Advertisement
ಪಲ್ಕಿಟ್ಲ ಸಮಸ್ಯೆ
Related Articles
Advertisement
ಜಿಲ್ಲಾ ಕೇಂದ್ರಕ್ಕೆ ನೇರ ಬಸ್ ವ್ಯವಸ್ಥೆ ಇಲ್ಲ, ಉನ್ನತ ಶಿಕ್ಷಣಕ್ಕೆ ಮತ್ತು ಉದ್ಯೋಗ ನಿಮಿತ್ತ ಮಂಗಳೂರಿಗೆ ಪ್ರಯಾಣಿಸುವವರು ಮೂಡುಬಿದಿರೆಯಾಗಿ ಸುತ್ತು ಬಳಸಿ ಹೋಗುವುದು ಅನಿವಾರ್ಯ. ಖಾಸಗಿ ಬಸ್ ಪರ್ಮಿಟ್ ಇದ್ದರೂ ಪ್ರಯೋಜನವಿಲ್ಲ, ಇಲ್ಲಿಗೆ ಸರಕಾರಿ ಬಸ್ ಸೌಕರ್ಯ ಒದಗಿಸಬೇಕೆಂಬ ಹಲವು ದಶಕಗಳ ಆಗ್ರಹ ಈಡೇರಿಲ್ಲ.
ಹೆಚ್ಚಿನ ರಸ್ತೆಗಳಿಗೆ ಕಾಯಕಲ್ಪ ನೀಡಲಾಗಿದ್ದು ಸದ್ಯ 1.17 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ನಡೆಸಲು ಟೆಂಡರ್ ಆಗಿದೆ.
ಆರೋಗ್ಯ
ತೆಂಕಮಿಜಾರು ಗ್ರಾಮದವರಿಗೆ ಹತ್ತಿರದ ಸರಕಾರಿ ಆಸ್ಪತ್ರೆ ಎಂದರೆ ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರ. ಅದಕ್ಕೆ ಉತ್ತರದ ಸಂಪಿಗೆಗೆ ಬಂದು ಮತ್ತೆ ಪಶ್ಚಿಮದಲ್ಲಿರುವ ಕಲ್ಲಮುಂಡ್ಕೂರು ಕಡೆಗೆ ಬರಲು ಎರಡು ವಾಹನ ಹಿಡಿಯಬೇಕು. ಈ ಸುತ್ತಾಟ ತಪ್ಪಿಸಲು ತೆಂಕಮಿಜಾರಿನ ಸಂತೆಕಟ್ಟೆಯಲ್ಲಿ ಒಂದು ನಿವೇಶನ ಗೊತ್ತುಪಡಿಸಲಾಗಿದೆ. ಆದರೆ ಅಸಲಿ ಸಮಸ್ಯೆ ಏನೆಂದರೆ ಅಲ್ಲಿ 30,000 ಜನಸಂಖ್ಯೆ ಇರಬೇಕಂತೆ!
ಸಿಬಂದಿ ಕೊರತೆ
ತೆಂಕ ಮಿಜಾರು ಗ್ರಾಮದ ನೀರ್ಕೆರೆಯಲ್ಲಿರುವ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕಾರ್ಯದರ್ಶಿ, ದ್ವಿ.ದ. ಸಹಾಯಕರ ಹುದ್ದೆ ಗಳು ಖಾಲಿ ಇವೆ. ಪೂರ್ಣಕಾಲಿಕ ಪಿಡಿಒ ಬೇಕಾಗಿದ್ದಾರೆ. ಸದ್ಯ ಪಾಲಡ್ಕದ ಪಿಡಿಒ ಇಲ್ಲಿ ಪ್ರಭಾರಿ.
