ಕನಕಪುರ: ಗ್ರಾಪಂ ಅಧ್ಯಕ್ಷರು ಮತ್ತು ಅಧಿಕಾರಿಗಳು ಮಾಡಿರುವ ಭ್ರಷ್ಟಾಚಾರ ಮರೆಮಾಚಲು ಉದ್ದೇಶ ಪೂರ್ವಕವಾಗಿ ಗ್ರಾಮ ಸಭೆಯನ್ನು ಮುಂದೂಡಿದ್ದಾರೆ ಎಂದು ಅಚ್ಚಲು ಗ್ರಾಪಂ ಸದಸ್ಯ ಕುಮಾರಸ್ವಾಮಿ ಆರೂಪಿಸಿದರು.
ನಗರದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಪಂ ಅಧ್ಯಕ್ಷೆ ಶಿವಮ್ಮ ಅವರ ಅನುಮತಿ ಮೇರೆಗೆ ನೋಡಲ್ ಅಧಿಕಾರಿ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ ಅವರ ಸಮ್ಮುಖದಲ್ಲಿ ಕರಪತ್ರಗಳನ್ನು ಮುದ್ರಿಸಿ ಹಂಚಿ ಮಾ.10ರ ಶುಕ್ರವಾರ 2023-24 ನೇ ಸಾಲಿನ ಗ್ರಾಮಸಭೆಯನ್ನು ಕರೆಯಲಾಗಿತ್ತು. ಆದರೆ, ಅಧ್ಯಕ್ಷ ಶಿವಮ್ಮ ಮತ್ತು ನೋಡಲ್ ಅಧಿಕಾರಿ ಇಒ ಭೈರಪ್ಪ ಅವರೇ ನಿಗದಿ ಮಾಡಿದ ಸಭೆ ನಡೆದರೆ ಆಕ್ರಮ ಬಯಲಾಗುವುದೆಂದು ಉದ್ದೇಶಪೂರ್ವಕವಾಗಿ ಸಭೆಗೆ ಗೈರಾಗಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂನಲ್ಲಿ ಪತಿರಾಯರದ್ದೇ ದರ್ಬಾರು: ಅಚ್ಚಲು ಗ್ರಾಪಂನಲ್ಲಿ ಅಧ್ಯಕ್ಷ ಶಿವಮ್ಮ ಕೇವಲ ನಾಮ್ ಕೇ ವಾಸ್ತೇಗಷ್ಟೆ, ಅಧ್ಯಕ್ಷರು. ಇಲ್ಲಿ ಇವರ ಪತಿರಾಯರದ್ದೇ ದರ್ಬಾರು. ಅಧ್ಯಕ್ಷ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಅಧ್ಯಕ್ಷರ ಬದಲು ಅವರ ಪತಿ ಕೆಂಗೆಗೌಡ ಅಧಿಕಾರ ನಡೆಸುತ್ತಿದ್ದಾರೆ . ಗ್ರಾಪಂ ಅಧ್ಯಕ್ಷ ಶಿವಮ್ಮ ಅವರಿಗೆ ಸೇರಿದ 26 ಎಕರೆ ಜಮೀನಿನಲ್ಲಿ 1,300 ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿರುವ ಪೈಪ್ ತಯಾರಿಕೆ ಘಟಕಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದು, ಗ್ರಾಪಂಗೆ ತೆರಿಗೆ ಕಟ್ಟದಿದ್ದರೂ, ನಿಯಮ ಬಾಹೀರವಾಗಿ ಅಧಿಕಾರಿಗಳು ಎನ್‌ಒಸಿ ಕೊಟ್ಟಿದ್ದಾರೆ ಎಂದು ಆಪಾದಿಸಿದರು.
ತೆರಿಗೆ ಹಣ ವಂಚನೆ: ಗ್ರಾಪಂಗೆ ಬರಬೇಕಾದ ತೆರಿಗೆಯಲ್ಲೂ ವಂಚನೆ ಮಾಡುತ್ತಿದ್ದಾರೆ. ಸಾಮಾನ್ಯ ರೈತ ಇಟ್ಟಿಗೆ ಕಾರ್ಖಾನೆ ಕೋಳಿ ಫಾರಂ ನಡೆಸಿದರೆ ತೆರಿಗೆ ಸಂಗ್ರಹ ಮಾಡುತ್ತಾರೆ. ಆದರೆ, ಹೊಂಗಾಣಿ ದೊಡ್ಡಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ತೆರಿಗೆ ಸಂಗ್ರಹ ಮಾಡುತ್ತಿಲ್ಲ. ಗ್ರಾಪಂ ಸದಸ್ಯ ನಂಜೇಗೌಡ ಎಂಬುವರು ಕಲ್ಲು ಗಣಿಗಾರಿಕೆ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ. ಹಾಗಾಗಿ, ಗಣಿಗಾರಿಕೆಯಿಂದ ಯಾವುದೇ ತೆರಿಗೆ ಸಂಗ್ರಹ ಮಾಡದೆ, ಕಲ್ಲು ಗಣಿಗಾರಿಕೆ ಮಾಡುವವರೊಂದಿಗೆ ಅಧಿಕಾರಿಗಳು ಸದಸ್ಯ ನಂಜೇಗೌಡ ಶಾಮೀಲಾಗಿ ಕಿಕ್ ಬ್ಯಾಕ್ ಪಡೆದು ಗ್ರಾಪಂ ಗೆ ಬರಬೇಕಾದ ತೆರಿಗೆ ಹಣ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಕ್ರಮ ವ್ಯವಹಾರ ದಾಖಲೆ ಸಮೇತ ಸಾಬೀತು: ಗ್ರಾಪಂ ನಲ್ಲಿ ಕೋಟಿಗೂ ಹೆಚ್ಚು ಅಕ್ರಮ ವ್ಯವಹಾರ ನಡೆದಿದೆ ದಾಖಲೆ ಸಹಿತ ಸಾಬೀತು ಮಾಡಿದ್ದೇನೆ. ಹಿಂದೆ ನಡೆದ ಸಭೆಗಳಲ್ಲಿ ದಾಖಲಾತಿ ಇಲ್ಲ ಎಂದು ಸಬೂಬು ಹೇಳಿ ಸಭೆ ಮುಂದೂಡಿ, ಈಗ ಸಭೆ ಕರೆದಿದ್ದರು. ಈಗಲೂ ಸಹ ಅವರ ಲೋಪ ದೋಷಗಳು ಸಾರ್ವಜನಿಕವಾಗಿ ಬಯಲಾ ಗುತ್ತವೆ ಎಂಬ ಉದ್ದೇಶದಿಂದಲೇ ಪದೇಪದೇ ಸಭೆ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದರು.