ಆಳಂದ: ತಾಲೂಕಿನ ಖಜೂರಿ, ಮುನ್ನೊಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ ಕೂಡಲೇ ನಿರ್ಮಿಸಬೇಕು ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಇಳಿಸಬೇಕು ಎಂದು ಆಗ್ರಹಿಸಿ ತಾಲೂಕು ಆಡಳಿತ ಸೌಧಕ್ಕೆ ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ ನೇತೃತ್ವದಲ್ಲಿ ಕಾರ್ಯಕರ್ತರು, ಮಹಿಳೆಯರು ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿ ಸತತವಾಗಿ ಮುಂದುವರೆದ ಧಾರಾಕಾರ ಮಳೆಯಲ್ಲೂ ಶ್ರೀರಾಮ ಮಾರುಕಟ್ಟೆ, ಬಸ್ ನಿಲ್ದಾಣ ಮಾರ್ಗವಾಗಿ ಸುಮಾರು 5ಕಿ.ಮೀ ಅಂತರದ ತಾಲೂಕು ಆಡಳಿತ ಸೌಧದ ವರೆಗೆ ಪ್ರತಿಭಟನೆ ಮೂಲಕ ಆಗಮಿಸಿದ್ದ ಪ್ರತಿಭಟನಾಕಾರರು ವಾರದಲ್ಲಿ ಬೇಡಿಕೆ ಈಡೇರಿಸಬೇಕು ಎಂದು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಅವರಿಗೆ ಮನವಿ ಸಲ್ಲಿಸಿ, ಗಡುವು ನೀಡಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಹೇಶ್ವರಿ ವಾಲಿ, ಖಜೂರಿ ಮತ್ತು ಮುನ್ನಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯವಿಲ್ಲದೇ ಮಹಿಳೆಯರು ತೊಂದರೆ ಅನುಭವಿಸುತ್ತಿರುವುದು ಸ್ವತಃ ಭೇಟಿ ಕೊಟ್ಟಾಗ ಅರಿವಿಗೆ ಬಂದಿದೆ. ಇದನ್ನು ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಮಳೆಗಾಲ ಹಿನ್ನೆಲೆಯಲ್ಲಿ ಶೌಚಾಲಯಕ್ಕೆ ತೊಂದರೆ ಆಗುತ್ತಿರುವ ಕುರಿತು ತಾಪಂ ಇಒ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಡುಗೆ ಅನಿಲ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಹೊರೆಯಾಗಿ ಬದುಕು ದುಸ್ತರವಾಗಿದೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಡುಗೆ ಅನಿಲ ಬೆಲೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರರು ಸಂಬಂಧಿತ ಅಧಿಕಾರಿ ಗಳಿಗೆ ಸೂಚಿಸಿ ವಾರದಲ್ಲಿ ಮಹಿಳಾ ಶೌಚಾಲಯ ನಿರ್ಮಾಣ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆದುಕೊಳ್ಳಲಾಯಿತು.
ಜೆಡಿಎಸ್ ಮುಖಂಡರಾದ ರಾಜ ಶೇಖರ ಚೌದರಿ, ಶರಣ ಕುಲಕರ್ಣಿ ನಾವದಗಿ, ಫಯಾಜ್ ಶೇಖ, ಜೈರಾಮ ರಾಥೋಡ, ಸವಿತಾನಾಗ ದೀಪಕ ಪವಾರ, ಏಕನಥ ಪವಾರ, ಕುಷಬೈ ಹಾಗೂ ಖಜೂರಿ, ಮುನ್ನೋಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳ ಮಹಿಳೆಯರು ಇದ್ದರು.