Advertisement

ಅಪರಾಧ ತಡೆಗೆ ಗ್ರಾಮ ವಾಸ್ತವ್ಯ

08:50 PM Dec 09, 2020 | Suhan S |

ಶಿರಸಿ: ಅಪರಾಧ ತಡೆಗೆ ಪೊಲೀಸರಿಂದಲೂ ನಿಗದಿತ ಸಮಯದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುತ್ತದೆ ಎಂದು ನೂತನ ಪೊಲೀಸ್‌ ಉಪಾಧೀಕ್ಷಕ ರವಿ ನಾಯ್ಕ ಹೇಳಿದರು.

Advertisement

ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕುಗಳಲ್ಲಿ ಒಂಟಿ ಮನೆಗಳ ರಕ್ಷಣೆಗೆ ಪೊಲೀಸ್‌ ಇಲಾಖೆ ವಿಶೇಷ ಯೋಜನೆ ಹಮ್ಮಿಕೊಳ್ಳಲಿದೆ. ನಮ್ಮ ಸಿಬ್ಬಂದಿ ವಾರದಲ್ಲಿ ಎರಡು ದಿನ ಗ್ರಾಮ ವಾಸ್ತವ್ಯ ಮಾಡುವ ಮೂಲಕ ರಕ್ಷಣೆ ಒದಗಿಸಲಿದ್ದೇವೆ. ಪೋಲೀಸ್‌ ಬೀಟ್‌ ವ್ಯವಸ್ಥೆ ಈಗಾಗಲೇ ಇದ್ದು, ಅದನ್ನು ಇನ್ನಷ್ಟು ಬಲಪಡಿಸಲಾಗುವುದು. ಪ್ರತಿ ಎರಡು ಅಥವಾ ಮೂರು ಹಳ್ಳಿಗಳಿಗೆ ಒಬ್ಬ ಪೊಲೀಸ್‌ ಸಿಬ್ಬಂದಿಗೆ ಜವಾಬ್ದಾರಿ ವಹಿಸಲಿದ್ದೇವೆ. ಆತ ಹಳ್ಳಿಯಲ್ಲಿಯೇ ರಾತ್ರಿಯೂ ಇರುವುದರಿಂದ ಸ್ಥಳೀಯರ ಸಮಸ್ಯೆ ಇನ್ನಷ್ಟು ಹತ್ತಿರದಿಂದ ತಿಳಿಯಲು ಸಾಧ್ಯವಾಗುತ್ತದೆ. ಇದರೊಂದಿಗೆ ಒಂಟಿ ಮನೆಗಳ ರಕ್ಷಣೆ ಸಾಧ್ಯವಾಗುತ್ತದೆ ಎಂದರು.

ಶಿರಸಿಯಲ್ಲಿ ಟ್ರಾಫಿಕ್‌, ಪಾರ್ಕಿಂಗ್‌ ಸಮಸ್ಯೆ ಇದೆ. ಇದನ್ನು ಪರಿಹರಿಸಲು ಮೊದಲೆ ಆದ್ಯತೆ ನೀಡಲಾಗುತ್ತದೆ. ಕೆಲ ಕಡೆಗಳಲ್ಲಿ ಇಕ್ಕಟ್ಟಾದ ರಸ್ತೆಗಳಿವೆ. ವಾಹನ ಅಡ್ಡಾದಿಡ್ಡಿ ನಿಲ್ಲಿಸಿದರೆ ಇತರರಿಗೂ ತೊಂದರೆ ಆಗುತ್ತದೆ. ಯಾವ ರೀತಿಯಲ್ಲಿ ಈ ಸಮಸ್ಯೆ ಬಗೆಹರಿಸಬಹುದು ಎಂದು ಪರಿಶೀಲಿಸುತ್ತೇವೆ. ಪೊಲೀಸ್‌ ಮತ್ತು ಜನರ ನಡುವಿನ ಸಂಬಂಧ ಇನ್ನಷ್ಟು ಬಲಗೊಳ್ಳಬೇಕು. ಅನ್ಯಾಯಕ್ಕೆ ಒಳಗಾದವರು ಮತ್ತು ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಠಾಣೆಗೆ ಆಗಮಿಸುತ್ತಾರೆ. ಅವರಿಗೆ ವಿಶ್ವಾಸ ಮೂಡುವ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದ್ದೇವೆ ಎಂದರು.

