Advertisement

ಜಿ.ಪಂ.ಅಧ್ಯಕ್ಷ,ತಾ.ಪಂ.ಅಧ್ಯಕ್ಷ,ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

11:10 PM Sep 16, 2019 | Team Udayavani |

ಉದ್ಯಾವರ (ಕಟಪಾಡಿ): ಇಲ್ಲಿನ ಉದ್ಯಾವರ ಗ್ರಾಮ ಪಂಚಾಯತ್‌ ಇದರ 2019-20ನೇ ಸಾಲಿನ ಪ್ರಥಮ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷೆ ಸುಗಂಧಿ ಶೇಖರ್‌ ಅಧ್ಯಕ್ಷತೆಯಲ್ಲಿ ಸೆ.16ರಂದು ಉದ್ಯಾವರ ಬಿಲ್ಲವ ಮಹಾಜನ ಸಂಘದ ಸಭಾಭವನದಲ್ಲಿ ನಡೆಯಿತು.

Advertisement

ತಾ. ಪಂ. ಸದಸ್ಯೆ ರಜನಿ ಆರ್‌ ಅಂಚನ್‌ ಮಾತನಾಡಿ, ಲಭ್ಯ ಅನುದಾನದಡಿ ಉದ್ಯಾವರ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸುವ ಭರವಸೆಯನ್ನು ನೀಡಿದರು.

ಗ್ರಾಮಸ್ಥರ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಗ್ರಾಮಸಭೆಯಲ್ಲಿಯೇ ಉತ್ತರಿಸಿ ಸೌಕರ್ಯ ಕಲ್ಪಿಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಗ್ರಾಮಸಭೆಗೆ ಹಾಜರಾಗದೇ ಇದ್ದು, ಗ್ರಾಮಸ್ಥರನ್ನು ಕೆರಳಿಸಿತ್ತು. ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಪ್ರಮುಖವಾಗಿ ಪರಿಸರ ಇಲಾಖೆ, ಮೀನುಗಾರಿಕಾ ಇಲಾಖೆ, ಪೊಲೀಸ್‌ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಡಿ.ಹೆಚ್‌.ಒ, ಸಿ.ಆರ್‌.ಝಡ್‌ ಅಧಿಕಾರಿಗಳು ಸಹಿತ ಇತರೇ ಇಲಾಖೆ ಹಾಗೂ ಸ್ಥಳೀಯ ಶಾಸಕ, ಜಿ.ಪಂ. ಅಧ್ಯಕ್ಷ, ತಾ.ಪಂ. ಅಧ್ಯಕ್ಷರು ಗೈರಾಗಿರುವ ಬಗ್ಗೆ ಗ್ರಾಮಸ್ಥರಿಂದ ಆಸಹನೆ ವ್ಯಕ್ತವಾಗಿತ್ತು.

ತೆರೆದ ಬಾವಿಯ ನೀರು ಮಲಿನವಾಗಿದೆ
ಈ ಸಂದರ್ಭ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಸಭೆಯ ಮುಂದಿಡುತ್ತಾ, ಫಿಶ್‌ ಮೀಲ್‌ ಕೈಗಾರಿಕಾ ಘಟಕಗಳು ಬಳಸುವ ಕಲ್ಲಿದ್ದಲು ಅಪಾಯಕಾರಿಯಾಗಿದ್ದು, ತೆರೆದ ಬಾವಿಯ ನೀರು ಮಲಿನವಾಗಿದೆ. ಮುಂದಿನ ಪೀಳಿಗೆಗೆ ತೊಂದರೆ ಆಗದಂತೆ ಕೈಗಾರಿಕಾ ಘಟಕಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.

