Advertisement
“ಸ್ಥಳೀಯ ಸಂಸ್ಥೆಗಳು’ ಎಂಬ ವಿಷಯ ಸಂವಿಧಾನದ 7ನೇ ಷೆಡ್ನೂಲ್‌ನ “ರಾಜ್ಯ ಪಟ್ಟಿ’ ಯ 5ನೇ ಅಂಶವಾಗಿ ಮೂಡಿ ಬಂದಿದೆ. ಅದರಂತೆಯೇ ಒಂದೊಂದೇ ರಾಜ್ಯಗಳು ತಂತಮ್ಮ ಅಧಿಕಾರ ಪರಿಧಿಯೊಳಗೆ ಸ್ವಾತಂತ್ರ್ಯೋತ್ತರ ಭಾರತದ ಒಂದನೇ ತಲೆಮಾರಿನ ಸ್ಥಳೀಯ ಸಂಸ್ಥೆಗಳ ಶಾಸನಗಳನ್ನು ರಚಿಸಲಾರಂಭಿಸಿದವು. ಈ ಬಗ್ಗೆ ರಾಷ್ಟ್ರವ್ಯಾಪಿ ಸಮಾನತೆಯನ್ನು ತುಂಬಿ ನಿಲ್ಲಲು ರಾಜೀವ ಗಾಂಧಿ ನೇತಾರಿಕೆಯ ಕೇಂದ್ರ ಸರಕಾರ 1993ರಲ್ಲಿ 16 ವಿಧಿಗಳನ್ನು ಹೊಂದಿದ 73ನೇ ಸಂವಿಧಾನ ತಿದ್ದುಪಡಿಯನ್ನು ಜಾರಿಗೆ ತಂದಿತು. ತನ್ಮೂಲಕ 3 ಸ್ತರಗಳ ಗ್ರಾಮೀಣ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಪಂಚಾಯತ್ ವ್ಯವಸ್ಥೆಗೆ ಸುಂದರ ಚೌಕಟ್ಟು ನಿರ್ಮಿಸಿತು. ಅದಕ್ಕೆ ಅನುಗುಣವಾಗಿ ಆಯಾಯ ರಾಜ್ಯಗಳು ತಂತಮ್ಮ ಕಾನೂನುಗಳಿಗೆ ಸೂಕ್ತ, ಹಾಗೂ 2ನೇ ತಲೆಮಾರಿನ ಸುಧಾರಣೆಗಳನ್ನು ತಂದವು. ಅದಕ್ಕೆ ಸಂವಾದಿಯಾಗಿ ಕರ್ನಾಟಕ ಸರಕಾರವೂ ಹಲವು ಸುಧಾರಣೆಗಳನ್ನು ಪಡಿಮೂಡಿಸಿತು. ಇತ್ತೀಚೆಗೆ 2020ರ ತಿದ್ದುಪಡಿಯನ್ನು ತಂದು 30 ತಿಂಗಳ ಅವಧಿಯ ಅಧ್ಯಕ್ಷ , ಉಪಾಧ್ಯಕ್ಷರ ಅಧಿಕಾರಾವಧಿಯಂತಹ ಸುಧಾರಣೆಗಳನ್ನು ಜಾರಿಗೆ ತಂದಿತು.
