Advertisement

ನೀರು ಪೂರೈಕೆ ಯೋಜನೆಗೆ ಗ್ರಾಮಸ್ಥರ ಅಡ್ಡಿ

12:14 PM Sep 29, 2019 | Team Udayavani |

ಕೊಪ್ಪಳ: ನಾರಾಯಣಪುರ ಜಲಾಶಯದಿಂದ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿಗೆ ಈ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿ ಯಲ್ಲಿ ಜಾರಿಯಾದ 700 ಕೋಟಿ ರೂ. ಮೊತ್ತದ ಬೃಹತ್‌ ಕುಡಿಯುವ ನೀರಿನ ಯೋಜನೆಗೆ ಜಿಲ್ಲೆಯ ಮನ್ನೇರಾಳ ಗ್ರಾಮಸ್ಥರು ತಕರಾರು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಶಾಸಕ ಅಮರೇಗೌಡ ಬಯ್ನಾಪೂರ ಅವರು ಮೌನವಹಿಸಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

Advertisement

ಹೌದು, ಜನರಿಗಾಗಿಯೇ ಜಾರಿ ಮಾಡಿರುವ ಬೃಹತ್‌ ಮೊತ್ತದ ಯೋಜನೆಗೆ ಅಡ್ಡಿಯಾಗುತ್ತಿರುವುದು ಪ್ರಜ್ಞಾವಂತ ಸಮುದಾಯ ತಲೆ ತಗ್ಗಿಸುವಂತಾಗುತ್ತಿದೆ. ಕೆಲವೇ ದಿನಗಳ ಹಿಂದಷ್ಟೇ ಹುನಗುಂದ ಭಾಗದ ರೈತರು ಪೈಪ್‌ಲೈನ್‌ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಕಾರಣಕ್ಕೆ ಕಾಮಗಾರಿ ಸ್ಥಗಿತವಾಗಿತ್ತು. ಸ್ವತಃ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವಾಸ್ತವ ಸ್ಥಿತಿ ವರದಿ ಮಾಡಿದ್ದರು. ಈಗ ಕುಷ್ಟಗಿ ತಾಲೂಕಿನ ಮನ್ನೇರಾಳ ಗ್ರಾಮಸ್ಥರೇ ಯೋಜನೆಯ ಕಾಮಗಾರಿ ನಡೆಯುದಂತೆ ತಕರಾರು ಮಾಡುತ್ತಿರುವುದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ಈ ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಅವರು ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕಿನ ಕುಡಿಯುವ ನೀರಿನ ಗಂಭೀರತೆ ಅರಿತು ನಾರಾಯಣಪುರ ಜಲಾಶಯದಿಂದ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿ ದೊಡ್ಡ ಮೊತ್ತದ ಯೋಜನೆಯನ್ನು ಮಂಜೂರು ಮಾಡಿಸಿದ್ದರು. ನಿಜಕ್ಕೂ ಈ ಯೋಜನೆ ಎರಡೂ ತಾಲೂಕಿನ ಜನರಿಗೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ನೀಗಿಸಲಿದೆ. ಆದರೆ ಕಾಮಗಾರಿಗೆ ಹಲವು ಅಡೆತಡೆ ಕಾಡಲಾರಂಭಿಸಿವೆ. ಮನ್ನೇರಾಳ ಗ್ರಾಮದಲ್ಲಿ ಎಲ್‌ಎಂಡ್‌ಟಿ ಕಂಪನಿ ಪೈಪ್‌ಲೈನ್‌ ಕಾಮಗಾರಿ ನಡೆಸುತ್ತಿದೆ.

ಆದರೆ ಇಲ್ಲಿನ ಜನರು ಸೇರಿದಂತೆ ಗುತ್ತಿಗೆದಾರರು ಸ್ಥಳೀಯ ವಾಹನಗಳನ್ನು ಮತ್ತು ಜನರನ್ನು ಕಾಮಗಾರಿಗೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಸ್ಥಳೀಯ ದೇವಸ್ಥಾನಕ್ಕೆ ದೇಣಿಗೆ ಕೊಡಬೇಕು ಎನ್ನುವ ಬೇಡಿಕೆಯೂ ಇದೆಯಂತೆ. ನೀವು ಕೆಲಸಕ್ಕೆ ತೆಗೆದುಕೊಳ್ಳದೇ ಇದ್ದರೆ ನಾವು ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ ಕಾಮಗಾರಿಗೆ ಮತ್ತೆ ವಿಘ್ನ ಎದುರಾಗುತ್ತಿವೆ. ಪೊಲೀಸರು ಸೇರಿ ಅಧಿಕಾರಿಗಳು ಏಷ್ಟೇ ತಿಳಿವಳಿಕೆ ನೀಡಿದರೂ ಜನತೆ ಹಿಂದೆ ಸರಿಯುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದರಲ್ಲಿ ರಾಜಕೀಯ ಲಾಭಿಯೂ ಜೋರಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಸ್ಥಳೀಯ ಜನಪ್ರತಿನಿಧಿ ಗಳು ಗುತ್ತಿಗೆದಾರರ ಮೂಲಕ ಈ ಆಟ ಆಡುತ್ತಿದ್ದಾರೆ ಎನ್ನುವ ಮಾಹಿತಿ ಕೇಳಿ ಬಂದಿವೆ. ರಾಜಕಾರಣದ ಆಟ ನಡೆಯದೇ ಜನರು ಸುಮ್ಮನೆ ತಕರಾರು ಮಾಡಲ್ಲ. ಗುತ್ತಿಗೆದಾರರು ಅಡ್ಡಿಪಡಿಸಲ್ಲ. ಆದರೆ ನಮ್ಮ ವಾಹನಗಳನ್ನೇ ಗುತ್ತಿಗೆ ಪಡೆಯಿರಿ ಎನ್ನುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಮೂಡಿದೆ.

