Advertisement

ಶೀಘ್ರ ಡಾಮರು ಕಾಮಗಾರಿಗಾಗಿ ಗ್ರಾಮಸ್ಥರ‌ ಆಗ್ರಹ

10:10 PM Sep 30, 2020 | mahesh |

ಬೆಳ್ಮಣ್‌: ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ರಸ್ತೆಯೊಂದು ಸೂಡಾ ಗ್ರಾಮದಲ್ಲಿದ್ದು ಅರೆಬರೆ ಕಾಮಗಾರಿಯಿಂದ ನಿರ್ಮಾಣಗೊಂಡ ಪರಿಣಾಮವಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸುವ ಅನಿವಾರ್ಯ ಸೃಷ್ಟಿಯಾಗಿದೆ.

Advertisement

ಸೂಡ ಭಗತ್‌ ಸಿಂಗ್‌ ರಸ್ತೆಯ ಅವ್ಯವಸ್ಥೆ ಇಲ್ಲಿನ ಜನರ ನಿದ್ದೆಗೆಡಿಸಿದ್ದು ಈ ಭಾಗದ ಜನರು ಸಂಕಟ ಅನುಭವಿಸುವಂತಾಗಿದೆ. ಆರು ತಿಂಗಳ ಹಿಂದೆ ಡಾಮರು ಕಾಮಗಾರಿಯ ಭಾಗ್ಯ ಕಂಡ ಬೆಳ್ಮಣ್‌ ಗ್ರಾ.ಪಂ. ವ್ಯಾಪ್ತಿಯ ಈ ಸೂಡ ಭಗತ್‌ ಸಿಂಗ್‌ ರಸ್ತೆ ತೀರ ಹದಗೆಟ್ಟಿದ್ದು ರಸ್ತೆಗೆ ತೇಪೆ ಹಾಕುವ ಕಾಮಗಾರಿ ನಡೆದಿದೆ. ಇದೀಗ ತೇಪೆ ಹಾಕಲಾದ ರಸ್ತೆಯೂ ಹೊಂಡ ಗುಂಡಿಗಳಿಂದ ಕೂಡಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೊಂಡದಿಂದ ಕೂಡಿದ ರಸ್ತೆಯಲ್ಲಿ ಸಂಚರಿಸುವುದು ಅಸಾಧ್ಯವಾಗಿದ್ದು ಇದರಿಂದ ವಾಹನ ಸವಾರರು ಮಾತ್ರವಲ್ಲದೆ ಪಾದಚಾರಿಗಳೂ ಸಂಕಟ ಅನುಭವಿಸುವಂತಾಗಿದೆ.

ಘನ ವಾಹನಗಳಿಂದಾಗಿ ವಾಹನ ಸವಾರಿಗೆ ಸಂಚಕಾರ
ಸೂಡ ಹಾಗೂ ನಂದಳಿಕೆ ಭಾಗದಲ್ಲಿ ಸಾಕಷ್ಟು ಕಲ್ಲು ಕೋರೆ ಹಾಗೂ ಕ್ರಷರ್‌ ಇರುವುದರಿಂದ ನಿತ್ಯ ಟನ್‌ಗಟ್ಟಲೇ ಲೋಡ್‌ ತುಂಬಿದ ಲಾರಿ, ಟಿಪ್ಪರ್‌ಗಳು ಮಣಿಪಾಲ, ಶಿರ್ವ, ಉಡುಪಿ ಭಾಗವನ್ನು ಸೇರಲು ಇದು ಹತ್ತಿರದ ರಸ್ತೆಯಾಗಿದ್ದರಿಂದ ನಿತ್ಯ ನೂರಾರು ವಾಹನಗಳ ಓಡಾಟಕ್ಕೆ ರಸ್ತೆ ಸಂಪೂರ್ಣ ಕೆಟ್ಟುಹೋಗಿದೆ. ಈ ಘನ ವಾಹನಗಳ ನಿರಂತರ ಸಂಚಾರ ಇತರ ವಾಹನ ಸವಾರರರಿಗೆ ಸಂಚಕಾರ ತಂದಿದೆ.

