Advertisement

ಲಸಿಕೆ ಪಡೆಯಲು ಹಳ್ಳಿ ಜನರ ಹಿಂದೇಟು

02:44 PM Jun 01, 2021 | Team Udayavani |

ದಾವಣಗೆರೆ: ಕೋವಿಡ್ ಎರಡನೇ ಅಲೆ ಈಗ ಗ್ರಾಮಾಂತರ ಭಾಗಗಳಿಗೆ ವ್ಯಾಪಕವಾಗಿ ಹಬ್ಬುತ್ತಿದ್ದರೂ ರಾಜ್ಯದ ಗ್ರಾಮೀಣ ಪ್ರದೇಶದ ಜನರು ಮಾತ್ರಕೋವಿಡ್‌ ಲಸಿಕೆ ಪಡೆಯಲು ಇನ್ನೂ ಆಸಕ್ತಿ ತೋರಿಲ್ಲ. ಗ್ರಾಮೀಣ ಪ್ರದೇಶದ ಲಕ್ಷಾಂತರ ವಯೋವೃದ್ಧರು (60 ವರ್ಷ ಮೇಲ್ಪಟ್ಟವರು) ಇನ್ನೂ ಲಸಿಕಾ ಕೇಂದ್ರಗಳತ್ತ ಮುಖ ಮಾಡಿಲ್ಲ.

Advertisement

ಆರೋಗ್ಯ ಕಾರ್ಯಕರ್ತರು,ಕೋವಿಡ್ ಮುಂಚೂಣಿ ಕಾರ್ಯಕರ್ತರು, ಕೋವಿಡ್ ಯೋಧರ ಬಳಿಕ ಸರ್ಕಾರ ಮಾ.1ರಿಂದಲೇ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟ ಸಹಅಸ್ವಸ್ಥತೆ (ಕೊಮಾರ್ಬಿಡ್‌)ಹೊಂದಿರುವವರಿಗೆ ಲಸಿಕೆ ನೀಡಲು ಆರಂಭಿಸಿದೆ. ಈಗ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡುತ್ತಿದೆ. ಆದರೆ, ಲಸಿಕೆ ನೀಡಲು ಶುರು ಮಾಡಿ 3 ತಿಂಗಳಾದರೂ ಗ್ರಾಮೀಣ ಪ್ರದೇಶದ ವಯೋವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆಯುಳ್ಳವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಲೇ ಇದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆ ವೆಬ್‌ಸೈಟ್‌ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಗ್ರಾಪಂಗಳಲ್ಲಿ 37.65 ಲಕ್ಷ ಜನರು 60 ವರ್ಷ ಮೇಲ್ಪಟ್ಟವರಿದ್ದಾರೆ. ಇವರಲ್ಲಿಕೇವಲ 2.11 ಲಕ್ಷ ಜನ ಮಾತ್ರ ಎರಡೂ ಹಂತದ ಲಸಿಕೆ ಪಡೆದಿದ್ದಾರೆ. ಮೊದಲ ಹಂತದ ಲಸಿಕೆಯನ್ನು ಕೇವಲ 12 ಲಕ್ಷ ಜನ ಪಡೆದಿದ್ದಾರೆ. ಇನ್ನೂ 9.80 ಲಕ್ಷ ವಯೋವೃದ್ಧರು 2ನೇ ಲಸಿಕೆ ಪಡೆಯುವುದು ಬಾಕಿ ಇದೆ. 23 ಲಕ್ಷ ವಯೋವೃದ್ಧರು ಯಾವುದೇ ಲಸಿಕೆ ಪಡೆದಿಲ್ಲ.

ಇದೇ ಪ್ರಕಾರ ರಾಜ್ಯದ ಗ್ರಾಪಂಗಳಲ್ಲಿ 45 ವರ್ಷ ಮೇಲ್ಪಟ್ಟ ಸಹಅಸ್ವಸ್ಥತೆ ಇರುವವರು 38.61 ಲಕ್ಷ ಜನ ಇದ್ದಾರೆ. ಇವರಲ್ಲಿ ಕೇವಲ 1.53 ಲಕ್ಷ ಜನ ಮಾತ್ರ ಎರಡೂ ಹಂತದ ಲಸಿಕೆ ಪಡೆದುಕೊಂಡಿದ್ದಾರೆ. 8.57 ಲಕ್ಷ ಜನ ಮೊದಲಹಂತದ ಲಸಿಕೆಹಾಕಿಸಿಕೊಂಡಿದ್ದಾರೆ. ಇನ್ನೂ 28 ಲಕ್ಷ ಜನರು ಮೊದಲ ಹಂತದ ಲಸಿಕೆಯನ್ನೇ ಹಾಕಿಸಿಕೊಂಡಿಲ್ಲ. 6.94 ಲಕ್ಷ ಜನರು ಎರಡನೇ ಹಂತದ ಲಸಿಕೆ ಪಡೆಯುವುದು ಬಾಕಿ ಇದೆ.