ವಿಶೇಷತೆ
ಕೃಷಿ ಪ್ರಧಾನ ಗ್ರಾಮವಿದು. ನಂದಿನಿ ನದಿ ಈ ಗ್ರಾಮದ ಜೀವಾಳ. ಕುಡುಬಿ ಸಮುದಾಯ ಬಹುಸಂಖ್ಯಾಕರು (6,500), ಇತರರು ಸೇರಿ ಸುಮಾರು 8,000 ಜನಸಂಖ್ಯೆ ಇದೆ. ಕುಡುಬಿಯವರ ಹೋಳಿ ಅದರೊಂದಿಗೆ ಹಾಸುಹೊಕ್ಕಾದ ಗುಮ್ಟೆ, ಕೋಲಾಟಾದಿ ಧಾರ್ಮಿಕ ಕಲೆಗಳೊಂದಿಗೆ ಯಕ್ಷಗಾನದಲ್ಲೂ ಸಾಕಷ್ಟು ಮಂದಿ ಸಾಧನೆ ತೋರಿದ್ದಾರೆ. ನೀರ್ಕೆರೆ ಜಾರಂದಾಯ ದೈವಸ್ಥಾನ ಈ ಗ್ರಾಮದ ಮಾತ್ರವಲ್ಲ ಆಸುಪಾಸಿನ ಗ್ರಾಮಗಳ ಕಾರಣಿಕದ ನಂಬಿಕೆಯ ತಾಣ.
ನೀರ್ಕೆರೆ ಮತ್ತು ನೀರು
ನೀರಿರುವ ಕೆರೆ ನೀರ್ಕೆರೆ. ಇಲ್ಲಿನ ನೀರ್‌ಕೆರೆ, ಪೂಮಾವರ ಕಟ್ಟ ಸಹಿತ ಹಲವು ಜಲನಿಧಿಯ ತಾಣಗಳಿಗೆ ಕಾಯಕಲ್ಪ ನೀಡಬೇಕಾಗಿದೆ. ಜಲಜೀವನ ಮಿಷನ್ ಸಮರ್ಪಕವಾಗಿ ಕಾರ್ಯಗತವಾಗುತ್ತಿಲ್ಲ. ಪೈಪ್ ಲೈನ್‌ಗಳು ಒಡೆದುಹೋಗುತ್ತಿವೆ. ಎಷ್ಟೋ ಕಡೆ ದುರಸ್ತಿ ಮಾಡದೆ ಬಿಡಲಾಗಿದೆ ಇಲ್ಲವೇ ಅರ್ಧಂಬರ್ಧ ತೇಪೆ ಹಾಕಲಾಗಿದೆ. ನೀರ್ಕೆರೆ ಸೇತುವೆ ರಚನೆಯಾಗಿ ನಾಲ್ಕು ದಶಕ ಕಳೆದಿರಬಹುದು. ಈ ಸೇತುವೆ ದುರ್ಬಲವಾಗಿರುವ ಸಂಶಯ ಜನರಿಗೆ ಕಾಡುತ್ತಿದೆ. ಈ ಸೇತುವೆಯ ದೃಢತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ.
ತೆಂಕ ಮಿಜಾರು ಗ್ರಾಮದಲ್ಲಿ ಜನಿಸಿ ಸಾಧಕರೆನಿಸಿದವರು
ಕನ್ನಡದಲ್ಲಿ ಮೊತ್ತ ಮೊದಲು “ಕಾಮಶಾಸ್ತ್ರ’ದ ಬಗ್ಗೆ ಪುಸ್ತಕಗಳನ್ನು ಬರೆದ “ಧನ್ವಂತರಿ’ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ| ಮಳಿಯೆ ಗೋಪಾಲಕೃಷ್ಣ ರಾವ್, ವಿಧಾನ ಪರಿಷತ್ ಸದಸ್ಯ, ಸ್ವಾತಂತ್ರ್ಯ ಹೋರಾಟಗಾರ ಮಳಿಯೆ ಗೋವರ್ಧನ ರಾವ್, ಹುಬ್ಬಳ್ಳಿ ಸಾಹಿತ್ಯ ಭಂಡಾರ ಮಂಜನಬೈಲು ಗೋವಿಂದ ರಾವ್, ಮೊತ್ತ ಮೊದಲು ಕಂಬಳ, ನಾಗಮಂಡಲ ಆಯೋಜಿದ ಮಿಜಾರುಗುತ್ತು ಆನಂದ ಆಳ್ವ, ಮೂಡುಬಿದಿರೆಯನ್ನು ಶಿಕ್ಷಣ ಕಾಶಿಯಾಗಿಸಿದ ಡಾ| ಮೋಹನ ಆಳ್ವ, ಪ್ರಧಾನಿ ಇಂದಿರಾ ಗಾಂಧಿಗೆ ಆರ್ಥಿಕ ಸಲಹೆಗಾರರಾಗಿದ್ದ ಮುಂಡಾಡಿ ಶ್ರೀನಿವಾಸ ರಾವ್, ರಥಶಿಲ್ಪಿ ಅಶ್ವತ್ಥಪುರ ಬಾಬುರಾಯ ಆಚಾರ್ಯ, ಮೇರು ಸಾಹಿತಿ ಜನಾರ್ದನ ಗುರ್ಕಾರ್, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಶ್ರೀಪತಿ ಮಂಜನಬೈಲು, ಯಕ್ಷಗಾನದ ಮೇರು ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ, ಹಾಸ್ಯಗಾರ ಮಿಜಾರು ತಿಮ್ಮಪ್ಪ, ಕಂಬಳ ಕೋಣದ ಮಿಂಚಿನ ಓಟಗಾರ ಅಶ್ವತ್ಥಪುರ ಮಿಜಾರು ಶ್ರೀನಿವಾಸ ಗೌಡ ಮೊದಲಾದವರು ಊರಿಗೆ ಹೆಸರು ತಂದಿತ್ತವರು.
