ಲಿಂಗಸುಗೂರು: ಗೋವಾದಿಂದ ಬಂದಿದ್ದ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲು ತಾಲೂಕಿನ ಸರ್ಜಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ವಾರಂಟೈನ್ ಸೆಂಟರ್ ತೆರೆಯಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ.
ಸರ್ಜಾಪುರದ ಕೂಲಿ ಕಾರ್ಮಿಕರು ಕೂಲಿಗಾಗಿ ಗೋವಾಕ್ಕೆ ತೆರಳಿದ್ದರು. ಲಾಕ್‌ಡೌನ್ ಸಡಿಲಿಕೆಗೊಂಡು ಅಂತಾರಾಜ್ಯ ಪ್ರಯಾಣಕ್ಕೆ ಸರ್ಕಾರ ಅನುಮತಿ ನೀಡಿದ ನಂತರ 6 ವರ್ಷದ ಮಗುವಿನೊಂದಿಗೆ ಗಂಡ-ಹೆಂಡತಿ ಮೂರು ಜನರು ಗೋವಾದಿಂದ ಬಸ್ ಮೂಲಕ ಸರ್ಜಾಪುರದ ತಮ್ಮ ಮನೆಗೆ ಬಂದಿದ್ದರಿಂದ ಸ್ಥಳೀಯರು ಈ ಬಗ್ಗೆ ಗ್ರಾಪಂ ಆಡಳಿತ ಹಾಗೂ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾಗಿ ಗೋವಾದಿಂದ ಮೂರು ಜನರು ಹಾಗೂ ಮನೆಯಲ್ಲಿದ್ದ ಇಬ್ಬರನ್ನು ಸರ್ಕಾರಿ ಪ್ರೌಢಶಾಲೆಯಲ್ಲಿ ಕರೆತಂದು ಅವರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.
ವಿರೋಧ: ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ವಾರಂಟೈನ್ ಸೆಂಟರ್ ತೆರೆಯುವುದರಿಂದ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಪದೇ ಪದೇ ಊರಿನಲ್ಲಿ ತಿರುಗಾಡುಬಹುದು. ಶಾಲೆಯಲ್ಲಿ ಶೌಚಾಲಯ ಸಮಸ್ಯೆ ಇದ್ದು, ಶೌಚಕ್ಕಾಗಿ ತಮ್ಮ ಮನೆಗೆ ಹೋಗುವುದರಿಂದ ನಮಗೆ ಭೀತಿ ಶುರುವಾಗಿದ್ದು, ಆದ್ದರಿಂದ ಬೇರೆ ಕಡೆ ಕ್ವಾರಂಟೈನ್‌ನಲ್ಲಿ ಇಡಬೇಕು ಎಂದು ಗ್ರಾಮದ ಯುವಕ ಶಿವಪುತ್ರ ಕುಪ್ಪಿಗುಡ್ಡ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಪ್ರಕಾಶರೆಡ್ಡಿ ಡಂಬಳ, ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯಕ್ಕೆ ತೊಂದರೆಯಿಲ್ಲ. ಕ್ವಾರಂಟೈನ್‌ನಲ್ಲಿರುವವರು ಹೊರ ಬರದಂತೆ ನಿಗಾವಹಿಸಲು ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಗ್ರಾಮಸ್ಥರು ಆತಂಕಕ್ಕೆ ಒಳಗಾಗಬಾರದು ಎಂದು ಗ್ರಾಮಸ್ಥರ ಮನವೊಲಿಸಿದರು.