ಅಡಕೆ ಕಟಾವು ಕಾರ್ಯ ಈ ದಿನಗಳಲ್ಲಿ ನಡೆಯುತ್ತಿದ್ದು, ಈ ಕುರಿತಂತೆ ರೈತರ ನಡುವೆ ವೈಮನಸ್ಸಿನ ಪ್ರಕರಣಗಳೂ ಬರುತ್ತಿವೆ. ಆದರೆ, ಇಂತಹ ಸಿವಿಲ್‌ ಪ್ರಕರಣಗಳಲ್ಲಿ ಪೊಲೀಸ್‌ ಹಸ್ತಕ್ಷೇಪ ಆಗಬಾರದು. ಇಂತಹ ಸಿವಿಲ್‌ ಪ್ರಕರಣದಲ್ಲಿ ಭಾಗಿ ಆಗದಂತೆ ಪೊಲೀಸರಿಗೆ ಸ್ಪಷ್ಟ ತಿಳಿಸಿದ್ದೇನೆ ಎಂದರು. ರೌಡಿಸಂ ಮತ್ತು ಗೂಂಡಾಗಿರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಗಾಂಜಾ ಮಾರಾಟ ಮತ್ತು ಸಾಗಾಟವನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಲಿದೆ. ನಮ್ಮ ಜಿಲ್ಲೆಯಲ್ಲಿಯೂ ಕೆಲವೆಡೆ ಗಾಂಜಾ ಬೆಳೆಯುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕೆಲ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಅರಣ್ಯ ಇಲಾಖೆ ಜೊತೆ ಚರ್ಚೆ ನಡೆಸಿ, ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುತ್ತೇವೆ ಎಂದ ಅವರು, ಹೈವೇ ಗಸ್ತು ತಿರುಗಾಟವನ್ನು ಇನ್ನಷ್ಟು ಹೆಚ್ಚಿಸಲಾಗುತ್ತಿದೆ. ಗ್ರಾಮೀಣ ರಸ್ತೆಗಳಲ್ಲಿ ರಾತ್ರಿ ವೇಳೆ ವಾಹನ ಹಾಳಾಗಿ ನಿಂತರೆ, ಅಥವಾ ರಸ್ತೆಯಲ್ಲಿ ತೊಂದರೆ ಆದರೆ ತಕ್ಷಣವೇ ರೇಡಿಯಂ ಸ್ಟಿಕ್ಕರ್‌ ಅಳವಡಿಸಿ ಅಪಘಾತ ಆಗದಂತೆ ಕಾಳಜಿ ವಹಿಸುತ್ತೇವೆ. ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ವ್ಯವಹರಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಿದ್ದೇವೆ ಎಂದರು.

ಪ್ರತಿ ಮನೆಯಲ್ಲೂ ಮಾಹಿತಿ :  ತುರ್ತು ಸಂದರ್ಭದಲ್ಲಿ ಗ್ರಾಮಸ್ಥರಿಗೆ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಲು ಅನುವಾಗುವ ಸಲುವಾಗಿ ಪ್ರತಿ ಮನೆಗೂ ಮಾಹಿತಿ, ದೂರವಾಣಿ ಸಂಖ್ಯೆ ಉಳ್ಳ ಸ್ಟಿಕ್ಕರ್‌ ಹಚ್ಚಲಿದ್ದೇವೆ. ಮನೆಯ ಬಾಗಿಲಿನ ಹಿಂದೆ ಈ ಸ್ಟಿಕ್ಕರ್‌ ಅಳವಡಿಸಲಾಗುತ್ತಿದ್ದು, ಇದರಲ್ಲಿ ಬೀಟ್‌ ಪೊಲೀಸರ, ಪೋಲೀಸ್‌ ಠಾಣೆ ಮತ್ತು ಪಿಎಸ್‌ಐ ಅವರ ಮೊಬೈಲ್‌ ನಂಬರ್‌ ಇರಲಿದೆ. ತುರ್ತು ಸಂದರ್ಭದಲ್ಲಿ ಪೊಲೀಸರ ದೂರವಾಣಿ ಸಂಖ್ಯೆ ಸುಲಭವಾಗಿ ಸಿಗುವಂತಿರಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next