ಶಿಕ್ಷಣ ಸರಕಾರಿ ಪ.ಪೂ. ಕಾಲೇಜಿಗೆ ಬೇಡಿಕೆ
ನೀರ್ಕೆರೆಯಲ್ಲಿ ಹೈಸ್ಕೂಲು ವರೆಗೆ ಸರಕಾರಿ ಶಿಕ್ಷಣಾಲಯವಿದೆ. ಉತ್ತಮ ಫಲಿತಾಂಶವಿದೆ. ಹಾಗಾಗಿ ದೂರದ ಪುತ್ತಿಗೆಯಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹೈಸ್ಕೂಲಿಗೆ ಹೆಚ್ಚುವರಿ ಕೊಠಡಿಗಳ ಆವಶ್ಯಕತೆ ಇದೆ. ಇದರೊಂದಿಗೆ ಇಲ್ಲೊಂದು ಸರಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಬೇಡಿಕೆ ಇದೆ. ಜಾಗವೂ ಇದೆ. ಈ ಬಗ್ಗೆ ಪ್ರಯತ್ನಿಸಬೇಕಾಗಿದೆ. ರಾ.ಹೆ. 169 ಹಾದು ಹೋಗುವ ಮಿಜಾರು ಬಂಗಬೆಟ್ಟಿನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಎಲ್‌ಕೆಜಿಯಿಂದ ಪಿಯು ವರೆಗೆ) ಇದೆ. ಆದರೆ ನೀರ್ಕೆರೆ, ವಂಟಿಮಾರು, ಕೊಂಪದವು, ಮುಚ್ಚಾರು ಕಡೆಗಳಿಂದ ಬರುವಾಗ ಕಾಡಿನ ನಡುವೆ ಹಾದಿ ಇದೆ. ಬಸ್ ಸೌಕರ್ಯ ಇಲ್ಲ.
ಉತ್ತಮ ಪಂಚಾಯತ್ ರೂಪಿಸುವ ಕನಸು: ಸಾಕಷ್ಟು ಅಭಿವೃದ್ಧಿ ಆಗುತ್ತ ಇದೆ. ಶಾಸಕರ ಅನುದಾನ, ಮಾರ್ಗದರ್ಶನ ನಮಗಿದೆ. ಎಲ್ಲ ಸದಸ್ಯರ ಸಹಮತದೊಂದಿಗೆ ರಸ್ತೆ, ನೀರು ಪೂರೈಕೆ, ನಿವೇಶನ ಹಂಚಿಕೆ ಒಳ್ಳೆಯ ರೀತಿ ನಡೆಸುತ್ತ ಉತ್ತಮ ಪಂಚಾಯತ್ ರೂಪಿಸುವ ಕನಸಿದೆ. ನಮಗೆ ಪೂರ್ಣಕಾಲಿಕ ಪಿಡಿಒ ಬೇಕು. ಖಾಲಿ ಬಿದ್ದಿರುವ ಕಾರ್ಯದರ್ಶಿ, ಗುಮಾಸ್ತರ ಹುದ್ದೆ ಭರ್ತಿ ಆಗಬೇಕಾಗಿದೆ. –ರುಕ್ಮಿಣಿ, ಅಧ್ಯಕ್ಷರು, ತೆಂಕಮಿಜಾರು ಗ್ರಾ.ಪಂ.
-ಧನಂಜಯ ಮೂಡುಬಿದಿರೆ