Advertisement
ಹೌದು.., ಡಿಸಿಎಂ ಡಿ.ಕೆ.ಶಿವಕುಮಾರ್ ತವರು ಜಿಲ್ಲೆಯಾಗಿರುವ ರಾಮನಗರ ಜಿಲ್ಲೆಯಲ್ಲಿ ಗೃಹ ಜ್ಯೋತಿ ನೋಂದಣಿ ಕಾರ್ಯ ಬಿರುಸಿನಿಂದ ನಡೆದಿ ದ್ದು, ಗ್ರಾಮಾಂತರ ಭಾಗದಲ್ಲಿ ಗ್ರಾಮಒನ್ ಕೇಂದ್ರಗಳ ಮೂಲ ಕ ಉಚಿತ ವಿದ್ಯುತ್‌ಗೆ ನೋಂದಣಿ ಮಾಡಿಸಿ ರುವ ಜನರ ಸಂಖ್ಯೆ ಹೆಚ್ಚಿದೆ. ನೋಂದಣಿಗೆ ಗ್ರಾಮ ಒನ್, ಗ್ರಾಪಂ ಕಚೇರಿ ಬಾಪೂಜಿ ಸೇವಾಕೇಂದ್ರ, ಬೆಸ್ಕಾಂ ಕಚೇರಿ, ಗ್ರಾಹಕ ಸೇವಾ ಕೇಂದ್ರ ಹಾಗೂ ಮೊಬೈಲ್ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿತ್ತು. ಆದರೆ, ಗ್ರಾಮೀಣ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವುದು ಗ್ರಾಮಒನ್ ಕೇಂದ್ರಗಳಲ್ಲಿ. ಜಿಲ್ಲಾದ್ಯಂತ 3.49 ಲಕ್ಷದಷ್ಟು ಗ್ರಾಹಕರು ಗೃಹ ಬಳಕೆಯ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂಬ ಅಂದಾಜಿದ್ದು, ಇದರಲ್ಲಿ 2.52 ಲಕ್ಷ ಮಂದಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 71 ಸಾವಿರ ಗ್ರಾಹಕರು ಜಿಲ್ಲೆಯ 138 ಗ್ರಾಮಒನ್ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
Related Articles
Advertisement
ಕಾರ್ಯ ನಿರ್ವಹಿಸುವುದೇ ಕಷ್ಟ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಗ್ರಾಮಒನ್ ಸಿಬ್ಬಂದಿಗಳು, ನಮಗೆ ತಪ್ಪು ಮಾಹಿತಿ ನೀಡಿದ್ದಾರೆ. ಸಚಿವರು ಹೇಳಿದ ಬಳಿಕವೂ ನಾವು ಹಣ ಪಡೆದರೆ ಸಾರ್ವಜನಿಕರು ಗಲಾಟೆ ಮಾಡುತ್ತಿದ್ದರು. ನಾವು ಉಚಿತವಾಗಿ ಮಾಡಿದ್ದು, ಇದೀಗ ದುಬಾರಿ ಬಿಲ್ ಕಳುಹಿಸಿ ಗೊಂದಲ ಮೂಡಿಸಿದ್ದಾರೆ. ಇನ್ನು ಗ್ರಾಮ ಒನ್‌ನಲ್ಲಿ ನೋಂದಣಿ ಮಾಡಿಸಿದರೆ ಮಾತ್ರ ಶುಲ್ಕ ಎನ್ನುವವರು ಮೊಬೈಲ್, ಗ್ರಾಪಂ, ಬೆಸ್ಕಾಂ ಮೂಲಕ ನೋಂದಣಿ ಮಾಡಿಸಿದವರಿಗೆ ಉಚಿತ ನೀಡಿರು ವು ದು ಯಾಕೆ, ಇದೇ ರೀತಿ ಪರಿಸ್ಥಿತಿ ಆದರೆ ಗ್ರಾಮ ಒನ್ ಕೇಂದ್ರಗಳು ಕಾರ್ಯ ನಿರ್ವಹಿಸು ವುದೇ ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಗೊಂದಲ ಆಗಿದ್ದು ಎಲ್ಲಿ?: ಗೃಹಜ್ಯೋತಿಗೆ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಣಿ ಮಾಡುವಾಗ ಆರಂಭದಲ್ಲಿ ಪ್ರತಿ ಗ್ರಾಹಕರಿಂದ 20 ರೂ. ಶುಲ್ಕವನ್ನು ಸ್ವೀಕರಿಸಲಾಗುತಿತ್ತು. ಗ್ರಾಮಒನ್ ಪ್ರಾಂಚೈಸಿಗಳು ಈಗಾಗಲೇ ಸೇವಾ ಸಿಂಧೂ ವೆಬ್ ಪೋರ್ಟಲ್ ಖಾತೆಯಲ್ಲಿ ಹಣವನ್ನು ಪ್ರೀ ಪೇಯ್ಡ ವಿಧಾನದ ಮೂಲಕ ತುಂಬಿಸಿದ್ದು, ಈ ಹಣದಲ್ಲಿ ಇವರು ಸೇವೆ ನೀಡಿದಂತೆ ಹಣ ಕಡಿತವಾಗುತಿತ್ತು. ಹಣ ಖಾಲಿಯಾಗುತ್ತಿದ್ದಂತೆ ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡಿಸಬೇಕಿತ್ತು. ಆದರೆ, ಗೃಹಜ್ಯೋತಿ ನೋಂದಣಿ ಆರಂಭಗೊಳ್ಳುತ್ತಿದ್ದಂತೆ ಮಾಧ್ಯಮಗಳ ಮೂಲಕ ಉಪಮುಖ್ಯ ಮಂತ್ರಿ ಹಾಗೂ ಇಂಧನ ಸಚಿವರು ಉಚಿತ ಎಂದು ಹೇಳಿಕೆ ನೀಡಿದ ಹಿನ್ನೆಲೆ ಹಣ ಪಡೆಯುವುದನ್ನು ನಿಲ್ಲಿಸಲಾಗಿತ್ತು. ಕೆಲ ಗ್ರಾಮಒನ್‌ಗಳು ಹಣ ಪಡೆದಿದ್ದರೆ, ಮತ್ತೆ ಕೆಲ ಗ್ರಾಮಒನ್‌ಗಳಲ್ಲಿ ಉಚಿತವಾಗಿ ನೋಂದಣಿ ಮಾಡಲಾಗಿದೆ. ಇದೀಗ ಬಿಲ್ ಕಟ್ಟಿ ಎಂದು ಹೇಳುತ್ತಿರುವುದು ಪ್ರಾಂಚೈಸಿಗಳು ಬೆಚ್ಚಿ ಬೀಳುವಂತೆ ಮಾಡಿದೆ.
ಗೃಹಜ್ಯೋತಿಗೆ ಉಚಿತ ನೋಂದಣಿ ಎಂದು ಎಲ್ಲಿಯೂ ಹೇಳಿಲ್ಲ. ಹಣ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ತಿಳಿಸಿದ್ದೇವು. ಇದೀಗ ಬಿಲ್ ಕಳುಹಿಸಿದ್ದೇವೆ. ಗೃಹಲಕ್ಷ್ಮೀ ನೋಂದಣಿಗೆ ಮಾತ್ರ ಉಚಿತವಾಗಿ ಮಾಡುವಂತೆ ತಿಳಿಸಲಾಗಿದೆ. ● ವೇಣು, ಜಿಲ್ಲಾ ಸಂಯೋಜಕ, ಗ್ರಾಮಒನ್ ಕೇಂದ್ರ
ಈಗಾಗಲೇ ಆಯುಷ್ಮಾನ್ ಕಾರ್ಡ್ ಮಾಡಿಸಿ ನಮಗೆ ಇನ್ನೂ ಹಣ ನೀಡಿಲ್ಲ. ಗೃಹಜ್ಯೋತಿ ಉಚಿತ ಎಂದು ಇದೀಗ ಹಣಕಟ್ಟಿ ಎನ್ನುತ್ತಿದ್ದಾರೆ. ಗೃಹಲಕ್ಷ್ಮೀ ಬಗ್ಗೆಯೂ ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರೆ. ಮುಂದೆ ಇದೇ ರೀತಿ ಮಾಡಿದರೆ ಏನು ಮಾಡುವುದು. ಇದೇ ರೀತಿ ಆದರೆ ನಾವು ಗ್ರಾಮಒನ್ ಕೇಂದ್ರ ನಿರ್ವಹಿಸಲು ಸಮಸ್ಯೆಯಾಗುತ್ತದೆ. ಬೀಗ ಹಾಕಿ ಮನೆಗೆ ಹೋಗಬೇಕಾಗುತ್ತದೆ. ● ಹೆಸರೇಳಲಿಚ್ಚಿಸದ, ಗ್ರಾಮಒನ್ ಪ್ರಾಂಚೈಸಿ
– ಸು.ನಾ.ನಂದಕುಮಾರ್