Advertisement

ಹಳ್ಳಿಹಕ್ಕಿ “ಪತ್ರಸಮರ’ಕ್ಕೆ ಎಚ್ಚೆತ್ತ ದಳಪತಿಗಳು

07:11 AM Jun 06, 2019 | Lakshmi GovindaRaj |

ಬೆಂಗಳೂರು: “ಹಳ್ಳಿಹಕ್ಕಿ’ ಎಚ್‌.ವಿಶ್ವನಾಥ್‌ ಅವರ “ಪತ್ರಸಮರ’ದಿಂದ ಎಚ್ಚೆತ್ತ ಜೆಡಿಎಸ್‌ ವರಿಷ್ಠರು ಪಕ್ಷ ಸಂಘಟನೆಯತ್ತ ಚಿತ್ತ ಹರಿಸಿದ್ದು, ಸಂಪುಟದಲ್ಲಿರುವ ಹಲವು ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

Advertisement

ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಶ್ವನಾಥ್‌ ಅವರ ಬಹಿರಂಗ ಪತ್ರದಿಂದ ಪಕ್ಷದ ವರಿಷ್ಠರು ಆತ್ಮಾವಲೋಕನ ಮಾಡುವಂತಾಗಿದೆ. ಪಕ್ಷದಲ್ಲಿ ಮತ್ತಷ್ಟು ನಾಯಕರು ಅಸಮಾಧಾನ ಅದುಮಿಟ್ಟುಕೊಂಡಿದ್ದು, ಅವರ ಅಸಮಾಧಾನದ ಕಟ್ಟೆ ಒಡೆಯುವುದಕ್ಕೂ ಮುಂಚೆ “ಡ್ಯಾಮೇಜ್‌’ ಕಂಟ್ರೋಲ್‌ಗೆ ಮುಂದಾಗಿದ್ದಾರೆ.

ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವ ಕಸರತ್ತಿನ ಭಾಗವಾಗಿ ಸಂಪುಟ ಪುನಾರಚನೆ ಆಗಿದ್ದೇ ಆದಲ್ಲಿ ಮೂರರಿಂದ ನಾಲ್ಕು ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ಅವರಿಗೆ ಪಕ್ಷ ಕಟ್ಟುವ ಹೊಣೆಗಾರಿಕೆ ವಹಿಸಲು ತೀರ್ಮಾನಿಸಲಾಗಿದೆ. ಮಂಡ್ಯ, ಮೈಸೂರು, ತುಮಕೂರು ಭಾಗದಲ್ಲಿ ಸಚಿವರಾಗಿರುವವರನ್ನು ಕೈ ಬಿಟ್ಟು ಪಕ್ಷದ ಕೆಲಸಕ್ಕೆ ಹಚ್ಚಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡುವುದು.

ಸಚಿವ ಸ್ಥಾನ ತ್ಯಜಿಸಿದವರಿಗೆ ಪಕ್ಷದ ಕಾರ್ಯಾಧ್ಯಕ್ಷ ಹುದ್ದೆ ನೀಡಿ ಪಕ್ಷ ಸಂಘಟನೆಗೆ ಅವರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದೇ ಕಾರಣಕ್ಕೆ ಜೆಡಿಎಲ್‌ಪಿ ಸಭೆಯಲ್ಲೂ ಸಾಮೂಹಿಕ ರಾಜೀನಾಮೆಗೂ ಸಿದ್ಧ, ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಅಭ್ಯರ್ಥಿಗಳು ಸೋಲು ಅನುಭವಿಸಿರುವ ಕ್ಷೇತ್ರಗಳ ಹೊಣೆಗಾರಿಕೆ ವಹಿಸಿದ್ದ ಸಚಿವರು, ಬಹುತೇಕ “ತ್ಯಾಗ’ಮಯಿಗಳಾಗುವ ಸಾಧ್ಯತೆಯಿದೆ. ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಸಾಧಿಸಿ, ಪ್ರತಿ ಸಚಿವರು ವಾರಕ್ಕೊಮ್ಮೆ ಪಕ್ಷದ ಕಚೇರಿಗೆ ಆಗಮಿಸಿ, ಕಾರ್ಯಕರ್ತರ ಕುಂದುಕೊರತೆ ಆಲಿಸಬೇಕು ಹಾಗೂ ಅಲ್ಲೇ ಜನತಾದರ್ಶನ ಸಹ ನಡೆಸುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.

