Advertisement

ಹಕ್ಕು ಪತ್ರಕ್ಕೆ ಮುಂದುವರಿದ ಪ್ರತಿಭಟನೆ

04:36 PM Jan 02, 2020 | Suhan S |

ಕನಕಪುರ: ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಹಕ್ಕುಪತ್ರ ನೀಡುವಂತೆ ಕಾಡಿನ ಮಧ್ಯೆ ಆದಿವಾಸಿಗಳು ನಡೆಸುತ್ತಿರುವ ನಿರಂತರ ಧರಣಿ 15ನೇ ದಿನಕ್ಕೆ ಕಾಲಿಟ್ಟಿದೆ.

Advertisement

ಸುಪ್ರೀಂಕೋರ್ಟ್‌ ಆದೇಶದಂತೆ 2017ರಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಹಕ್ಕುಪತ್ರ ನೀಡುವ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಕುಟುಂಬಗಳಿಗೂ ಹಕ್ಕು ಪತ್ರ ನೀಡಿಲ್ಲ.

ಭರವಸೆ ಮಾತ್ರ: ಕೆಲ ದಿನಗಳ ಹಿಂದೆ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ ಭೇಟಿ ನೀಡಿ ಕಂದಾಯ ಇಲಾಖೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. 2017ರಲ್ಲಿ ಅರಣ್ಯ ಇಲಾಖೆ ಸರ್ವೆ ನಡೆಸಿದ ವರದಿ ಕೊಟ್ಟಿಲ್ಲ. ಮರು ಸರ್ವೇ ನಡೆಸಿ ಹಕ್ಕುಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರೂ, ಪ್ರತಿಭಟನೆ ಮುಂದುವರಿದಿತ್ತು. ನಂತರ ಜಿಲ್ಲಾಧಿಕಾರಿಗಳ ಆದೇಶದ ಮೆರೆಗೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀ ನಿವಾಸ್‌ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಈ ಹಿಂದೆ ಆದಿವಾಸಿಗಳು ವಾಸಿಸುತ್ತಿದ್ದ ಬಗ್ಗೆ ಸ್ಮಶಾನ ದೇವಸ್ಥಾನ ಜಮೀನಿನ ಬದುಗಳು ಗಳಂತಹ ಕುರುಹುಗಳನ್ನು ಪತ್ತೆಹಚ್ಚಿ ಕಂದಾಯ ಇಲಾಖೆಯಿಂದ ಸರ್ವೇಗೆ ಆದೇಶ ನೀಡುವುದಾಗಿ ಭರವಸೆ ನೀಡಿದರು.

ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು: ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಯಪ್ರಕಾಶ್‌ ಭೇಟಿ ನೀಡಿ ಆದಿವಾಸಿಗಳು ಜೀವನ ನಡೆಸುತ್ತಿರುವ ಬಗ್ಗೆ ಎರಡು ಕುರುಹುಗಳು ಸಿಕ್ಕರೂ, ಸಹ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಲು ಅವಕಾಶವಿದೆ. ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ವಸ್ತು ಸ್ಥಿತಿ ತಿಳಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಬರಿ ಭರವಸೆಗೆ ಧರಣಿ ಕೈಬಿಡುವುದಿಲ್ಲ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು ಎಂದು ಆದಿವಾಸಿಗಳು ಪಟ್ಟು ಹಿಡಿದು 15 ದಿನಗಳಿಂದ 78 ಆದಿವಾಸಿ ಕುಟುಂಬಗಳು ಮಕ್ಕಳು ಸೇರಿದಂತೆ ಕೊರೆಯುವ ಚಳಿಯನ್ನು ಲೆಕ್ಕಿಸದೆ ಕಾಡು ಪ್ರಾಣಿಗಳಿಗೆ ಹೆದರದೆ ಹಗಲು ರಾತ್ರಿಯಲ್ಲಿ ನಿರಂತರವಾಗಿ ಧರಣಿ ನಡೆಸುತ್ತಿದರೂ, ಜಿಲ್ಲಾಧಿಕಾರಿಗಳು ಮಾತ್ರ ಇತ್ತ ತಲೆಹಾಕಿಲ್ಲ.

