Advertisement

ನವಗ್ರಾಮಕ್ಕೆ ತೆರಳಲು ಗ್ರಾಮಸ್ಥರ ನಿರಾಸಕ್ತಿ

10:01 PM Jul 02, 2021 | Team Udayavani |

ವರದಿ: ಯಚರಗೌಡ ಗೋವಿಂದಗೌಡ

Advertisement

ರೋಣ: 2007-08ರಲ್ಲಿ ಮಲಪ್ರಭಾ ನದಿ ಪ್ರವಾಹದಿಂದ ಮನೆ- ಮಠಗಳನ್ನು ಕಳೆದುಕೊಂಡಿದ್ದ ತಾಲೂಕಿನ ಬಿ.ಎಸ್‌.ಬೇಲೇರಿ ಹಾಗೂ ಬಸರಕೋಡ ಅವಳಿ ಗ್ರಾಮಗಳನ್ನು ಅಂದಿನ ಸರ್ಕಾರ ಸ್ಥಳಾಂತರಗೊಳಿಸಿ ನವಗ್ರಾಮಗಳನ್ನು ನಿರ್ಮಾಣ ಮಾಡಿಕೊಟ್ಟಿತ್ತು. ಆದರೆ, ಪ್ರವಾಹದಿಂದ ಹಳೆ ಗ್ರಾಮದಲ್ಲಿ ಬಿದ್ದಿರುವ ಮನೆಗಳನ್ನು ಪುನರ್‌ ನಿರ್ಮಾಣ ಮಾಡಿಕೊಳ್ಳುವ ಶಕ್ತಿ ಇಲ್ಲದವರು ಮಾತ್ರ ನವಗ್ರಾಮದಲ್ಲಿ ವಾಸವಾಗಿದ್ದಾರೆ. ಉಳಿದ ಕುಟುಂಬಗಳ ಜನರು ಹಳೆ ಗ್ರಾಮದಲ್ಲೇ ವಾಸವಾಗಿದ್ದಾರೆ. ಹೀಗಾಗಿ, ಅಭಿವೃದ್ಧಿ ಕಾಮಗಾರಿಗಳನ್ನು ಎಲ್ಲಿ ಕೈಗೊಳ್ಳಬೇಕು ಎಂಬ ಬಗ್ಗೆ ಸರ್ಕಾರ ದ್ವಂದ್ವ ನಿಲುವಿನಲ್ಲಿ ತೊಳಲಾಡುವಂತಾಗಿದೆ.

ಸರ್ಕಾರ ನಿರ್ಮಾಣ ಮಾಡಿಕೊಟ್ಟಿರುವ ಮನೆಗಳಲ್ಲಿ ಸಂತ್ರಸ್ತರು ವಾಸವಿರದ ಕಾರಣ ಮನೆಗಳು ಬೀಳುವ ಹಂತಕ್ಕೆ ಬಂದಿವೆ. ಇನ್ನು ಕೆಲವು ಬಿದ್ದಿವೆ. ಬಿ.ಎಸ್‌.ಬೇಲೇರಿ ಹಳೆ ಗ್ರಾಮದಲ್ಲಿ 300 ಮನೆಗಳಿದ್ದು, ನವಗ್ರಾಮದಲ್ಲಿ 480 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಇಲ್ಲಿ 1200 ಜನಸಂಖ್ಯೆ ಇದೆ. ಇನ್ನು ಬಸರಕೋಡ 800 ಜನಸಂಖ್ಯೆ ಹೊಂದಿದ್ದು, 300 ಕುಟುಂಬಗಳಿವೆ. ಇಲ್ಲಿ 200 ಮನೆ ಹಂಚಿಕೆ ಮಾಡಲಾಗಿದೆ. ಸುಮಾರು 80ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಗಳ ಹಂಚಿಕೆ ಮಾಡಿಲ್ಲ. ನದಿ ಪಾತ್ರದ ಜನತೆ ಮಳೆಗಾಲ ಬಂತೆಂದರೆ ನೆಮ್ಮದಿಯ ಜೀವನ ನಡೆಸುವಂತೆಯೇ ಇರುವುದಿಲ್ಲ. ಕಾರಣ ಮಳೆ ಹೆಚ್ಚಾಗಿ ಪ್ರವಾಹ ಬಂದರೆ ಆಗುವ ಅನಾಹುತಗಳನ್ನು ನೆನದರೆ ಆ ಸಂಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು. ತಾಲೂಕಿನ ಬಸರಕೋಡ, ಬೇಲೇರಿ ಗ್ರಾಮಗಳು ಮಲಪ್ರಭಾ ನದಿಯ ತಟದಲ್ಲಿವೆ.

