ಯಲಹಂಕ: ಶಿವಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಳ್ಳಿಪುರದಲ್ಲಿ ಗುರುವಾರ ನಡೆದ ಗ್ರಾಮಸಭೆಗೆ ಸರ್ಕಾರದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳೇ ಗೈರಾದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಸಭೆಯನ್ನು ಮುಗಿಸಲಾಯಿತು.
ಬೆಂಗಳೂರು ಉತ್ತರ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ರೆಡ್ಡಿ ಅವರೂ ಸೇರಿದಂತೆ 19 ಇಲಾಖೆಗಳ ಅಧಿಕಾರಿಗಳು ಗ್ರಾಮ ಸಭೆಗೆ ಗೈರಾಗಿದ್ದರು. ಇದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಿ ಜನಪ್ರತಿನಿಧಿಗಳು ಅವಸರವಾಗಿ ತಮ್ಮ ಮಾತು ಮುಗಿಸಿ ಸಭೆಗೆ ಅಂತ್ಯ ಹಾಡಿದರು.
ಸ್ಪಷ್ಟನೆ ನೀಡಬೇಕೆಂದು ಒತ್ತಾಯ: ಗ್ರಾಮಾಠಾಣಾದ ಕಾನೇಷುಮಾರಿ ಜಾಗದ ಖಾತೆಗಳನ್ನು 2004ರಲ್ಲಿ ತಿದ್ದುಪಡಿ ಮಾಡಲಾಗಿದೆ. ದುಡ್ಡು ಕೊಟ್ಟವರಿಗೆ ಖಾತೆ ಮಾಡಿಕೊಡಲಾಗಿದೆ. ಈ ಹಿಂದೆ ಇದ್ದ ಬಿಲ್ ಕಲೆಕ್ಟರ್ ಮತ್ತು ಚುನಾಯಿತ ಪ್ರತಿನಿಧಿಗಳು ಸೇರಿ ಗ್ರಾಮ ಠಾಣಾದ ಅನೇಕ ಖಾತೆಗಳನ್ನು ತಿದ್ದುಪಡಿ ಮಾಡಿದ್ದಾರೆ.
ಗ್ರಾಮ ಠಾಣಾದಲ್ಲಿದ್ದ ದಾಖಲೆಗಳನ್ನು ಇ ಖಾತೆ ಮಾಡಿಕೊಡಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಗ್ರಾಮಸ್ಥರು ಕೇಳಿದರೆ ನ್ಯಾಯಾಲಯಕ್ಕೆ ಹೋಗಿ ಎಂದು ಹೇಳುತ್ತಿದ್ದಾರೆ. ಆದರೆ, ದುಡ್ಡು ಕೊಟ್ಟವರಿಗೆ ಅವರೇ ಖಾತೆ ಮಾಡಿಕೊಟ್ಟಿದ್ದಾರೆ. ಈ ಕಾರಣಕ್ಕೆ ಅವರು ನಮಗೆ ಸಮಂಜಸ ಉತ್ತರ ಕೊಡಬೇಕು ಎಂದು ಅಂಬೇಡ್ಕರ್ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಜೈಲಿಂಗಯ್ಯ ಅಗ್ರಹಿಸಿದರು.
ಸರ್ಕಾರದ ಇಲಾಖೆಗಳ ಪೈಕಿ ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಆಹಾರ ಪೂರೈಕೆ ಇಲಾಖೆಗಳ ಅಧಿಕಾರಿಗಳು ಮಾತ್ರ ಗ್ರಾಮಸಭೆಗೆ ಬಂದಿದ್ದರು. ಉಳಿದ ಅಧಿಕಾರಿಗಳು ಗೈರಾಗಿದ್ದರು. ಈ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.
ಇನ್ನು ಹತ್ತು ದಿನದೊಳಗೆ ಸಭೆ ಕರೆದು ಖಾತೆಗಳ ಬಗ್ಗೆ ಇರುವ ಗೊಂದಲಗಳನ್ನು ಬಗೆಹರಿಸುತ್ತೇನೆ. ಅಧಿಕಾರಿಗಳ ಜೊತೆ ಗ್ರಾಮಸ್ಥರೆಲ್ಲ ಕುಳಿತು ಚರ್ಚೆ ನಡೆಸೋಣ ಎಂದು ವಿಧಾನಪರಿಷತ್ ಸದಸ್ಯ ನಾರಾಯಣ ಸ್ವಾಮಿ ಭರವಸೆ ನೀಡಿದರು. ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಚೊಕ್ಕನ ಹಳ್ಳಿ ವೆಂಕಟೇಶ್, ಗ್ರಾ.ಪಂ.ಅಧ್ಯಕ್ಷರಾದ ಮುನಿಅಂಜನಪ್ಪ ಇದ್ದರು.