Advertisement

Afzalpur: ಭೀಮಾ ತೀರದಲ್ಲಿ ಹಾಡಹಗಲೇ ಗ್ರಾ. ಪಂ ಅಧ್ಯಕ್ಷನ ಭೀಕರ ಹತ್ಯೆ

03:26 PM Oct 16, 2023 | Team Udayavani |

ಕಲಬುರಗಿ: ಅಫಜಲಪುರ ತಾಲೂಕಿನ ಭೀಮಾ ತೀರದ ಚೌಡಾಪುರ ಬಸ್ ನಿಲ್ದಾಣ ಎದುರು ಹಾಡಹಗಲೇ ಗ್ರಾಮ‌ ಪಂಚಾಯಿತಿ ಅಧ್ಯಕ್ಷನ ಭೀಕರ ಹತ್ಯೆಯಾಗಿದೆ.‌

Advertisement

ಅಫಜಲಪುರ ತಾಲೂಕಿನ ಮದರಾ ಬಿ ಗ್ರಾಮ ಪಂಚಾಯತ್ ಅಧ್ಯಕ್ಷ ಗೌಡಪ್ಪ ಬಿರಾದಾರ (46) ಹತ್ಯೆಯಾದವರು. ಚೌಡಾಪುರ ಬಸ್ ನಿಲ್ದಾಣ ಎದುರು ನೂರಾರು ಜನರ ಸಮ್ಮುಖದಲ್ಲೇ ಬೊಲೆರೊ ವಾಹನದಲ್ಲಿ ಬಂದ ದುಷ್ಕರ್ಮಿಗಳು ಗೌಡಪ್ಪ ಬಿರಾದಾರ ಅವರನ್ನು ಮಾರಕಾಸ್ತ್ರದಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾರೆ.

ಗ್ರಾಮ ಪಂಚಾಯತ್ ಗೆ ಒಟ್ಟು ನಾಲ್ಕು ಸಲ ಸದಸ್ಯರಾಗಿ ಆಯ್ಕೆಯಾಗಿರುವ ಗೌಡಪ್ಪ ಬಿರಾದಾರ ಅವರು ಇತ್ತೀಚೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು.‌ ಎಂದಿನಂತೆ ಮದರಾ ಬಿ ಗ್ರಾಮದಿಂದ ಚೌಡಾಪುರಕ್ಕೆ ಬಂದು ಬಸ್ ನಿಲ್ದಾಣ ಎದುರು ನಿಂತಾಗ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಹತ್ಯೆಗೈದಿದ್ದಾರೆ.

ಭೀತಿಗೊಂಡ ಜನತೆ: ಬರ್ಬರವಾಗಿ ನಡೆದ ಈ ಹತ್ಯೆ ಪ್ರಕರಣದಿಂದ ಜನ ಭೀತಿಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಪರಿಸರದಲ್ಲಿ ಶಾಂತಿ ನೆಲೆಸಿತ್ತು, ಆದರೆ ಈ ಕೊಲೆ ಜನರಲ್ಲಿ ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ.‌

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ: ತೀವ್ರ ರಕ್ತಸ್ರಾವದಿಂದ ಗೌಡಪ್ಪಗೌಡ ಬಿರಾದರ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಮರಣೋತ್ತರ ಪರೀಕ್ಷೆಗೆ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

Advertisement

ಎರಡು ಕುಟುಂಬಗಳ ಮಧ್ಯದ ಹಳೆಯ ವೈಷಮ್ಯದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ದುಷ್ಕೃತ್ಯಗೈದ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಲಬುರಗಿ ಹೆಚ್ಚುವರಿ ಎಸ್.ಪಿ ಎನ್. ಶ್ರೀನಿಧಿ, ಡಿವೈಎಸ್ಪಿ ಗೋಪಿ ಬಿ. ಆರ್, ಪಿ.ಎಸ್.ಐ ಗಳಾದ ರಾಹುಲ್ ಪವಾಡೆ, ಮಡಿವಾಳಪ್ಪ ಬಾಗೋಡಿ, ಸವಿತಾ ಕಲ್ಲೂರ ಶ್ವಾನ‌ದಳದ ಸಿಬ್ಬಂದಿ, ಎಫ್.ಎಸ್.ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ.

ರಾಜಕೀಯ ದ್ವೇಷದ ಹಿನ್ನೆಲೆ: ಗೌಡಪ್ಪ ಬಿರಾದಾರ ಕಟ್ಟಾ ಕಾಂಗ್ರೆಸ್ ಹಾಗೂ ತಮ್ಮ ಬೆಂಬಲಿಗರಾಗಿದ್ದು, ಈ ಕೊಲೆಯು ಮನಸ್ಸಿಗೆ ಅಘಾತ ಮೂಡಿದೆ. ಕೊಲೆಯನ್ನು ಬಲವಾಗಿ ಖಂಡಿಸುತ್ತೇನೆ. ಆರೋಪಗಳನ್ನು ತಕ್ಷಣ ಬಂಧಿಸಬೇಕು. ಘಟನೆ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವರಣೆ ನೀಡುತ್ತೇನೆ. ಉದ್ಯೋಗ ವೈಷಮ್ಯ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಅಫಜಲಪುರ ಶಾಸಕ ಎಂ.ವೈ ಪಾಟೀಲ ಸಂಶಯ ವ್ಯಕ್ತಪಡಿಸಿದರು.

ಅಫಜಲಪುರ ತಾಲೂಕಿನ ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next