Advertisement

ಕೈಗಾರಿಕಾ ವಲಯ: ಅವಕಾಶ ಬೇಡ
ಈಗಾಗಲೇ ನಿರ್ಮಿತವಾಗಿರುವ ಕೈಗಾರಿಕೆಗಳಿಂದ ಸಾಕಷ್ಟು ಅನಾನುಕೂಲತೆಗಳು ಗ್ರಾಮಸ್ಥರಲ್ಲಿ ಕಾಡುತ್ತಿದ್ದು, ಜನರಿಗೆ ಬಹಳಷ್ಟು ತೊಂದರಯಾಗಿದೆ. ಹಾಗಾಗಿ ಕೈಗಾರಿಕಾ ವಲಯ ಪರಿವರ್ತನೆಗೆ ಅವಕಾಶ ಕೊಡಬಾರದು ಎಂದು ಗ್ರಾಮಸ್ಥರು ತಿಳಿಸಿದರು.

ಬಸ್ಸು ಪೇಟೆಯೊಳಗೆ ಬರಲಿ, ಬೀದಿ ನಾಯಿ ಕಾಟ ನಿಯಂತ್ರಿಸಿ
ಉದ್ಯಾವರ ಪೇಟೆಯೊಳಗೆ ಎಲ್ಲಾ ಬಸ್ಸುಗಳು ಬಾರದೇ ಹೆದ್ದಾರಿ ಮೂಲಕ ಸಾಗುತ್ತದೆ. ಬೀದಿ ನಾಯಿಗಳ ಕಾಟ ಅಧಿಕವಾಗಿದ್ದ, ರಸ್ತೆಯಲ್ಲಿ ನಡೆದಾಡಲು ಕಷ್ಟವಾಗುತ್ತದೆ. ಕ್ರಮಕ್ಕೆ ಮಂದಾಗುವಂತೆ ಕೇಳಿಕೊಂಡರು. ಉದ್ಯಾವರ ಪೇಟೆಯಿಂದ ಪಿತ್ರೋಡಿ ಸಂಪರ್ಕ ರಸ್ತೆಯ ಸೇತುವೆಗಳು ಶಿಥಿಲಗೊಂಡಿದ್ದು, ಯಾವುದೇ ಸಂದರ್ಭದಲ್ಲೂ ಅಪಾಯ ಸಂಭವಿಸಬಹುದು. ಒಂದು ಸೇತುವೆಯ ಬಳಿ ಸಂಚಾರಕ್ಕೆ ಕೈಗೊಂಡ ಸುರಕ್ಷತಾ ಕ್ರಮ ಶ್ಲಾಘನೀಯ. ಕೂಡಲೇ ವಿಸ್ತರೀಕರಣಕ್ಕೆ ಮುಂದಾಗುವಂತೆ ಸಂಬಂಧಿತ ಇಲಾಖೆ ಗಮನಕ್ಕೆ ತರಲು ತಿಳಿಸಿದ್ದು, ಕೃಷಿ ಇಲಾಖೆ ಪೂರೈಸುವ ಕಲ್ಲು ಮಿಶ್ರಿತ ಗೊಬ್ಬರ ಕಳಪೆಯಾಗಿದೆ ಎಂದು ಆರೋಪಿಸಿದರು.

ಮನೆಯ ಕೆಲಸಕ್ಕೆ ಕೊಂಡೊಯ್ಯುವ ಒಂದೆರಡು ರೀಪು ತುಂಡುಗಳಿಗೂ ಕೇಸು ಹಾಕುವ ಅರಣ್ಯ ಇಲಾಖೆ ಒಂದೇ ಪರವಾನಿಗೆಯಡಿ ಹಲವಾರು ಲೋಡ್‌ ಕಟ್ಟಿಗೆಗಳನ್ನು ಸಾಗಿಸುವ ಲಾರಿಗಳ ಮೇಲೇಕೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವ ಪ್ರಶ್ನೆಗಳು ಸಭೆಯಲ್ಲಿ ಕೇಳಿಬಂತು.

ಸಹಾಯಕ ಎಂಜಿನಿಯರ್‌ ಸುಭಾಸ್‌ ರೆಡ್ಡಿ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.

