ಯಳಂದೂರು: ಅನಾಥ ವಧು, ವರರಿಗೆ ಗ್ರಾಮಸ್ಥರೇ ಸೇರಿ ಮದುವೆ ಮಾಡುವ ಮೂಲಕ ಔದಾರ್ಯ ಮೆರೆದಿರುವ ಘಟನೆ ತಾಲೂಕಿನ ಹೊನ್ನೊರು ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಉಪ್ಪಾರಬಡಾವಣೆಯ ಕಾಮದೇವರ ದೇಗುದಲ್ಲಿ ಶುಕ್ರವಾರ ಸಿದ್ದಪ್ಪ ಹಾಗೂ ಶಕುಂತಲಾ ಸತಿಪತಿಗಳಾಗಿ ಸಪ್ತಪದಿ ತುಳಿದರು. ಇವರಿಬ್ಬರೂ ತಮ್ಮ ಬಾಲ್ಯದಲ್ಲೇ ಅಪ್ಪ, ಅಮ್ಮಂದಿರನ್ನು ಕಳೆದುಕೊಂಡಿದ್ದು ಇಬ್ಬರೂ ಪ್ರತ್ಯೇಕ ಮನೆಯಲ್ಲ
ವಾಸವಾಗಿದ್ದರು. ಸಿದ್ದಪ್ಪ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸಿದರೆ, ಶಕುಂತಲಾ ಅದೇ ಗ್ರಾಮದ ಮನೆಯಲ್ಲಿ ತನ್ನ ಸಹೋದರಿಯೊಂದಿಗೆ ವಾಸವಾಗಿದ್ದರು. ಇಬ್ಬರ ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಆದರೆ, ವಿವಾಹ ಮಾಡಿಕೊಳ್ಳಲು ಇವರಿಂದ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಬಡಾವಣೆಯ ಮುಖಂಡರು ಹಾಗೂ ಗ್ರಾಮಸ್ಥರು ಒಂದೆಡೆ ಸೇರಿ ಎಲ್ಲರೂ ಸೇರಿಕೊಂಡು ಮದುವೆ ಮಾಡಲು ನಿರ್ಧಾರ ಮಾಡಿದ್ದರು.
ಅದರಂತೆ, ಶುಕ್ರವಾರ ಕಾಮದೇವರ ದೇಗುಲದಲ್ಲಿ ನಡೆದ ಸರಳ ವಿವಾಹದಲ್ಲಿ ಎಲ್ಲರೂ ಸೇರಿ ಈ ಜೋಡಿಯನ್ನು ಹಸೆಮಣೆಯಲ್ಲಿ ಕೂರಿಸಿ ಧಾರೆ ಎರೆದಿದ್ದಾರೆ. ವಧುವರರಿಗೆ ಬೇಕಾದ ತಾಳಿ, ಸೀರೆ, ಬಟ್ಟೆ ಹಾಗೂ ಮದುವೆಯ ಊಟವನ್ನು ಬಡಿಸಿ ಸಂಭ್ರಮಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ದಪ್ಪ, ನಾವಿಬ್ಬರೂ ಅನಾಥರಾಗಿದ್ದೆವು. ಕೆಲವು ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದೆವು. ಕೂಲಿ ಕೆಲಸ ಮಾಡುವ ನನಗೆ ಸಂಪ್ರದಾಯಬದ್ಧವಾಗಿ ಮದುವೆ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಹಣವೂ ಇರಲಿಲ್ಲ. ಹೀಗಾಗಿ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ನಮ್ಮ ಮದುವೆ ಮಾಡಿಸಿದ್ದಾರೆ. ನಾನು ನನ್ನ ಮದುವೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದು ಸಂತಸ ವ್ಯಕ್ತಡಿಸಿದ್ದಾರೆ.