ರಾಣಿಬೆನ್ನೂರ: ಇಟಗಿ ಗ್ರಾಮದಲ್ಲಿ ಮದ್ಯದಂಗಡಿ ಆರಂಭಿಸಲು ಮುಂದಾಗಿರುವುದನ್ನು ಖಂಡಿಸಿ, ಮಹಿಳೆಯರು ಬಿರೂರ-ಸಮ್ಮಸಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರವೀಂದ್ರಗೌಡ ಪಾಟೀಲ ಮಾತನಾಡಿ, ಎರಡು ವರ್ಷಗಳ ಹಿಂದೆ ಗ್ರಾಮದಲ್ಲಿನ ಮದ್ಯದ ಅಂಗಡಿಗೆ ಸರಕಾರ ಪರವಾನಗಿ ನೀಡಿತ್ತು. ಆಗಲೇ ನಾವು ಅಧಿಕಾರಿಗಳಿಗೆ ಅದು ನಮ್ಮ ಗ್ರಾಮಕ್ಕೆ ಬೇಡವೆಂದು ತಿಳಿಸಿದ್ದೇವು. ಆದರೂ, ಅವಕಾಶ ಕಲ್ಪಿಸಿದ್ದಾರೆ ಎಂದು ದೂರಿದರು.
ರಾಜಕೀಯ ಕುತಂತ್ರದಿಂದ ಅಬಕಾರಿ ಅಧಿಕಾರಿಗಳು ಮದ್ಯದಂಗಡಿ ನಡೆಸುವುದಕ್ಕೆ ಪರವಾನಗಿ ನೀಡಿರುವುದು ಖೇದಕರ ಸಂಗತಿ. ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳು ಸರ್ಕಾರದ ಆದಾಯ ಮತ್ತು ಗುರಿ ಸಾಧನೆ ಒತ್ತಡಕ್ಕೆ ಮಣಿದು ಪೊಲೀಸರ ಬಂದೋಬಸ್ತ್ನಲ್ಲಿ ಮದ್ಯದಂಗಡಿ ಪ್ರಾರಂಭಿಸಿರುವುದು ಸರಿಯಲ್ಲ. ಇದರಿಂದ ಬಡ ಕುಟುಂಬಗಳು ಬೀದಿಗೆ ಬೀಳುವಂತಾಗುತ್ತದೆ ಎಂದು ಆರೋಪಿಸಿದರು.
ಮನೆಯ ಸಂಸಾರದ ಬಂಡಿ ಸಾಗಿಸಬೇಕಾದ ಗಂಡು ಮಕ್ಕಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಅಷ್ಟೇಯಲ್ಲ ಶಾಲಾ ಕಾಲೇಜು ಮಕ್ಕಳ ಮೇಲೆಯೂ ಇದು ಪರಿಣಾಮ ಬೀರುತ್ತದೆ. ಇದರಿಂದ ನಮ್ಮ ಮಕ್ಕಳೂ ಸಹ ಇಂತಹ ದುಶ್ಚಟಕ್ಕೆ ಬಲಿಯಾಗುತ್ತಾರೆ. ಇದು ಹೀಗೆ ಮುಂದುವರಿದರೆ ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಹಾಲಮ್ಮ ತಿಪ್ಪಣ್ಣನವರ, ತಿರಕವ್ವ ಮಾಳಗಿ, ಗಂಗವ್ವ ಗುಡಿಯವರ, ಕವಿತಾ ಕುರುವತ್ತೇರ, ಅನುಸೂಯಾ ಗುಡಿಯವರ, ಮಾರುತಿ ಗುಡಿಯರ, ಹಾಲೇಶ ಕುರವತ್ತೇರ, ಪ್ರಶಾಂತ ಗುಡಿಯವರ, ಚಿಕ್ಕಪ್ಪ ದೇಶಗುತ್ತಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.