Advertisement

ಸಭೆಯಲ್ಲಿ ಶಾಸಕರ ಅಸಮಾಧಾನ: ಜೆಡಿಎಲ್‌ಪಿ ಸಭೆಯಲ್ಲಿ ಕೆಲವು ಶಾಸಕರು ಅತೃಪ್ತಿ ಹೊರ ಹಾಕಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು. ನಮ್ಮದೇ ಸರ್ಕಾರ ಇದ್ದರೂ ನಾವು ಪಕ್ಷ ಸಂಘಟನೆ ಮಾಡದಿದ್ದರೆ ಹೇಗೆ? ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಪಕ್ಷದ ಕಚೇರಿ ಯಾವಾಗಲೂ ಬಿಕೋ ಎನ್ನುತ್ತಿರುತ್ತದೆ. ತಾಲೂಕು ಮಟ್ಟದಿಂದ ಜಿಲ್ಲಾ ಹಾಗೂ ರಾಜ್ಯಮಟ್ಟದವರೆಗೂ ಪದಾಧಿಕಾರಿಗಳ ಬದಲಾವಣೆ ಮಾಡಿ ಸಂಘಟನೆಗೆ ಒತ್ತು ಕೊಡಿ.

ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ಪಕ್ಷ ಸಂಘಟನೆ ಎಂದರೆ ಕಷ್ಟವಾಗುತ್ತದೆ ಎಂದು ನೇರವಾಗಿಯೇ ಹೇಳಿದರು. ಶಾಸಕರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವವರೇ ಇರುವುದಿಲ್ಲ. ಕಾಂಗ್ರೆಸ್‌ ಜತೆಗಿನ ಗುದ್ದಾಟದಲ್ಲೇ ಒಂದು ವರ್ಷ ಮುಗಿದು ಹೋಗಿದೆ. ಇನ್ನಾದರೂ ಜನರಿಗೆ ಹತ್ತಿರವಾಗುವ ಪ್ರಯತ್ನ ಆಗಬೇಕು ಎಂದು ಸಲಹೆ ನೀಡಿದರು ಎಂದು ತಿಳಿದು ಬಂದಿದೆ.

ನೂತನ ಅಧ್ಯಕ್ಷರ ತಲಾಷೆ: ಈ ಮಧ್ಯೆ, ಮನವೊಲಿಕೆ ಯಶಸ್ವಿಯಾಗದೆ ಎಚ್‌.ವಿಶ್ವನಾಥ್‌ ಅವರ ರಾಜೀನಾಮೆ ಅಂಗೀಕಾರ ಮಾಡುವುದು ತೀರಾ ಅನಿವಾರ್ಯವಾದರೆ ಆ ಸ್ಥಾನಕ್ಕೆ ಹೊಸಬರ ತಲಾಷೆಯೂ ನಡೆಯುತ್ತಿದೆ. ಪ್ರಸ್ತುತ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ವೈ.ಎಸ್‌.ವಿ.ದತ್ತಾ, ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಎಚ್‌.ಕೆ.ಕುಮಾರಸ್ವಾಮಿ, ಸಚಿವ ಬಂಡೆಪ್ಪ ಕಾಶೆಂಪೂರ್‌, ಹಿರಿಯ ನಾಯಕರಾದ ಪಿ.ಜಿ.ಆರ್‌.ಸಿಂಧ್ಯಾ,

-ಎ.ಟಿ.ರಾಮಸ್ವಾಮಿ ಅವರ ಹೆಸರುಗಳು ಅಧ್ಯಕ್ಷರ ಹುದ್ದೆಗೆ ಪರಿಶೀಲನೆಯಲ್ಲಿವೆ. ಈಗ ಯುವ ಘಟಕದ ರಾಜ್ಯಾಧ್ಯಕ್ಷರಾಗಿರುವ ಮಧು ಬಂಗಾರಪ್ಪ ಅವರನ್ನು ರಾಜ್ಯ ಜೆಡಿಎಸ್‌ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆಯೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಆಸಕ್ತರಾಗಿದ್ದಾರೆ. ಇದೇ ಕಾರಣಕ್ಕೆ ಯುವ ಘಟಕಕ್ಕೆ ನಿಖೀಲ್‌ ಕುಮಾರಸ್ವಾಮಿ ಅವರನ್ನು ನೇಮಕ ಮಾಡುವ ಪ್ರಸ್ತಾವವಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next