ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ತುತ್ತ ತುದಿಯಲ್ಲಿರುವ ಕಲ್ಮಕಾರು ಭಾಗದಲ್ಲಿ ಬಿಎಸ್ಸೆನೆಲ್ ಮೊಬೈಲ್ ನೆಟ್ ವರ್ಕ್ ಸರಿಯಾಗಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಆ ಭಾಗಕ್ಕೆ ತೆರಳಿದ್ದ ನಿಗಮದ ಅಧಿಕಾರಿಗಳಿಗೆ ಘೇರಾವ್ ಹಾಕಿದ ಘಟನೆ ಶನಿವಾರ ನಡೆದಿದೆ.
ಮೊಬೈಲ್ ಸಮಸ್ಯೆ ಕುರಿತಂತೆ ಕಲ್ಮಕಾರು ಟವರ್ ಇರುವ ಪ್ರದೇಶಕ್ಕೆ ಬಿಎಸ್ಸೆನೆಲ್ ಕಚೇರಿಯ ವಿಭಾಗೀಯ ಅಭಿಯಂತರ ದಿವಾಕರ ರಾವ್ ಹಾಗೂ ಎಸ್‌ಡಿಇ ರಾಮಕೃಷ್ಣ ಭಟ್ ಸಿಬಂದಿ ಜತೆ ಶನಿವಾರ ತೆರಳಿದ್ದರು. ಅಧಿಕಾರಿಗಳು ಗ್ರಾಮಕ್ಕೆ ಬಂದ ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ, ಅಧಿಕಾರಿಗಳನ್ನು ಸುತ್ತುವರೆದರು. ಇಲ್ಲಿನ ಮೊಬೈಲ್ ಸಿಗ್ನಲ್ ಸಮಸ್ಯೆಯನ್ನೇಕೆ ನಿವಾರಿಸುತ್ತಿಲ್ಲ? ಮನವಿಗೆ ಸ್ಪಂದಿಸುತ್ತಿಲ್ಲವೇಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾ.ಪಂ. ಸದಸ್ಯ ಉದಯ ಕೊಪ್ಪಡ್ಕ, ದೇವಜನ ಹರ್ಷಕುಮಾರ ಸ್ಥಳಕ್ಕೆ ಬಂದು, ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಇಲ್ಲಿ ಯಾವಾಗಲೂ ಸಿಗ್ನಲ್ ಸರಿ ಇರುವುದಿಲ್ಲ. ಕರೆ ಮಾಡಿದರೆ, ವಾರದಲ್ಲಿ ಬಂದು ಸರಿ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದುವರೆಗೆ ಪರಿಹಾರ ಕಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಸಮಸ್ಯೆ ಇತ್ಯರ್ಥಪಡಿಸದೆ ತೆರಳಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ತಾಂತ್ರಿಕ ತೊಂದರೆ ಇರುವ ಕಾರಣ ಸಮಸ್ಯೆ ನಿವಾರಣೆಯಾಗಿಲ್ಲ. ಶೀಘ್ರ ಸರಿಪಡಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದರು. ಇದರಿಂದ ತೃಪ್ತರಾಗದ ಗ್ರಾಮಸ್ಥರು, ಸಮಸ್ಯೆ ಪರಿಹರಿಸದೆ ಇಲ್ಲಿಂದ ತೆರಳಲು ಬಿಡುವುದಿಲ್ಲ ಎಂಬ ಪಟ್ಟು ಹಿಡಿದರು. ಆಗ ಅಧಿಕಾರಿಗಳು ಮಂಗಳೂರು ಕಚೇರಿಯ ಡಿಜಿಎಂ ಅವರನ್ನು ದೂರವಾಣಿ ಮೂಲಕ ಸಂಪ ರ್ಕಿಸಿದರು. ತಾ.ಪಂ. ಸದಸ್ಯ ಉದಯ್ ಅವರೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುತ್ತೇವೆ. ದಿಗ್ಬಂಧನ ಕೈಬಿಡಿ ಎಂದು ಮನವಿ ಮಾಡಿದರು. ಗ್ರಾಮಸ್ಥರು ಒಪ್ಪದಿದ್ದಾಗ ಖಾರವಾಗಿ ಮಾತನಾಡಿದ ಅಧಿಕಾರಿ, ಬಿಡದಿದ್ದರೆ ಸ್ಥಳಕ್ಕೆ ಪೊಲೀಸರನ್ನು ಕಳುಹಿಸುವುದಾಗಿ ಹೇಳಿದರು.
ಇದರಿಂದ ಸಿಟ್ಟಾದ ಉದಯ ಕುಮಾರ್, ಪೊಲೀಸರನ್ನು ಕರೆಯಿಸಿ, ನೋಡೋಣ ಎಂದು ಸವಾಲು ಹಾಕಿದರು. ಗ್ರಾಮಸ್ಥರ ಒಡಗೂಡಿ, ಅಧಿಕಾರಿಗಳು ಸ್ಥಳ ಬಿಟ್ಟು ಹೋಗದಂತೆ ನೋಡಿಕೊಂಡರು. ಸಂಜೆ ವೇಳೆಗೆ ಅಧಿಕಾರಿಗಳು, ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಬಳಿಕ ದಿಗ್ಬಂಧನ ಕೈಬಿಡಲಾಯಿತು.
ಇತ್ತೀಚೆಗೆ ಟವರ್ ಸಮಸ್ಯೆ ಪರಿಹಾರ ಕಾಣದೇ ಇದ್ದಾಗ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಗೆ ಕರೆ ಮಾಡಿ, ಮಾಹಿತಿ ನೀಡಲಾಗಿತ್ತು. ಸಚಿವರ ಸೂಚನೆಯಂತೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು. ಬೆಳಗ್ಗೆ 11ರಿಂದ ಸಂಜೆ 3 ಗಂಟೆ ತನಕ ಅಧಿಕಾರಿಗಳಿಗೆ ದಿಗ್ಬಂಧನ ಹಾಕಲಾಗಿತ್ತು. ಗೋಪಾಲಕೃಷ್ಣ ಕೆ.ಆರ್., ಚಂದ್ರಶೇಖರ ಕೊಪ್ಪಡ್ಕ, ಸತೀಶ್ ಕೊಮ್ಮೆಮನೆ, ಚಲನ್ ಕೊಪ್ಪಡ್ಕ ಸಹಿತ ನೂರಾರು ಮಂದಿ ಸ್ಥಳದಲ್ಲಿದ್ದರು.
ಗ್ರಾಮೀಣ ಭಾಗವಾದ ಕಲ್ಮಕಾರಿನಲ್ಲಿ ಯಾವುದೇ ಮೊಬೈಲ್ ಸಂಪರ್ಕ ಇರಲಿಲ್ಲ. ಸ್ಥಳೀಯರು ನಿರಂತರ ಹೋರಾಟ ನಡೆಸಿದ ಪರಿಣಾಮ ಮೊಬೈಲ್ ಟವರ್ ಮಂಜೂರಾಗಿ, ಒಂದೂ ವರೆ ವರ್ಷದ ಬಳಿಕ ಇಲ್ಲಿ ಕಾರ್ಯಾರಂಭಗೊಂಡಿತ್ತು. ಮೊದಲಿಗೆ ಕೆಲವು ದಿನ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೂ ಬಳಿಕ ಹೆಚ್ಚಿನ ಉಪಯೋಗ ಸಿಗದಾಯಿತು. ಈ ಸಮಸ್ಯೆ ಒಂದು ತಿಂಗಳಿಂದ ಗಂಭೀರ ಸ್ವರೂಪ ಪಡೆದಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು.