ರಾಮದುರ್ಗ: ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಿ ಸರಕಾರದ ಯೋಜನೆಗಳು ಸರ್ವರಿಗೂ ತಲುಪಿಸುವ ಉದ್ದೇಶದಿಂದ ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಸ್ಥಳದಲ್ಲಿಯೇ ಪರಿಹರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಜರುಗಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಜನತೆಯ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಅವುಗಳನ್ನು ನೇರವಾಗಿ ಜನರಿಗೆ ತಲುಪುವಂತೆ ಮಾಡುತ್ತಿವೆ ಎಂದು ಹೇಳಿದರು.
ಗ್ರಾಮೀಣ ಜನತೆಗೆ ಕುಡಿಯುವ ನೀರು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಜಲಜೀವನ್ ಮಿಷನ್ ಯೋಜನೆ ಮೂಲಕ ಮನೆ ಮನೆಗೆ ನಳಗಳ ಜೋಡನೆ ಮಾಡುವ ಮೂಲಕ 150 ಕೋಟಿ ಅನುದಾನದಲ್ಲಿ 137 ಹಳ್ಳಿಗಳಿಗೆ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲದೇ 340 ಕೋಟಿ ಅನುದಾನದಲ್ಲಿ ಮುನವಳ್ಳಿ ಡ್ಯಾಂನಿಂದ ಪ್ರತ್ಯೇಕ ಕುಡಿಯುವ ನೀರು ತರಲು ಯೋಜನೆಗೆ ಸರಕಾರ ಅನುಮೋದನೆ ನೀಡಿದ್ದು, ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ| ಎಂ.ಜಿ . ಹಿರೇಮಠ ಮಾತನಾಡಿ, ಕಂದಾಯ ಸಚಿವರ ಆಶಯದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯದ ಮೂಲಕ ಜನರ ಕಷ್ಟಗಳನ್ನು ಆಲಿಸಿ ಅಲ್ಲಿಯೇ ಪರಿಹಾರ ಕಲ್ಪಿಸುವ ಮಹತ್ವದ ಉದ್ದೇಶಕ್ಕಾಗಿ ಈ ಕಾರ್ಯವನ್ನು ಮಾಡಲಾಗುತ್ತಿದೆ. ಗ್ರಾಮ ವಾಸ್ತವ್ಯದ ಮೂಲಕ ಜನರ ಏನೇ ಸಮಸ್ಯೆಗಳಿದ್ದರು ಅವಗಳನ್ನು ಸ್ವಿಕರಿಸಿ ಅವುಗಳನ್ನು ಪರಿಹರಿಸಲಾಗುವದು. ಅಲ್ಲದೇ ಈ ಕಾರ್ಯಕ್ರಮದ ಮೂಲಕ ಗ್ರಾಮದ ಎಸ್.ಸಿ ಹಾಗೂ ಎಸ್.ಟಿ ಕಾಲೋನಿಗಳ ಭೇಟಿ, ಅಂಗನವಾಡಿ ಕೇಂದ್ರಗಳ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.
ಜನರ ವೈಯಕ್ತಿಕ ಅಥವಾ ಸಾರ್ವಜನಿಕ ಏನೆ ಸಮಸ್ಯೆಗಳಿದ್ದರು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಬಂದು ತಮ್ಮನ್ನು ಮುಕ್ತವಾಗಿ ಭೇಟಿ ಮಾಡಿ ಅಹವಾಲು ನೀಡಬಹುದು. ಇಲ್ಲಿನ ಸಮಸ್ಯೆಗಳನ್ನು ಇಲ್ಲಿಯೇ ಪರಿಹರಿಸುವ ಮಹತ್ವದ ಕೆಲಸ ಮಾಡಿ ಸಮಸ್ಯೆಗಳು ಬಗೆ ಹರಿಯದೆ ಇದ್ದರೆ ಅಂತಹ ಅರ್ಜಿಗಳನ್ನು ಸರಕಾರಕ್ಕೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾ.ಪಂ ಅಧ್ಯಕ್ಷೆ ನಿರ್ಮಲಾ ಖಾನಪೇಠ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡ ಮಲ್ಲಿಕಾರ್ಜುನ ಕೊಪ್ಪದ, ಅಪರ ಜಿಲ್ಲಾಧಿಕಾರಿ ಅಶೋಕ ದುರಗುಂಟಿ, ಜಂಟಿ ಕೃಷಿ ನಿರ್ದೇಶಕ ಎಸ್.ಎಸ್. ಪಾಟೀಲ, ಡಿಎಚ್‌ಓ ಎಸ್.ವಿ. ಮುನ್ಯಾಳ, ತಾ.ಪಂ ಇಒ ಪ್ರವೀಣ ಸಾಲಿ, ಸರಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ರಮೇಶ ಅರಕೇರಿ, ಹೆಸ್ಕಾ ಎಇಇ ಕಿರಣ ಸಣ್ಣಕ್ಕಿ ಸೇರಿದಂತೆ ತಾಲೂಕಾ ಮಟ್ಟದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ತಹದಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಸ್ವಾಗತಿಸಿದರು. ಜಿ.ಎಂ. ಹುಲ್ಲೂರ ನಿರೂಪಿಸಿ, ವಂದಿಸಿದರು.
ಫಲಾನುಭವಿಗಳಿಗೆ ವಿವಿಧ ಯೋಜನೆಗಳ ನೀಡಿಕೆ: ಇಂದಿನ ಕಾರ್ಯಕ್ರಮದಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ಜಿಲ್ಲಾಧಿಕಾರಿ ಡಾ| ಎಂ. ಜಿ. ಹಿರೇಮಠ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒಗಿಸುವಲ್ಲಿ ಮುಂದಾದರು.
ಅದ್ದೂರಿ ಮೆರಣೆಗೆ:
ಸಾಲಹಳ್ಳಿ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ| ಎಂ.ಜಿ. ಹಿರೇಮಠ ಹಾಗೂ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ, ತೆರೆದ ವಾಹನದ ಮೂಲಕ ಅನೆಯ ಮೆರವಣೆಗೆಯೊಂದಿಗೆ ಮಹಿಳೆಯರ ಕುಂಭ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ವೇದಿಕೆಗೆ ಗ್ರಾಮಸ್ಥರು ಕರೆ ತರುವಲ್ಲಿ ಮುಂದಾದರು.