Advertisement

ಶಾಸಕ ಬಯ್ನಾಪೂರ ಮೌನ?: ವಿಚಿತ್ರವೆಂದರೆ 700 ಕೋಟಿ ರೂ. ಯೋಜನೆ ನಿಜಕ್ಕೂ ಎರಡೂ ತಾಲೂಕಿನ ಜನರಿಗೆ ವರದಾನವಾಗಿದೆ. ಶಾಸಕ ಅಮರೇಗೌಡ ಬಯ್ನಾಪೂರ ಅವರಿಗೆ ಇದು ಗೊತ್ತಿದ್ದರೂ ಪದೇ ಪದೆ ಕಾಮಗಾರಿಗೆ ತಕರಾರು ಮಾಡುತ್ತಿರುವುದು ಗಮನಕ್ಕೆ ಬಂದಿದ್ದರೂ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಶಾಸಕ ಬಯ್ನಾಪೂರ ಅವರ ಮೌನದ ನಡೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದರ ಹಿಂದೆ ಕಮಿಷನ್‌ ಆಟ ನಡೆದಿದೆ ಎನ್ನುವ ಗುಮಾನಿಗಳು ಜೋರಾಗಿ ಕೇಳಿ ಬಂದಿವೆ.

ಜನರ ವೈಖರಿಗೆ ಜಿಲ್ಲಾಡಳಿತ ಬೇಸರ: ಬೃಹತ್‌ ಕಾಮಗಾರಿಗೆ ಪ್ರತಿಯೊಂದಕ್ಕೂ ಅಡ್ಡಿಯಾದರೆ ನಾವು ಅಂದುಕೊಂಡಂತಹ ಕಾಲಮಿತಿಯಲ್ಲಿ ಕುಡಿಯುವ ನೀರು ಪೂರೈಸಲು ಆಗುವುದಿಲ್ಲ ಎಂದು ಜಿಲ್ಲಾಡಳಿತವೂ ಬೇಸರ ವ್ಯಕ್ತಪಡಿಸಿದೆ. ಕಾಮಗಾರಿ ನಡೆಯಲು ಬಿಡಬೇಕು. ಪ್ರತಿಯೊಂದಕ್ಕೂ ತಕರಾರು ಮಾಡಿದರೆ ಹೇಗೆ? ಜನರು ಮೊದಲೇ ಕುಡಿಯುವ ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಬೇಸಿಗೆ ಸಮಯದಲ್ಲಿ ಜನತೆಗೆ ನಾವು ಹೇಗೆ ನೀರು ಪೂರೈಸಬೇಕು ಎನ್ನುವ ಚಿಂತೆಯಲ್ಲಿ ಮುಳುಗಿದೆ. ಒಟ್ಟಿನಲ್ಲಿ ಬಹೃತ್‌ ಕಾಮಗಾರಿ ಹಿಂದೆ ರಾಜಕಾರಣದ ಪ್ರಭಾವ ಇದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಪದೇ ಪದೆ ತಕರಾರು ಮಾಡುವುದು. ಸ್ಥಳೀಯ ವಾಹನಗಳಿಗೆ, ಗುತ್ತಿಗೆದಾರರಿಗೆ ಕೆಲಸ ಕೊಡುವಂತೆ ಪಟ್ಟು ಹಿಡಿದು ಅಡ್ಡಿಪಡಿಸುತ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ. ಈ ಬಗ್ಗೆ ಶಾಸಕರು ಗಮನ ಹರಿಸಬೇಕಿದೆ.

ಬೃಹತ್‌ ಕಾಮಗಾರಿಗೆ ಪದೇ ಪದೆ ಈ ರೀತಿ ಅಡ್ಡಿಯುಂಟು ಮಾಡಿದರೆ ನಾವು ಹೇಗೆ ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸಬೇಕು. ಕೊಪ್ಪಳ-ಯಲಬುರ್ಗಾ ತಾಲೂಕಿನ ಜನರಿಗಾಗಿ ಈ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕು. ಮನ್ನೇರಾಳದಲ್ಲಿ ತಕರಾರು ಮಾಡುತ್ತಿದ್ದಾರೆ. ಕಾಮಗಾರಿಗೆ ಅಡ್ಡಿಪಡಿಸುವ ವ್ಯಕ್ತಿಗಳ ಮೇಲೆ ಕೇಸ್‌ ದಾಖಲಿಸುವಂತೆ ಸೂಚನೆ ನೀಡಿದ್ದೇನೆ. –ಪಿ. ಸುನೀಲ್‌ ಕುಮಾರ, ಜಿಲ್ಲಾಧಿಕಾರಿ

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next