ಕನಕಪುರ: ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಬೇಕಿದ್ದ ಮುಳ್ಳಹಳ್ಳಿ ಗ್ರಾಮಸಭೆಯಲ್ಲಿ ಅಧಿಕಾರಿಗಳು ಭಾಗವಹಿಸದೆ ಕಾಟಾಚಾರಕ್ಕೆ ನಡೆಯಿತು.
ತಾಲೂಕಿನ ಕೋಡಿಹಳ್ಳಿ ಹೋಬಳಿ ಮುಳ್ಳಹಳ್ಳಿ ಗ್ರಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 2019 -20ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಸ್ಥರ ಕೊರತೆಯಿತ್ತು.
ಪಾಲ್ಗೊಂಡಿಲ್ಲ: ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ತಮ್ಮ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವುದು ಗ್ರಾಮ ಸಭೆಗಳ ಉದ್ದೇಶ. ಆದರೆ, ಸಭೆಯಲ್ಲಿ ರೇಷ್ಮೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳನ್ನು ಹೊರತುಪಡಿಸಿ ಇನ್ಯಾವುದೇ ಅಧಿಕಾರಿಗಳು ಪಾಲ್ಗೊಂಡಿರಲಿಲ್ಲ. ಗ್ರಾಪಂ ಅಧ್ಯಕ್ಷರು ಕೆಲವು ಸದಸ್ಯರು ಬೆರಳೆಣಿಕೆಯಷ್ಟು ರೈತರ ಸಮ್ಮುಖದಲ್ಲಿ ಸಭೆ ನಡೆಸಿ ಸಭೆಯ ನಿಯಮಗಳನ್ನು ಗ್ರಾಪಂ ಅಧಿಕಾರಿಗಳು, ಆಡಳಿತ ಮಂಡಳಿಯನ್ನು ಗಾಳಿಗೆ ತೂರಿದ್ದಾರೆ.
ರೈತರನ್ನು ಅಲೆದಾಡಿಸುತ್ತಾರೆ: ಬೆರಳೆಣಿಕೆಯಷ್ಟು ಗ್ರಾಮಸ್ಥರಲ್ಲಿ ರೈತ ಜವರೇಗೌಡ ಮಾತನಾಡಿ, ಕೃಷಿ ರೇಷ್ಮೆ ಮತ್ತು ತೋಟಗಾರಿಕಾ ಇಲಾಖೆಯಲ್ಲಿ ಕೃಷಿ ಉಪಕರಣ ಪಡೆಯಬೇಕಾದರೆ ತಿಂಗಳುಗಟ್ಟಲೆ ಅಲೆಯಬೇಕು. ಅಧಿಕಾರಿಗಳು ಸಬೂಬು ಹೇಳುತ್ತಾರೆ. ರೈತ ಬೆಳೆದ ಬೆಳೆಗಳಲ್ಲಿ ಇಳುವರಿ ಕಡಿಮೆಯಾದರೆ ಮಣ್ಣು ಪರೀಕ್ಷೆ ಮಾಡಿಸಿ ಎನ್ನುವ ಅಧಿಕಾರಿಗಳು ರೈತರಿಗೆ ಸಾವಿರಾರು ರೂ., ಖರ್ಚು ಮಾಡಿಸಿ ಮಣ್ಣು ಪರೀಕ್ಷೆ ಮಾಡದೆ ಅಲೆದಾಡಿಸುತ್ತಾರೆ ಎಂದು ಆರೋಪಿಸಿದರು.
ಸಭೆಯಲ್ಲಿ ರೇಷ್ಮೆ ಇಲಾಖೆ ಅಧಿಕಾರಿ ರಮೇಶ್, ಕೃಷಿ ಇಲಾಖೆ ಅಧಿಕಾರಿ ಮಂಜುಳಾ, ತಮ್ಮ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಸಭೆಯಲ್ಲಿ ತಿಳಿಸಿದರು. ಗ್ರಾಮ ಅಭಿವೃದ್ಧಿ ಅಧಿಕಾರಿ ಕುಮಾರ್, ಗ್ರಾಪಂ ಅಧ್ಯಕ್ಷ ಭೈರಯ್ಯ, ಉಪಾಧ್ಯಕ್ಷೆ ಮೀನಾಕ್ಷಿ, ಸದಸ್ಯರಾದ ಕುಮಾರ್, ವಸಂತ, ಮುತ್ತುರಾಜು, ಸತೀಶ್, ಗ್ರಾಮಸ್ಥರಿದ್ದರು.