ಕಾಂಕ್ರೀಟ್‌ ಕಾಮಗಾರಿಯಿಂದಲೂ ನೆಮ್ಮದಿ ಇಲ್ಲ
ಇತ್ತೀಚೆಗೆ ಸುಮಾರು 200 ಮೀ. ಉದ್ದದ ರಸ್ತೆಯೂ ಕಾಂಕ್ರೀಟ್‌ ಕಾಮಗಾರಿಯಾದರೂ ರಸ್ತೆಯ ಎರಡೂ ಬದಿಯಲ್ಲಿ ಮಣ್ಣು ಹಾಕದ ಪರಿಣಾಮ ವಾಹನಗಳು ಎದುರಾಗುವ ಸಂದರ್ಭ ಇಕ್ಕಟ್ಟಿನ ಸ್ಥಿತಿ ಉಂಟಾಗಿದೆ. ಕಾಂಕ್ರೀಟ್‌ ರಸ್ತೆ ಕೊನೆಯಾಗುವ ವರೆಗೆ ಟಿಪ್ಪರ್‌ಗಳು ವೇಗವಾಗಿ ಓಡಾಟವನ್ನು ನಡೆಸುತ್ತಿದ್ದು ಇದರಿಂದ ಅನಾಹುತ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಇತ್ತೀಚೆಗೆ ರಸ್ತೆಯ ಬದಿಯಲ್ಲಿದ್ದ ದನವೊಂದಕ್ಕೆ ಟಿಪ್ಪರ್‌ ಢಿಕ್ಕಿ ಹೊಡೆದ ಪರಿಣಾಮ ದನ ಸತ್ತುಹೋಗಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ರಿಕ್ಷಾ ಚಾಲಕರ ಹಿಂದೇಟು: ಕೃಷಿಕರು, ಹೈನುಗಾರರಿಗೆ ತೊಂದರೆ
ರಸ್ತೆಯ ಸಮಸ್ಯೆಯಿಂದ ಗ್ರಾಮೀಣ ಭಾಗದ ಈ ರಸ್ತೆಯಲ್ಲಿ ರಿಕ್ಷಾ ಚಾಲಕರು ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ರಸ್ತೆ ಪದೇ ಅರೆಬರೆ ಕಾಮಗಾರಿಯಿಂದ ಮುಚ್ಚಲಾಗುತ್ತಿದ್ದು ಈ ಭಾಗದ ಕೃಷಿಕರು ಹಾಗೂ ಹೈನುಗಾರರು 60 ರೂ. ಬಾಡಿಗೆಯ ಬದಲಿಗೆ ಸುಮಾರು 7 ಕಿ.ಮೀ. ಸುತ್ತಿ ಬಳಸಿ ರಿಕ್ಷಾದಲ್ಲಿ ಬಂದು 200 ರೂ.ಗೂ ಹೆಚ್ಚಿನ ಬಾಡಿಗೆ ಹಣವನ್ನು ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ಹಲವು ವರ್ಷಗಳಿಂದ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಸೂಡ ಭಗತ್‌ ಸಿಂಗ್‌ ರಸ್ತೆಯಿಂದಾಗಿ ಈ ಭಾಗದ ಜನರು ಜನಪ್ರತಿನಿಧಿ ಗಳಿಗೆ ಹಿಡಿ ಶಾಪ ಹಾಕುವಂತಾಗಿದೆ. ಆದಷ್ಟು ಬೇಗ ಸಂಪೂರ್ಣ ರಸ್ತೆಯಲ್ಲಿ ಡಾಮರು ಕಾಮಗಾರಿ ಕೈಗೊಂಡು ಈ ಭಾಗದ ಜನರ ಸಮಸ್ಯೆಗೆ ಮುಕ್ತಿ ಕರುಣಿಸುವಲ್ಲಿ ಶಾಸಕರ ಸಹಿತ ಜನಪ್ರತಿನಿ ಧಿಗಳು ಪ್ರಯತ್ನಿಸಬೇಕಾಗಿದೆ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

Advertisement

ಶೀಘ್ರ ಸರಿಪಡಿಸಿ
ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಈ ರಸ್ತೆಯ ದುರವಸ್ಥೆಯನ್ನು ಸಂಬಂಧಪಟ್ಟವರು ಕೂಡಲೇ ಸರಿಪಡಿಸಿ.- ಗಣೇಶ ಸೂಡಾ, ಗ್ರಾಮಸ್ಥ

ಶೀಘ್ರ ಕ್ರಮ
ಈ ರಸ್ತೆಯ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸಲಾಗುವುದು.
-ಪ್ರಕಾಶ್‌, ಪಿಡಿಒ, ಬೆಳ್ಮಣ್‌ ಗ್ರಾ. ಪಂ.

Advertisement

Udayavani is now on Telegram. Click here to join our channel and stay updated with the latest news.

Next