Advertisement

ಯರೇಬೇಲೇರಿ ಹೆಗಲೇರಿದ ಸಮಸ್ಯೆಗಳು

12:26 PM Nov 18, 2019 | Suhan S |

ನರೇಗಲ್ಲ: ಮೂಲಸೌಲಭ್ಯಗಳ ಕೊರತೆಯಿಂದ ಯರೇಬೇಲೇರಿ ಗ್ರಾಮಕ್ಕೆ ಸಮಸ್ಯೆಗಳು ಹೆಗಲೇರಿವೆ. ಎಲ್ಲೆಂದರಲ್ಲಿ ಕೊಳಚೆ ಮತ್ತು ಮಳೆ ನೀರು ನಿಂತು ಜನರು ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ.

Advertisement

ಸ್ಪಂದಿಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದು, ಜನರು ಹಿಡಿಶಾಪ ಹಾಕುವಂತಾಗಿದೆ. ಯರೇಬೇಲೇರಿಯು ಕುರುಡಗಿ ಗ್ರಾಪಂಗೆ ಒಳಪಡುತ್ತದೆ. ನರಗುಂದ ಕ್ಷೇತ್ರದ ಶಾಸಕ, ಸಚಿವ ಸಿ.ಸಿ ಪಾಟೀಲ ಅವರ ಮತಕ್ಷೇತ್ರವಾಗಿದೆ. 3800 ಜನಸಂಖ್ಯೆ ಹೊಂದಿದೆ. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಇದರಿಂದಾಗಿ ಕೊಳಚೆ ನೀರು ರಸ್ತೆ ಮೇಲೆ ನಿಲ್ಲುತ್ತಿದ್ದು, ದುರ್ವಾಸನೆ ಹರಡಿದೆ. ದೊಡ್ಡ ಪ್ರಮಾಣದ ಮಳೆ ಬಂದರೆ ಮನೆಗಳಿಗೆ ಮಲಿನ ನೀರು ನುಗ್ಗುತ್ತಿದೆ. ಇಲ್ಲಿ ವಾಸಿಸುವ ಕೆಲ ಕುಟುಂಬಗಳು ಮನೆಬಿಟ್ಟು ಬೇರೆಡೆ ವಾಸ ಮಾಡಬೇಕಾದ ಅನಿವಾರ್ಯತೆ ಇದೆ. ರಸ್ತೆಗಳು ತಗ್ಗು, ದಿನ್ನೆಗಳಿಂದ ಕೂಡಿದ್ದು, ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ. ಗ್ರಾಮಕ್ಕೆ ಸಾರಿಗೆ ಬಸ್‌ ಗಳ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭಿಸುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಕೆಲವು ಓಣಿಗಳಲ್ಲಿರುವ ಬೀದಿ ದೀಪಗಳು ಬೆಳಗುತ್ತಿಲ್ಲ.

ಸಿಸಿ ರಸ್ತೆ ಇಲ್ಲ: ಕೇಂದ್ರ-ರಾಜ್ಯ ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ನೀಡುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಗ್ರಾಮದ ಕೆಲವೊಂದು ಓಣಿಗಳಲ್ಲಿ ಇಲ್ಲಿವರೆಗೆ ಯಾವುದೇ ಸಿಸಿ ರಸ್ತೆ ಕಾಮಗಾರಿ ಆರಂಭಿಸಿಲ್ಲ. ಕಾಟಾಚಾರಕ್ಕೆ ಎನ್ನುವಂತೆ ಕೆಲವು ಕಡೆ ಸಿಸಿ ರಸ್ತೆ ಮಾಡಿದ್ದು ಬಿಟ್ಟರೆ ಉಳಿದ ಕಡೆ ತಗ್ಗುದಿನ್ನೆಯ ರಸ್ತೆಯಲ್ಲಿ ಜನರು ಸಂಚರಿಸುತ್ತಿದ್ದಾರೆ.