ಜಿಲ್ಲೆಗಳ ಪ್ರಗತಿ ಹೇಗಿದೆ?: 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಎರಡೂ ಹಂತದ ಲಸಿಕೆ ಹಾಕಿಸಿಕೊಂಡವರಲ್ಲಿ ಪ್ರಸ್ತುತ ಬಾಗಲಕೋಟೆ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, 15,699ಕ್ಕೂ ಹೆಚ್ಚು ವಯೋವೃದ್ಧರು ಲಸಿಕೆ ಹಾಕಿಸಿಕೊಂಡಿದ್ದಾರೆ. ಬೀದರ್‌ ಜಿಲ್ಲೆಯಲ್ಲಿ 14,513ಕ್ಕೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ 13,170ಜನರು ಎರಡೂ ಹಂತದ ಲಸಿಕೆ ಹಾಕಿಸಿಕೊಂಡಿದ್ದಾರೆ. ಇನ್ನು 60 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಕೊನೆಯ ಸ್ಥಾನದಲ್ಲಿರುವ ಯಾದಗಿರಿ ಜಿಲ್ಲೆಯಲ್ಲಿ ಕೇವಲ 128 ಜನ ಎರಡೂ ಹಂತದ ಲಸಿಕೆ ಹಾಕಿಕೊಂಡಿದ್ದಾರೆ. ಇಲ್ಲಿ 60 ವರ್ಷ ಮೇಲ್ಪಟ್ಟವರು 5781 ಜನರಿದ್ದು ಇವರಲ್ಲಿ 1385 ಜನರು ಮಾತ್ರ ಮೊದಲ ಹಂತದ ಲಸಿಕೆ ಪಡೆದುಕೊಂಡಿದ್ದಾರೆ.

Advertisement

45ವರ್ಷ ಮೇಲ್ಪಟ್ಟ (45ರಿಂದ 59ವರ್ಷದೊಳಗಿನ) ಸಹಅಸ್ವಸ್ಥತೆ ಇರುವವರ ವಿಭಾಗದಲ್ಲಿ ಕಲಬುರಗಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು ಇಲ್ಲಿ 14,079 ಜನರು ಎರಡೂ ಹಂತದ ಲಸಿಕೆ ಹಾಕಿಸಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಬೀದರ ಜಿಲ್ಲೆಯಿದ್ದು ಇಲ್ಲಿ 12,633 ಜನ, ಬಾಗಲಕೋಟೆ ಜಿಲ್ಲೆಯಲ್ಲಿ 11,174 ಜನ ಎರಡೂ ಹಂತದ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ವಿಭಾಗದಲ್ಲಿಯೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದು ಇಲ್ಲಿಕೇವಲ 20 ಜನ ಎರಡೂ ಹಂತದ ಲಸಿಕೆ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ ಸಹಅಸ್ವಸ್ಥತೆ ಇರುವವರ ಸಂಖ್ಯೆ1481 ಇದೆ. ಇವರಲ್ಲಿ206 ಜನ ಮೊದಲ ಹಂತದ ಲಸಿಕೆ ಪಡೆದಿದ್ದಾರೆ. 186 ಜನ ಎರಡನೇ ಹಂತದ ಲಸಿಕೆ ಪಡೆಯುವುದು ಬಾಕಿ ಇದ್ದು1275 ಜನ ಲಸಿಕೆ ಪಡೆಯಬೇಕಾಗಿದೆ.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ 60 ವರ್ಷ ಮೇಲ್ಪಟ್ಟವರು (37.65 ಲಕ್ಷ )ಹಾಗೂ 45 ವರ್ಷ ಮೇಲ್ಪಟ್ಟ ವರು (38.57 ಲಕ್ಷ) ಸೇರಿ ಒಟ್ಟು 76.22 ಲಕ್ಷ ಜನರಿದ್ದು ಇವರಲ್ಲಿ ಸರಾಸರಿ 24-25 ಲಕ್ಷಜನರು ಮಾತ್ರ ಮೊದಲ ಹಾಗೂ ಎರಡನೇ ಹಂತದ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಎರಡು ವಿಭಾಗದ ಇನ್ನೂ50 ಲಕ್ಷಕ್ಕೂ ಅಧಿಕ ಜನರು ಲಸಿಕೆ ಹಾಕಿಕೊಳ್ಳುವುದು ಬಾಕಿ ಇದೆ.

