Advertisement

ಬ್ಲಾಸ್ಟಿಂಗ್‌ ಪರೀಕ್ಷೆಗೆ ಗ್ರಾಮಸ್ಥರ ವಿರೋಧ

02:50 PM Dec 28, 2019 | Team Udayavani |

ಜೋಯಿಡಾ: ರಾಮನಗರದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಅರಣ್ಯ ಹಾಗೂ ಪರಿಸರ ಹಾನಿ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವರದಿ ನೀಡುತ್ತೇವೆ ಎಂದು ಸಭೆಯಲ್ಲಿ ಹೇಳಿದ ತಹಶೀಲ್ದಾರರು, ಈಗ ಏಕಾಏಕಿ ಕ್ವಾರಿ ಬ್ಲಾಸ್ಟಿಂಗ್‌ ಟೆಸ್ಟ್‌ ನಡೆಸುತ್ತೇವೆ ಎಂದು ನೋಟಿಸ್‌ ನೀಡಿರುವುದು ಸರಿಯಲ್ಲ. ಇದನ್ನು ವಿರೋಧಿಸುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

Advertisement

ರಾಮನಗರದಲ್ಲಿ ಕಳೆದ 23ರಂದು ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ವಾರಿಗೆ ಸಂಬಂಧಿಸಿದ ಕಂದಾಯ, ಅರಣ್ಯ, ಗಣಿ ಹಾಗೂ ಭೂ ವಿಜ್ಞಾನ, ಪರಿಸರ ಮತ್ತು ಪೊಲೀಸ್‌ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಸೇರಿ ಕ್ವಾರಿ ಪರವಾನಿಗೆ, ಅಕ್ರಮ ಸಕ್ರಮ ಬಗ್ಗೆ ತನಿಖೆ ನಡೆಸಿ, ಪರಿಸರ ಹಾಗೂ ಅಭಯಾರಣ್ಯಕ್ಕೆ ಆಗುತ್ತಿರುವ ಹಾನಿ ಮತ್ತು ಇಲ್ಲಿನ ಜನ ವಸತಿ ಪ್ರದೇಶದ ಮೇಲೆ ಆಗುತ್ತಿರುವ ಹಾನಿ ಕುರಿತು ಸ್ಥಳ ಪರಿಶೀಲಿಸಿ ವರದಿ ನೀಡುವುದಾಗಿ ಹೇಳಿದರು.

ನಂತರ ಕ್ವಾರಿ ಸಕ್ರಮವಾಗಿದ್ದರೆ ಹಾಗೂ ಪರವಾನಗಿ ಪಡೆದುಕೊಂಡಿದ್ದರೆ ಬ್ಲಾಸ್ಟಿಂಗ್‌ ಟೆಸ್ಟ್‌ ಮಾಡಿಸುತ್ತೇವೆ ಎಂದು ಸಭೆಯಲ್ಲಿ ತಹಶೀಲ್ದಾರರು ತಿಳಿಸಿದ್ದರು. ಆದರೆ ಈಗ ಏಕಾಏಕಿ ಡಿ.30 ರಂದು ಕ್ವಾರಿ ಬ್ಲಾಸ್ಟಿಂಗ್‌ ಟೆಸ್ಟ್‌ ಮಾಡಿಸುತ್ತೇವೆ ಎಂದು ನೋಟಿಸ್‌ ಕೊಟ್ಟಿರುವುದು ಸಮಂಜಸವಲ್ಲ. ಇದು ಸಾರ್ವಜನಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ರಾಮನಗರದ ಸಾರ್ವಜನಿಕರು ತಿಳಿಸಿದ್ದಾರೆ.

ಈ ಬ್ಲಾಸ್ಟಿಂಗ್‌ ಟೆಸ್ಟ್‌ಗೆ ಸಾರ್ವಜನಿಕರು ಹಾಗೂ ಗ್ರಾಪಂ ವಿರೋಧಿಸುತ್ತಿದ್ದು, ನಾವು ಈ ಬ್ಲಾಸ್ಟಿಂಗ್‌ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರಮುಖರಾದ ಸಾಗರ ದೇಸಾಯಿ, ಮಲ್ಲಾರ ರಾಣೆ, ಸದಾನಂದ ಮಿರಾಶಿ, ಸುನೀಲ ದೇಸಾಯಿ, ಕೇಶವ ಬಾಮೈಕರ್‌, ಪ್ರಭಾಕರ್‌ ಜಾತ್ರೀಡಕರ್‌, ದಿನೇಶ ನಾಯ್ಕ, ಶಿವಾನಂದ ದೋತ್ರೆ, ಶ್ರೀನಿವಾಸ ನಾಗನೂರ, ವಿಠೊಬಾ ಚೌಧರಿ, ಸ್ವೀಕಾರ ಜೋಗಿ, ನಾರಾಯಣ ಸೋನಾಳಕರ ಇತರರು ತಹಶೀಲ್ದಾರ್‌ ಗೆ ನೀಡಿದ ಮನವಿಯಲ್ಲಿ ಎಚ್ಚರಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next