ಮಹಾಲಿಂಗಪುರ: ಅಧಿಕಾರಿಗಳ ಗೈರು ಹಾಜರಿ ಹಾಗೂ ನಿಲ್ಲದ ಅಕ್ರಮ ಮದ್ಯ ಮಾರಾಟಕ್ಕೆ ಬೇಸತ್ತ ಗ್ರಾಮಸ್ಥರು ಗ್ರಾಮಸಭೆ ಮುಂದೂಡಬೇಕೆಂದು ಚಿಮ್ಮಡ ಗ್ರಾಮ ಪಂಚಾಯತಿ ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಚಿಮ್ಮಡ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಕವಿ ಚಕ್ರವರ್ತಿ ರನ್ನ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ನಡೆದ ಗ್ರಾಮಸಭೆಯಲ್ಲಿ ಹಲವಾರು ಇಲಾಖೆಗಳ ಸಂಬಂಧಿಸಿದ ಅಧಿಕಾರಿಗಳಿಗೆ ಸಭೆಯ ತಿಳಿವಳಿಕೆ ಪತ್ರ ನೀಡಿ, ಕರೆ ಮಾಡಿ ಮನವರಿಕೆ ಮಾಡಿದರೂ ಹಲವು ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ. ಹಲವರು ತಮ್ಮ ಸಹಾಯಕರನ್ನು ಸಭೆಗೆ ಕಳುಹಿಸಿದ್ದರು.
ಅಲ್ಲದೇ ಸಭೆಯ ನೋಡಲ್ ಅಧಿಕಾರಿಗಳು ಗೈರಾದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಗೆ ಹಾಜರಾಗುವವರೆಗೂ ಸಭೆ ನಡೆಸಬಾರದೆಂದು ಪಟ್ಟು ಹಿಡಿದರು. ಇಕ್ಕಟ್ಟಾದ ಸ್ಥಳದಲ್ಲಿ ಸಭೆ ಆಯೋಜಿಸಿದ್ದರಿಂದ ಮಲ್ಲಪ್ಪ ಬಿರಾದರಪಾಟೀಲ, ಮೋನೇಶ ಬಡಿಗೇರ, ಗುರಲಿಂಗಪ್ಪ ದೊಡಮನಿ ಗ್ರಾಪಂ ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಿಡಿಒ ಎಂ.ಎಸ್. ರೂಗಿ ಮಾತನಾಡಿ, ಮುಂದಿನ ಗ್ರಾಮಸಭೆ ವಿಶಾಲವಾದ ಸ್ಥಳದಲ್ಲಿ ಆಯೋಜಿಸುವ ಭರವಸೆ ನೀಡಿದರು. ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಶ್ರೀಧರ ನಂದಿಹಾಳ, ಹೆಸ್ಕಾಂನ ಎಸ್.ಎಸ್. ಮುಧೋಳ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ನೀಲನ್ನವರ, ಪಶು ವೈದ್ಯಾಧಿಕಾರಿ ಡಾ| ರೂಪಾ ಕಡಸಾನಿ ಮಾತನಾಡಿ, ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯ, ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ| ಅಶೋಕ ಪಡಸಾಲಿಯವರ ಕಾರ್ಯವೈಖರಿ ಕುರಿತು ಮಾನವ್ವ ಸಾವಳಗಿ, ಮಹಾಂತೇಶ ಯಂಕಂಚಿ ಸಲೀಮ ಸರಕಾವಸ, ಬಸವರಾಜ ಬಳಗಾರ ದೂರಿದರು. ಗ್ರಾಪಂ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ ಮಾತನಾಡಿದರು. ಗ್ರಾಮದ ಸರಕಾರಿ ಪ್ರೌಢಶಾಲೆ, ರೈತ ಸಂಪರ್ಕ ಕೇಂದ್ರ, ಸರಕಾರಿ ಆಸ್ಪತ್ರೆ ಸೇರಿದಂತೆ ಹಲವಾರು ಇಲಾಖೆಯ ಸಮಸ್ಯೆಗಳ ಕುರಿತು ಗ್ರಾಮಸ್ಥರು ಚರ್ಚೆ ನಡೆಸಿದರು.
ನೋಡಲ್ ಅಧಿಕಾರಿಗಳೇ ಇಲ್ಲದ ಗ್ರಾಮಸಭೆಯ ಅದ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ರೇಣುಕಾ ಮಾಯಣ್ಣವರ, ಆನಂದ ಕವಟಿ, ಮನೋಜ ಹಟ್ಟಿ, ತಾಪಂ ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಮಹಾಲಿಂಗ ಮಾಯನ್ನವರ, ಗ್ರಾಪಂ ಸದಸ್ಯರು, ಗ್ರಾಮದ ವಿವಿಧ ಶಾಲೆಗಳ ಮುಖ್ಯಗುರುಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.