ಹಿನ್ನಡೆಗೆಕಾರಣ ಏನು? :

ಆರಂಭದಲ್ಲಿ ಗ್ರಾಮೀಣ ಜನರಲ್ಲಿ ಲಸಿಕೆ ಬಗ್ಗೆ ಗೊಂದಲಗಳಿದ್ದವು. ನಾವು ಆರೋಗ್ಯವಾಗಿದ್ದಾಗ ಲಸಿಕೆ ಏಕೆ ಎಂಬ ಭಾವನೆ ಕೆಲವರಲ್ಲಿದ್ದರೆ, ಮತ್ತೆ ಕೆಲವರಲ್ಲಿ ನಾವು ಬೇರೆ ಬೇರೆ ಕಾಯಿಲೆಗಳಿಗೆ ಔಷಧಿ ತೆಗೆದುಕೊಳ್ಳುತ್ತಿದ್ದು ಈ ಹಂತದಲ್ಲಿ ಲಸಿಕೆ ಪಡೆದರೆ ಆರೋಗ್ಯದಲ್ಲಿ ಏರುಪೇರಾಗಬಹುದು ಎಂಬ ಗೊಂದಲವಿತ್ತು. ಆದರೆ, ಎರಡನೇ ಅಲೆ ಹಳ್ಳಿಗಳಲ್ಲಿಹೆಚ್ಚಾಗುತ್ತಿದ್ದಂತೆ ಲಸಿಕೆ ಬೇಡಿಕೆ ಹೆಚ್ಚಾಗಿ ಕೊರತೆಗೂ ಕಾರಣವಾಯಿತು. ಇದರಿಂದಾಗಿ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕವಾಗಿ ಲಸಿಕೆ ಸಿಗಲಿಲ್ಲ. ಲಸಿಕೆಗಾಗಿಮೂರ್‍ನಾಲ್ಕು ತಾಸು ಸರದಿಯಲ್ಲಿ ನಿಲ್ಲುವುದಕ್ಕೆ ಬೇಸತ್ತು ಲಸಿಕೆಯಿಂದ ಹಿಂದುಳಿದರು. ಇನ್ನು ನಗರಗಳಿಗೆ ಹತ್ತಿರವಿರುವಹಳ್ಳಿಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಗರ ವಾಸಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಗ್ರಾಮೀಣ ಜನರು ಲಸಿಕೆಯಿಂದಹಿಂದೆ ಸರಿದರು.ಹೀಗಾಗಿ ಗ್ರಾಮೀಣಪ್ರದೇಶದಲ್ಲಿ ಕೋವಿಡ್‌ ಲಸಿಕೆಗೆ ಭಾರೀ ಹಿನ್ನಡೆಯಾಗಿದೆ.

 ಗ್ರಾಪಂಗಳಲ್ಲಿ ಲಸಿಕಾನುಷ್ಠಾನ :  (ಸೋಮವಾರ ರಾತ್ರಿ 9 ಗಂಟೆವರೆಗಿನ ಮಾಹಿತಿ)

„ 60 ವರ್ಷ ಮೇಲ್ಪಟ್ಟವರ ಜನಸಂಖ್ಯೆ- 37,69,3096

„ 60 ವರ್ಷ ಮೇಲ್ಪಟ್ಟ ಮೊದಲ ಲಸಿಕೆ ಪಡೆವರ ಸಂಖ್ಯೆ-12,00,246

„ 60 ವರ್ಷ ಮೇಲ್ಪಟ್ಟ ಮೊದಲ ಲಸಿಕೆ ಪಡೆಯಲು ಬಾಕಿ ಇರುವವರು- 25,80,899

„ 60 ವರ್ಷ ಮೇಲ್ಪಟ್ಟ ಎರಡನೇ ಲಸಿಕೆ ಪಡೆವರು-2,11,886

„ 60 ವರ್ಷ ಮೇಲ್ಪಟ್ಟ ಎರಡನೇ ಲಸಿಕೆ ಪಡೆಯಲು ಬಾಕಿ ಇರುವವರು-9,80,329

„ 45-59 ವರ್ಷದೊಳಗಿನ ನಿರ್ದಿಷ್ಟ ಸಹ ಅಸ್ವಸ್ಥತೆ ಇರುವವರು- 38,61,481

„ 45-59 ವರ್ಷದ ಸಹಅಸ್ವಸ್ಥತೆಯಲ್ಲಿ ಮೊದಲ ಹಂತದ ಲಸಿಕೆ ಪಡೆದವರು-8,57,643

„ 45-59 ವರ್ಷ ಸಹಅಸ್ವಸ್ಥತೆಯಲ್ಲಿ ಮೊದಲ ಲಸಿಕೆ ಪಡೆಯಲು ಬಾಕಿ ಇರುವವರು – 30,48,573

„ 45-59 ವರ್ಷ ಸಹಅಸ್ವಸ್ಥತೆಯಲ್ಲಿ ಎರಡನೇ ಲಸಿಕೆ ಪಡೆದವರು-1,53,879

„ 45-59 ವರ್ಷ ಸಹಅಸ್ವಸ್ಥತೆಯಲ್ಲಿ ಎರಡನೇ ಲಸಿಕೆ ಪಡೆಯಲು ಬಾಕಿ ಇರುವವರು-6,94,371

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next