Related Articles
ಗ್ರಾಮಾಭಿವೃದ್ಧಿಯ ಎಲ್ಲ ಯೋಚ ನೆಗಳು, ಆಶಯಗಳು, ಯೋಜನೆಗಳಾಗಿ ಪ್ರಾತ್ಯಕ್ಷಿಕವಾಗಿ ಹರಿದು ಬರುವಲ್ಲಿ ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನ ಶಕ್ತಿ – ಈ 3ರ ತ್ರಿವೇಣಿ ಸಂಗಮ ಅತ್ಯಗತ್ಯ. ಗ್ರಾಮೀಣ ಮಟ್ಟದಲ್ಲಿ ಪಕ್ಷ ರಾಜಕೀಯದ ಉಮೇದುವಾರಿಕೆಗೆ ಸಂವಿಧಾನದಲ್ಲಿ ಉದ್ದೇಶಪೂರ್ವಕವಾಗಿ ಅವಕಾಶ ನೀಡಲಾಗಿಲ್ಲ. ಇದರ ಒಳಮರ್ಮವೆಂದರೆ “ಅತೀ ಸಣ್ಣ ಜನತಂತ್ರೀಯ ಸಂಸ್ಥೆ’ (Micro Level Democratic Institution)ಯಾಗಿ ಕಾರ್ಯ ನಿರ್ವಹಿಸುವಲ್ಲಿ ಗ್ರಾಮ ಪಂಚಾಯತ್‌ಗಳಲ್ಲಿ ಏಕತಾನ ತುಂಬಿಬರಲಿ ಎಂಬುದು, “ಅಪ್ನಾ ಗಾಂವ್, ಅಪ್ನಾ ಕಾಮ್’ ಎಂಬ ಅರಿವಿನ ಬೆಳಕಿನಲ್ಲಿ “ಬದ್ಧತೆ’ಯ ಸರಳ ವ್ಯವಸ್ಥೆಯ ಆಶಯವನ್ನು ನಮ್ಮ ಸಂವಿಧಾನ ತುಂಬಿ ನಿಂತಿದೆ. ಮಹಿಳೆಯರಿಗೆ ಪ್ರಾಧಾನ್ಯತೆ, ಯುವಶಕ್ತಿಗೆ ಆಹ್ವಾನ, ಆವಶ್ಯಕ ಹಣಕಾಸಿನ ಪೂರೈಕೆ, ಉತ್ತಮ ನಾಯಕತ್ವ ತರಬೇತಿ, ಆಧುನಿಕ ತಂತ್ರಜ್ಞಾನ ಸೌಕರ್ಯ ಹಾಗೂ ಅಧಿಕಾರ ಶಾಹಿತ್ವ (Bureaucracy)) ದ ಹಾಗೂ ರಾಜ್ಯ ಸರಕಾರದ ಕನಿಷ್ಠ ಹಸ್ತಕ್ಷೇಪ – ಹೀಗೆ ಪೂರಕ ವಾತಾವರಣ ಇಂದಿನ ಅವಶ್ಯ.
Advertisement
ಸುಮಾರು 30 ವರ್ಷ ಎಂದರೆ ಒಂದು ತಲೆಮಾರು. ಇದೀಗ ಪಂಚಾಯತ್‌ರಾಜ್ ವ್ಯವಸ್ಥೆಗೆ 2ನೇ ತಲೆಮಾರಿನ ಸುಧಾರಣ ಪ್ರಕ್ರಿಯೆ, ಕಾಯಕಲ್ಪ , ಚೌಕಟ್ಟು ಸುದೃಢವಾಗಿಯೇ ನಮ್ಮಲ್ಲಿದೆ. ಅದರ ಆಧಾರದಲ್ಲಿ ಸ್ವಾತಂತ್ರೊéàತ್ತರದ 3ನೇ ತಲೆಮಾರಿನ, ಪ್ರಯತ್ನಶೀಲತೆ ಗ್ರಾಮ ಪಂಚಾಯತ್‌ಗಳಲ್ಲಿ ಮೂಡಿ ಬರಬೇಕಾಗಿದೆ. “”ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು” ಎಂಬ ಕವಿವಾಣಿಯಂತೆ ಹೊಸತನ ಮೂಡಿ ಬರಲಿ. “”ಕಟ್ಟುವೆವು ನಾವು ಹೊಸ ನಾಡೊಂದನು…. ರಸದ ಬೀಡೊಂದನು … ಹೊಸನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ ….” ಎಂಬ ಕವಿತೆಯ ಸಾಲಿನ ಆಶಯದಂತೆ ಯುವ ಶಕ್ತಿಗಳು ನಮ್ಮ ಗ್ರಾಮಾಂತರ ಪ್ರದೇಶದಲ್ಲಿ ನೂತನ ನಾಯಕತ್ವದ ದೀಪಧಾರಿಯಾಗಲಿ. ತನ್ಮೂಲಕ ಹಳ್ಳಿಯಿಂದ ದಿಲ್ಲಿಯವರೆಗಿನ ಜನತಂತ್ರದ ಬೇರುಗಳಿಗೆ ನವಚೈತನ್ಯದ ನೀರುಣಿಸಲಿ. ಇದು ಜನಮನದ ಅಂತೆಯೇ ಸಂವಿಧಾನ ಜನಕರ ಸದಾಶಯ.
ಡಾ| ಪಿ. ಅನಂತಕೃಷ್ಣ ಭಟ್, ರಾಜಕೀಯ ವಿಶ್ಲೇಷಕರು