ಮುಳಗುಂದ: ಶಾಲಾ ಕೊಠಡಿ ನಿರ್ಮಾಣಕ್ಕಾಗಿ ಕೂಲಿ ಕಾರ್ಮಿಕರಿಂದ ಹಿಡಿದು ಸಿಬ್ಬಂದಿ, ಸಮಿತಿ ಹಾಗೂ ಹಳೇ ವಿದ್ಯಾರ್ಥಿಗಳ ಜತೆ ಗ್ರಾಮಸ್ಥರು ಸೇರಿಕೊಂಡು ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ತರಗತಿಗಳ ಕೊಠಡಿ, ಸಭಾಗೃಹ, ಅಕ್ಷರ ದಾಸೋಹ ಭವನ ನಿರ್ಮಾಣ ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಿರುವುದಕ್ಕೆ ಕುರ್ತಕೋಟಿ ಗ್ರಾಮ ಸಾಕ್ಷಿಯಾಗಿದೆ.
ಸಮೀಪದ ಕುರ್ತಕೋಟಿ ಗ್ರಾಮದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಮನೋಹರ ಅಮರಪ್ಪ ಇಮಾನತಿ ಪ್ರೌಢಶಾಲೆಯಲ್ಲಿ ಇಂಥ ಅಪರೂಪದ ಕಾಮಗಾರಿ ಭರದಿಂದ ಸಾಗಿದ್ದು, ಗ್ರಾಮಸ್ಥರೆಲ್ಲರೂ ಒಮ್ಮನಸ್ಸಿನಿಂದ ಕೆಲಸ ನಿರ್ವಹಿಸುತ್ತಾ ಶಾಲಾ ಕಟ್ಟಡ ನಿರ್ಮಾಣ ಕಾರ್ಯದ ವೇಗ ಹೆಚ್ಚಿಸಿದ್ದಾರೆ.
1981ರಲ್ಲಿ ಗ್ರಾಪಂ ಕಟ್ಟದಲ್ಲಿದ್ದ ಶಾಲೆ, 2007 ರಿಂದ 2009 ವರೆಗೆ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿತ್ತು. ನಂತರ ಗ್ರಾಮದ ಹಿರಿಯರ ಹಾಗೂ ದಾನಿಗಳ ಸಹಾಯದಿಂದ 2010ರಲ್ಲಿ ಐದು ಎಕರೆ ವಿಶಾಲ ಜಾಗೆಯಲ್ಲಿ ಸುಸಜ್ಜಿತವಾದ ಶಿಲಾ ಕಟ್ಟಡ ನಿರ್ಮಾಣವಾಗಿದೆ. ಆದರೆ ಕುರ್ತಕೋಟಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚುತ್ತಿರುವುದರಿಂದ ಮೇಲ್ಭಾಗದಲ್ಲಿ ಹೆಚ್ಚುವರಿಯಾಗಿ ಕೊಠಡಿ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: ರೈಲ್ವೆ ಮಾರ್ಗ ಪದೇ ಪದೇ ಬದಲಿಗೆ ಆಕ್ರೋಶ
ಈ ಕಾಮಗಾರಿಗೆ ಸಂಸ್ಥೆಯ ಆಡಳಿತ ಮಂಡಳಿ, ನಿವೃತ್ತ ಸಿಬ್ಬಂದಿ, ಹಳೇ ವಿದ್ಯಾರ್ಥಿಗಳು, ಪಾಲಕರು ಗ್ರಾಮಸ್ಥರು ಸೇರಿದಂತೆ ಕಟ್ಟಡ ಕಾರ್ಮಿಕರು ಸಹಿತ ಮೂರು ತಿಂಗಳಲ್ಲಿ ಐದು ದಿನ ಉಚಿತ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೇ, ಆಡಳಿತ ಮಂಡಳಿ, ಸಿಬ್ಬಂದಿ ತಾವೇ ನಿಂತು ಮೇಲುಸ್ತುವಾರಿ ವಹಿಸುತ್ತಿರುವುದು ಮಾದರಿಯಾಗಿದೆ.
ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ನಮ್ಮ ಹೈಸ್ಕೂಲ್ ನಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯಕ್ಕೆ ಸ್ಮಾರ್ಟ್ ಕ್ಲಾಸ್ ಆರಂಭಿಸಿದ್ದೇವೆ. ಹಾಗಾಗಿ, ನೂತನ ಕಟ್ಟಡವನ್ನು ಎಲ್ಲರೂ ಒಮ್ಮನಸ್ಸಿನಿಂದ, ಯಾವುದೇ ಸರ್ಕಾರಿ ಅನುದಾನವಿಲ್ಲದೆ ವಿಶೇಷ ಆಸಕ್ತಿಯಿಂದ ಕಟ್ಟಡ ನಿರ್ಮಿಸುತ್ತಿದ್ದೇವೆ. ಎಲ್ಲರೂ ತನು, ಮನ, ಧನದಿಂದ ಸಹಾಯ ಮಾಡುತ್ತಿದ್ದಾರೆ. ಅಲ್ಲದೇ, ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಡಿಜಿಟಲ್ ಲೈಬ್ರರಿ, ಜಿಮ್ ನಿರ್ಮಾಣವಾಗಿದ್ದು, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಉತ್ತಮ ವಾತಾವರಣ ನಿರ್ಮಿಸಲಾಗುತ್ತಿದೆ.
-ಅಪ್ಪಣ್ಣ ಇನಾಮತಿ, ಶಾಲಾ ಸಮಿತಿ ಅಧ್ಯಕ್ಷರು.