ರೋಗಗಳ ಭೀತಿ : ಚರಂಡಿ ನೀರು ಅಲ್ಲಲ್ಲಿ ರಸ್ತೆಗೆ ಹರಿದಿದ್ದು, ಸೊಳ್ಳೆಕಾಟ ಹೆಚ್ಚಾಗಿರುವುದರಿಂದ ಜನರು ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದಾರೆ. ಗ್ರಾಮದ ನೀರಲಗಿ ರಸ್ತೆಯಲ್ಲಿರುವ ಪ್ಲಾಟ್‌ನಲ್ಲಿ ಎಲ್ಲೆಂದರಲ್ಲಿ ಚರಂಡಿ ನೀರು ನಿಂತಿರುವುದರಿಂದ ಇಲ್ಲಿನ ನಿವಾಸಿಗಳು ನಿತ್ಯ ಆಸ್ಪತ್ರೆಗೆ ಮುಖ ಮಾಡುತ್ತಿದ್ದಾರೆ. ಚರಂಡಿಗಳಲ್ಲಿ ಕಸ ಕಡ್ಡಿಗಳು ತುಂಬಿಕೊಂಡು ನಿವಾಸಿಗಳು ಪರದಾಡುವಂತಾಗಿದೆ. ಹತ್ತಾರು ಬಾರಿ ಗ್ರಾಪಂಗೆ ಮನವಿ ಸಲ್ಲಿಸಿದ್ದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ.

ಬಸ್‌ ಕೊರತೆ: ಗ್ರಾಮದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗಳಿಗಾಗಿ ಗದಗ, ನರೇಗಲ್ಲ, ರೋಣ ನಗರಗಳಿಗೆ ತೆರಳುತ್ತಾರೆ. ಆದರೆ, ಸೂಕ್ತ ಬಸ್‌ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಬ್ಬಿಗೇರಿ-ಯರೇಬೇಲೇರಿ ರಸ್ತೆ ಮಧ್ಯದ ನಾಗೇನಹಳ್ಳ ಸೇತುವೆ ಮಳೆ ಬಂದಾಗ ಕಿತ್ತುಹೋದ ಪರಿಸ್ಥಿತಿಯಲ್ಲಿ ಗ್ರಾಮಕ್ಕೆ ಯಾವುದೇ ಬಸ್‌, ಖಾಸಗಿ ವಾಹನ ಕೂಡ ಓಡಾಡುವುದಿಲ್ಲ. ಇದರಿಂದ ಗ್ರಾಮಸ್ಥರ ಕೆಲಸ ಕಾರ್ಯಗಳನ್ನು ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳುವ ಸ್ಥಿತಿ ಕೂಡ ಎದುರಾಗಿರುತ್ತದೆ.

Advertisement

ಜಲ ಕಂಟಕ: ಗ್ರಾಮದಲ್ಲಿ ಒಂದೇ ಶುದ್ಧ ಕುಡಿಯುವ ನೀರಿನ ಘಟಕ ಇದೆ. ಅದೂ ಕೆಲ ತಿಂಗಳಿಂದ ಸ್ಥಗಿತಗೊಂಡಿದ್ದು, ಅದನ್ನು ರಿಪೇರಿ ಮಾಡುವುದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮುಂದೆ ಬರುತ್ತಿಲ್ಲ ಎನ್ನುವುದು ಸಾರ್ವಜನಿಕರ ಅಳಲು

ಶೌಚಾಲಯ : ಸಾರ್ವಜನಿಕ ಮಹಿಳಾ ಶೌಚಾಲಯ ಇಲ್ಲದಿರುವುದರಿಂದ ಅನಿವಾರ್ಯವಾಗಿ ಮಹಿಳೆಯರು ಬಹಿರ್ದೆಸೆಗೆ ಬಯಲು ಪ್ರದೇಶ ಅವಲಂಬಿಸಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ವೃದ್ಧರು ಹೆಚ್ಚಿನ ಪ್ರಯಾಸ ಪಡುವಂತಾಗಿದೆ. ಈ ಬಗ್ಗೆ ಗ್ರಾಪಂ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುವುದು ಸ್ಥಳೀಯರ ದೂರು.

ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿ ಗಳು, ಅಧಿಕಾರಿಗಳು, ಸಚಿವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಸಚಿವ ಸಿ.ಸಿ. ಪಾಟೀಲ ಅವರ ಮತಕ್ಷೇತ್ರವಾಗಿರುವುದರಿಂದ ಅವರು ಈ ಗ್ರಾಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಬೇಕು. ಚರಂಡಿಗಳಲ್ಲಿ ನಿಂತಿರುವ ಕೊಳಚೆ ನೀರನ್ನು ಸ್ವತ್ಛಗೊಳಿಸುವುದಕ್ಕೆ ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮಂಜುನಾಥ ಮಲ್ಲಾಪುರ, ಹನುಮಂತಪ್ಪ ಕಂಬಳಿ, ಬಾಪುಗೌಡ ಮರಿಗೌಡರ, ಇಮಾಮಸಾಬ ಮುಲ್ಲಾನವರ, (ಗ್ರಾಮಸ್ಥರು)

 

-ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next