ್ಲವೆಂದು ಪಟ್ಟು ಹಿಡಿದು ಪ್ರತಿಭಟಿಸಿದರು.
ಪಿಡಿಒ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಪಿಡಿಒ ಎಂ.ಎನ್.ಬೋರಡ್ಡಿ ಮಾತನಾಡಿ,ಗ್ರಾಮದ ಕೆಲವು ಪ್ರದೇಶಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಕೊಳವೆ ಮಾರ್ಗ ಬದಲಾಯಿಸಿಯಾದರೂ ಕೂಡಲೇ ಸಮರ್ಪಕ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ಸಂಕಣ್ಣನವರ, ಮಾನವ ಹಕ್ಕುಗಳ ಸಾಮಾಜಿಕ ಹೋರಾಟಗಾರ ಶ್ರೀಶೈಲ ಬರಗುಂಡಿ, ರಾಮಣ್ಣ ಕಳಸದ, ಪಡಿಯಪ್ಪ ಬಾಡಗಂಡಿ, ಸದಾಶಿವಪ್ಪ ಕಡ್ಲಿಮಟ್ಟಿ, ಈರಣ್ಣ ವಾಲಿ, ಮಲ್ಲಪ್ಪ ಹಡಪದ, ಡೋಂಗ್ರಿಸಾಬ ಚಿಮ್ಮಲಗಿ, ಈರಣ್ಣ ಮುಂಡಗನೂರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.