ಪಶು ಸಂಗೋಪನಾ ಇಲಾಖಾಧಿಕಾರಿ ಸಂದೀಪ್‌ ಶೆಟ್ಟಿ, ಆರೋಗ್ಯ ಇಲಾಖಾ ಸಿಬಂದಿ ವಿದ್ಯಾ, ಸಿ.ಡಿ.ಪಿ.ಒ. ಇಲಾಖೆಯ ಮೇಲ್ವಿಚಾರಕಿ ಮೋಹಿನಿ ಗೌಡ, ಮಕ್ಕಳ ಸಹಾಯವಾಣಿಯ ಆಪ್ತ ಸಮಾಲೋಚಕಿ ವೀಣಾ, ಆರೋಗ್ಯ ಇಲಾಖೆಯ ವಿದ್ಯಾ, ಕಿರಿಯ ಇಂಜಿನಿಯರ್‌ ಭರಂಮಾಲಿ, ಮೆಸ್ಕಾಂ ಕಿರಿಯ ಎಂಜಿನಿಯರ್‌ ಶ್ರೀಧರ ಗುರವ, ಕಂದಾಯ ಇಲಾಖೆಯ ಉಪೇಂದ್ರ, ಕೃಷಿ ಇಲಾಖೆಯ ರಾಮಕೃಷ್ಣ ಭಟ್‌, ಬೃಂದಾ, ಉಪವಲಯಾರಣ್ಯಾಧಿಕಾರಿ ಗುರುರಾಜ್‌, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯ ಭರಮಾ ಮಾಳಿ ಉಪಸ್ಥಿತರಿದ್ದು ಇಲಾಖಾ ಮಾಹಿತಿ ನೀಡಿದರು.
ಪ್ರಕೃತಿ ವಿಕೋಪ ಹಾನಿಯ ಪರಿಹಾರ ಧನದ ಚೆಕ್‌ ವಿತರಿಸಲಾಯಿತು.

ಗ್ರಾ.ಪಂ. ಉಪಾಧ್ಯಕ್ಷ ರಿಯಾಜ್‌ ಇಸ್ಮಾಯಿಲ್‌ ಪಳ್ಳಿ, ಗ್ರಾಮ ಪಂಚಾಯತ್‌ ಸದಸ್ಯರು, ಪಿ.ಡಿ.ಒ. ರಮಾನಂದ ಪುರಾಣಿಕ್‌, ಕಾರ್ಯದರ್ಶಿಶರೀಪ್‌ ಸಾಬ್‌ ನದಾಫ್‌, ಸಿಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಶೌಚಾಲಯಗಳಿಲ್ಲ
ಅಂಕುದ್ರು ವಾರ್ಡುನಲ್ಲಿ ಕೆಲ ಮನೆಗಳಲ್ಲಿ ಶೌಚಾಲಯಗಳಿಲ್ಲ ಎಂದು ಗ್ರಾಮಸ್ಥರು ಸಭೆಯ ಗಮನಕ್ಕೆ ತಂದಿದ್ದು, ಪರಿಶೀಲಿಸುವ ಭರವಸೆಯನ್ನು ಅಧಿಕಾರಿ ವರ್ಗ, ಆಡಳಿತ ಮಂಡಳಿ ನೀಡಿದರು. ಸುಮಾರು 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಉದ್ಯಾವರಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಪೊಲೀಸ್‌ ಔಟ್‌ಪೋಸ್ಟ್‌, ಎಸ್‌ಎಲ್‌ಅರ್‌ಎಂ ಘಟಕ ವಿದ್ಯುತ್‌ ಸಬ್‌ಸ್ಟೇಶನ್‌ ಶೀಘ್ರವಾಗಿ ಕಲ್ಪಿಸುವಂತೆ ಒತ್ತಾಯಿಸಿದರು. ಗ್ರಾಮದ ಸೊತ್ತಾಗಿರುವ ಪಶು ವೈದ್ಯಕೀಯ ಆಸ್ಪತ್ರೆಯನ್ನು ಉಳಿಸಿಕೊಳ್ಳುವಲ್ಲಿ ಸೂಕ್ತ ಕ್ರಮಕ್ಕೆ ನಿರ್ಣಯ ಕೈಗೊಳ್ಳುವಂತೆ ಗ್ರಾಮಸ್ಥರು ಕೋರಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next