ಗ್ರಾಮದ ಸುತ್ತಮುತ್ತ ನದಿಯ ನೀರು ಆವರಿಸಿರುವುದರಿಂದ ಅವು ಸಂಪೂರ್ಣ ಮುಳುಗಡೆಯಾಗುತ್ತವೆ. ಹತ್ತು ವರ್ಷದ ಹಿಂದೆ ನರೆ ಬಂದಾಗ ವಿವಿಧ ದಾನಿಗಳು ಮುಂದೆ ಬಂದು ನವ ಗ್ರಾಮಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ಅವುಗಳ ಉಪಯೋಗ ಇನ್ನೂ ಸಮರ್ಪಕವಾಗಿ ಆಗದಿರುವುದೇ ವಿಪರ್ಯಾಸ. ಮುಳುಗಡೆ ಗ್ರಾಮಗಳೇ ಹಳೆಯ ಗ್ರಾಮಗಳಿಗೆ ಬದಲಾಗಿ ನವ ಗ್ರಾಮಗಳನ್ನು ನಿರ್ಮಿಸಲಾಗಿದೆ. ಆದರೂ, ಅವುಗಳು ಹಳೆಯ ಗ್ರಾಮಗಳಿಂದ ದೂರ ಇರುವುದರಿಂದ ಜನತೆ ನವ ಗ್ರಾಮಗಳಿಗೆ ಹೋಗಿ ವಾಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಭಾವನಾತ್ಮಕ ಸಂಬಂಧ: ಹಳೆಯ ಗ್ರಾಮಗಳಲ್ಲಿ ತಾತ ಮುತ್ತಾತರ ಕಾಲದಿಂದ ವಾಸವಾಗಿರುವ ಮನೆಗಳನ್ನು ಬಿಟ್ಟು ನವ ಗ್ರಾಮಗಳಲ್ಲಿ ಕಟ್ಟಿರುವ ಮನೆಗಳಿಗೆ ಹೋಗಿ ವಾಸ ಮಾಡಲು ಜನತೆ ಹಿಂದೇಟು ಹಾಕುತ್ತಿದ್ದಾರೆ. ಕಾರಣ ಭಾವನಾತ್ಮಕ ಸಂಬಂಧ. ತಮಗೆ ಹಾಗೂ ತಮ್ಮ ಜಾನುವಾರಗಳಿಗೆ ಅನುಕೂಲಕ್ಕೆ ತಕ್ಕಂತೆ ಮೂದಲಿನ ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದರೆ, ಈಗ ನವ ಗ್ರಾಮಗಳಲ್ಲಿ ನಿರ್ಮಾಣವಾಗಿರುವ ಮನೆಗಳು ಕೇವಲ ಜನರ ವಾಸದ ಲೆಕ್ಕಾಚಾರದಲ್ಲಿ ಕಟ್ಟಿಸಲಾಗಿದೆ. ಆದರೆ, ಜಾನುವಾರಗಳಿಗೆ ಜಾಗವೇ ಇಲ್ಲ. ಇನ್ನು ಅವುಗಳಿಗೆ ದನದ ಕೊಟ್ಟಿಗೆಗಳನ್ನು ನಿರ್ಮಾಣ ಮಾಡುವ ಖರ್ಚು, ಈಗಿನ ದುಬಾರಿ ಕಾಲದಲ್ಲಿ ಆಗದ ಕೆಲಸ ಎಂದು ಹಳೆ ಗ್ರಾಮಗಳಲ್ಲಿ, ಜನ ವಾಸ ಮಾಡುವ ಮನಸ್ಸು ಮಾಡಿದ್ದಾರೆ ಎಂದು ಗ್ರಾಮಸ್ಥ ನಿಂಗಪ್ಪ ಬದಾಮಿ ಪತ್ರಿಕೆಗೆ ತಿಳಿಸಿದರು.

Advertisement

ಖಾಲಿ ಮನೆಯಲ್ಲಿ ಇದ್ಲಿ ಭಟ್ಟಿ: ಸರ್ಕಾರ ನೆರೆ ಸಂತ್ರಸ್ತರಿಗೆ ಅನುಕೂಲವಾಗಲಿ ಎಂದು ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದೆ. ಆದರೆ ಇಲ್ಲಿರುವ ಕೆಲವು ಇದ್ಲಿ ವ್ಯಾಪಾರಸ್ಥರು ಖಾಲಿ ಇರುವ ಮನೆಗಳ ಆವರಣದಲ್ಲಿ ಇದ್ಲಿ ಭಟ್ಟಿ ಹಾಕುವ ಮೂಲಕ ಇಲ್ಲಿನ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆ ಮಾಡುತ್ತಿದ್ದಾರೆ. ಇದನ್ನು ಇಲ್ಲಿನ ಅಧಿ  ಕಾರಿಗಳು ಹಾಗೂ ಜನಪ್ರತಿನಿಧಿ ಗಳು ನೋಡಿಯೂ ನೋಡಿದಂತೆ ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next