200 ವರ್ಷ ಸಾಗುವಳಿ: ತಾಲೂಕಿನ ಮರಳವಾಡಿ ಹೋಬಳಿಯ ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌ ವ್ಯಾಪ್ತಿಗೆ ಸೇರಿದ ವಾಡೆಕುಂಚೆನಹಳ್ಳಿ ಮತ್ತು ಅಂಚೆನಹಳ್ಳಿ ಗ್ರಾಮದ 120 ಆದಿವಾಸಿ ಕುಟುಂಬಗಳು 200 ವರ್ಷಗಳ ಹಿಂದೆ ತಮ್ಮ ಪೂರ್ವಿಕರ ಕಾಲದಿಂದಲೂ ಅರಣ್ಯದಲ್ಲಿ ಸಾಗುವಳಿ ಮಾಡಿಕೊಂಡು ವಾಸಿಸುತ್ತಿದ್ದಾರೆ. 1998 ರಿಂದ ಕಂದಾಯ ಪಾವತಿಸುತ್ತಿದ್ದು, 2006 ರ ಸೂಪ್ರೀಂಕೋರ್ಟ್‌ ಆದೇಶದಂತೆ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಎಲ್ಲಾ ಕುಟುಂಬಗಳು ಹಕ್ಕುಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು.

Advertisement

ಒಕ್ಕಲೆಬ್ಬಿಸಲು ಆದೇಶ: ಅರಣ್ಯ ಹಕ್ಕು ಕಾಯ್ದೆಯಡಿ ನೀಡುತ್ತಿರುವ ಅರಣ್ಯ ಭೂಮಿಯನ್ನು ಸ್ಥಗಿತಗೊಳಿಸಬೇಕು ಎಂದು ವಲ್ಡ್ ಲೈಫ್ ಫ‌ಸ್ಟ್‌ ಖಾಸಗಿ ಸಂಸ್ಥೆ ಸೂಪ್ರೀಂ ಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಅರ್ಜಿ ಪರಿಶೀಲಿಸಿದ ನ್ಯಾಯಾಲಯ ವಾದ ವಿವಾದದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಯಾವುದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಆದಿವಾಸಿಗಳನ್ನು ಅರಣ್ಯದಿಂದ ತೆರವು ಗೊಳಿಸಬೇಕು ಎಂದು ಆದೇಶ ನೀಡಿತು.

ಅರ್ಜಿ ಮರುಪರಿಶೀಲನೆ: ಅರಣ್ಯ ಹಕ್ಕು ಕಾಯ್ದೆ ಕುರಿತು ಅರ್ಜಿದಾರರು ಸೇರಿದಂತೆ ಲಕ್ಷಾಂತರ ಕುಟುಂಬಗಳು ದೇಶಾದ್ಯಂತ ಪ್ರತಿಭಟನೆ ನಡೆಸಿದವು. ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಆದಿವಾಸಿಗಳಿಗೆ ಅನ್ಯಾಯವಾಗಿದೆ ಹಾಗಾಗಿ ತಿರಸ್ಕೃತ ಕೊಂಡಿರುವ ಅರ್ಜಿಯನ್ನು ಮರುಪರಿಶೀಲಿಸಬೇಕು ಎಂದು ಸೂಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಹತೆ ಹೊಂದಿರುವ ನೈಜ ಫ‌ಲಾನುಭವಿಗಳಿಗೆ ಅನ್ಯಾಯ ಆಗಬಾರದು ಹಾಗಾಗಿ ಇನ್ನು ಆರು ತಿಂಗಳ ಕಾಲಾವಕಾಶದಲ್ಲಿ ಅರ್ಹ ಫ‌ಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

ಮಹದೇವಯ್ಯ, ಶಿವರಾಜು, ಸಹದೇವ, ದ್ಯಾವಯ್ಯ, ವೆಂಕಟಲಕ್ಷ್ಮಮ್ಮ, ಚಿಕ್ಕಮಾರಮ್ಮ, ಗಂಗಮ್ಮ ಸೇರಿದಂತೆ 78 ಆದಿವಾಸಿ ಕುಟುಂಬಗಳ ಮಕ್ಕಳು ನಿರಂತರ ಧರಣಿಯಲ್ಲಿ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next