ಕಡಬ: ಕೋಡಿಂಬಾಳದಿಂದ ಕೋರಿಯಾರ್, ಕರ್ಮಾಯಿ, ಪಾದೆ ಮಜಲು, ಕೊಡೆಂಕಿರಿ, ಬ್ರಾಂತಿಕಟ್ಟೆ ಮೂಲಕ ಐತ್ತೂರನ್ನು ಸಂಪರ್ಕಿಸುವ ಕೋಡಿಂಬಾಳ, 102ನೇ ನೆಕ್ಕಿಲಾಡಿ ಹಾಗೂ ಐತ್ತೂರು ಗ್ರಾಮಗಳಲ್ಲಿ ಹಾದು ಹೋಗುವ 9 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ 8.55 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಮೇ ಕೊನೆಯೊಳಗೆ ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ.
ಸಂಪೂರ್ಣ ಹದಗೆಟ್ಟ ರೀತಿಯಲ್ಲಿದ್ದು, ಮಳೆಗಾಲದಲ್ಲಂತೂ ವಾಹನ ಸಂಚಾರ ಬಿಡಿ, ನಡೆದು ಹೋಗುವುದೇ ಕಷ್ಟ ಎನ್ನು ವಂತಿದ್ದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂಬ ಬೇಡಿಕೆ ಇಂದು ನಿನ್ನೆಯದಲ್ಲ. ಚುನಾವಣೆಗಳ ಸಂದರ್ಭದಲ್ಲಿ ಚುನಾವಣೆಗೆ ಬಹಿಷ್ಕಾರ ಹಾಕುವ ಕೂಗು ಹಲವು ಬಾರಿ ಸ್ಥಳೀಯರಿಂದ ಕೇಳಿ ಬಂದಿತ್ತು. ರಾಜಕೀಯ ನಾಯಕರ ಭರವಸೆಯ ಹಿನ್ನೆಲೆಯಲ್ಲಿ ಜನರ ಆಕ್ರೋಶ ತಣ್ಣಗಾಗುತ್ತಿತ್ತು. ಈಗ ಕೊನೆಗೂ ಜನರ ಬೇಡಿಕೆ ಈಡೇರುವ ಕಾಲ ಕೂಡಿ ಬಂದಿದೆ. ಸೇತುವೆ, ಮೋರಿ, ತಡೆಗೋಡೆಗಳ ನಿರ್ಮಾಣದೊಂದಿಗೆ ಸುಂದರ ರಸ್ತೆ ರೂಪುಗೊಳ್ಳುವುದರೊಂದಿಗೆ ಈ ಭಾಗದ ಸುಮಾರು 300ಕ್ಕೂ ಹೆಚ್ಚು ಮನೆಗಳ ಜನರ ಕನಸು ನನಸಾಗುತ್ತಿದೆ.
3 ಸೇತುವೆಗಳ ನಿರ್ಮಾಣ
9 ಕಿ.ಮೀ. ರಸ್ತೆಯಲ್ಲಿ ಮೂರು ಕಡೆ ಸೇತುವೆಗಳು ನಿರ್ಮಾಣವಾಗುತ್ತಿದೆ. 2 ದೊಡ್ಡ ಮಟ್ಟದ ಸೇತುವೆಗಳಾದರೆ 1 ಕಿರು ಸೇತುವೆಯಾಗಿ ದೊಡ್ಡ ಹಾಗೂ ಸಣ್ಣ ಮೋರಿಗಳು ಸೇರಿ 16 ಮೋರಿಗಳು ನಿರ್ಮಾಣವಾಗಿವೆ. ಕೋರಿಯಾರ್ ಎಂಬಲ್ಲಿ ಕುಮಾರಾಧಾರ ನದಿಯ ಪಕ್ಕದಲ್ಲಿ ರಸ್ತೆ ಹಾದು ಹೋಗುತ್ತಿದ್ದು, ಅಲ್ಲಿ ನದಿಯ ಪಕ್ಕದಲ್ಲಿ 220 ಮೀ. ಉದ್ದದ ಸದೃಢ ತಡೆಗೋಡೆ ನಿರ್ಮಾಣವಾಗುತ್ತಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣಗೊಳ್ಳಲಿದೆ. ಈಗಾಗಲೇ ಇರುವ ಕಾಂಕ್ರೀಟ್ ರಸ್ತೆಗಳನ್ನು ಅಗಲಗೊಳಿಸುವ ಕೆಲಸವೂ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ 5 ವರ್ಷ ರಸ್ತೆಯನ್ನು ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರೇ ನಿರ್ವಹಣೆ ಮಾಡಲಿದ್ದಾರೆ. 5 ವರ್ಷದ ಬಳಿಕ ಮತ್ತೆ ಒಂದು ಕೋಟ್ ಡಾಮರು ಹಾಕುವುದಕ್ಕಾಗಿ ಅನುದಾನ ಕಾದಿರಿಸಲಾಗಿದೆ. ಮಂಗಳೂರಿನ ಪವಿತ್ರ ಕನ್‌ಸ್ಟ್ರಕ್ಷನ್ಸ್ ಸಂಸ್ಥೆ ರಸ್ತೆಯ ಕಾಮಗಾರಿ ನಿರ್ವಹಿಸುತ್ತಿದ್ದು, ಪಾದೆಮಜಲಿನಲ್ಲಿ ನಡೆಯುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿಯನ್ನು ಬೆಳ್ತಂಗಡಿಯ ಗುತ್ತಿಗೆದಾರ ಕೆ.ಎಂ. ನಾಗೇಶ್ ಕುಮಾರ್ ನಿರ್ವಹಿಸುತ್ತಿದ್ದಾರೆ.
ಗುಣಮಟ್ಟದ ಪರೀಕ್ಷೆ ಹಲವು ವರ್ಷಗಳ ಬೇಡಿಕೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಈಡೇರಿಸಲಾಗುತ್ತಿದೆ. ಕೆಲವು ಕಡೆ ಕಾಂಕ್ರೀಟ್ ಕಾಮಗಾರಿ, ಸೇತುವೆಗಳ ಬಳಿ ಸಂಪರ್ಕ ರಸ್ತೆ, ಮೋರಿಗಳ ಬಳಿ ಡಾಮರು ಹಾಕುವುದು ಇತ್ಯಾದಿ ಕಾಮಗಾರಿ ಬಾಕಿ ಇದ್ದು, ಈ ತಿಂಗಳೊಳಗೆ ಪೂರ್ಣಗೊಳ್ಳಲಿದೆ. ತಜ್ಞರ ತಂಡ ರಸ್ತೆ ಕಾಮಗಾರಿಯನ್ನು ಅಲ್ಲಲ್ಲಿ ಪರಿಶೀಲನೆಗೊಳಪಡಿಸಿ ಕಾಮಗಾರಿ ಉತ್ತಮ ಗುಣಮಟ್ಟದಲ್ಲಿದೆ ಎಂದು ವರದಿ ನೀಡಿದೆ.
-ಎಸ್.ಅಂಗಾರ, ಸಚಿವರು.