ಹುಬ್ಬಳ್ಳಿ: ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಣ್ಣೆಹಳ್ಳ, ತುಪ್ಪರಿ ಹಳ್ಳ ಹಾಗೂ ನಿಗರಿ ಹಳ್ಳಗಳು ತುಂಬಿ ಹರಿದ ಪರಿಣಾಮ ತಾಲೂಕಿನಲ್ಲಿ ವಿವಿಧ ಗ್ರಾಮಗಳು ಜಲಾವೃತಗೊಂಡಿದ್ದು, ಮನೆಗಳು ಸೇರಿದಂತೆ ಶಾಲೆಗಳಿಗೆ ಹೆಚ್ಚಿನ ನೀರು ನುಗ್ಗಿದ್ದರಿಂದ ಗ್ರಾಮಸ್ಥರು ರಾತ್ರಿಯಿಡೀ ಪರದಾಡುವಂತಾಗಿದೆ. ಪೀಠೊಪಕರಣ, ಸಾಮಗ್ರಿ, ಆಹಾರಧಾನ್ಯ ಒಳಗೊಂಡು ಇನ್ನಿತರೆ ವಸ್ತುಗಳು ನೀರಿನಲ್ಲಿ ಮುಳುಗಿ ಅಪಾರ ಹಾನಿಯುಂಟಾಗಿದೆ.
ಕಿರೇಸೂರು, ಹೆಬಸೂರ, ಇಂಗಳಹಳ್ಳಿ, ಮಂಟೂರು, ಅಮರಗೋಳ, ನಾಗರಹಳ್ಳಿ ಸೇರಿದಂತೆ ಅಣ್ಣಿಗೇರಿ ಹಾಗೂ ಮತ್ತಿತರ ಪ್ರದೇಶಗಳು ಜಲಾವೃತಗೊಂಡಿವೆ. ಪ್ರವಾಹ ಪೀಡಿತ ಕಿರೇಸೂರ, ಹೆಬಸೂರ, ಇಂಗಳಹಳ್ಳಿ, ಅಣ್ಣಿಗೇರಿ ಮತ್ತಿತರ ಪ್ರದೇಶಗಳಿಗೆ ಮಂಗಳವಾರ ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಿರೇಸೂರ, ಹೆಬಸೂರ ಹಾಗೂ ಇಂಗಳಹಳ್ಳಿ ಗ್ರಾಮದಲ್ಲಿ ಪ್ರವಾಹದಿಂದ ಸಾಕಷ್ಟು ಮನೆಗಳು ಮುಳುಗಡೆಯಾಗಿವೆ. ಈಗಾಗಲೇ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಪ್ರವಾಹದಿಂದ ಕಿರೇಸೂರ ಗ್ರಾಮದ ವಿಠೊಬಾ ನಗರದ ಪ್ಲಾಟ್ ಹಾಗೂ ಸುಮಾರು 250ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಮುಳುಗಡೆಯಾಗಿವೆ. ಗ್ರಾಮಸ್ಥರು ರಾತ್ರಿಯೆಲ್ಲ ನಿದ್ದೆಯಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.ಅಧಿಕಾರಿಗಳು ಗ್ರಾಮಸ್ಥರ ಸಹಾಯದಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ ಎಂದರು.
ಅಕ್ಕಪಕ್ಕದ ಜಿಲ್ಲೆಗಳಲ್ಲಿ ಬಾರಿ ಪ್ರಮಾಣದ ಮಳೆಯಾದ ಕಾರಣ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿ, ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕುಗಳಲ್ಲಿ 153 ಮಿಮೀ ಮಳೆಯಾಗಿದೆ. ಸೋಮವಾರ ತಡರಾತ್ರಿ ಕಾರ್ಯಾಚರಣೆ ಕೈಗೊಂಡು ಕಡಪಟ್ಟಿ-ಹಳಾಳ ನಡುವಿನ ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದ 6 ಜನರನ್ನು ರಕ್ಷಣೆ ಮಾಡಲಾಗಿದೆ. ಈಗಾಗಲೇ 34 ಜನರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಅದರಲ್ಲಿ 32 ಜನರನ್ನು ರಕ್ಷಣೆ ಮಾಡಲಾಗಿದೆ. ಪ್ರವಾಹದಲ್ಲಿ ಮೃತಪಟ್ಟ ಓರ್ವನ ಶವ ಪತ್ತೆಯಾಗಿದ್ದು, ಇನ್ನೊಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಹಾಗೂ ನಿಗರಿ ಹಳ್ಳಗಳು ಹರಿವಿನ ಪಥ ಬದಲಿಸಿಕೊಂಡಿದ್ದು, ರೈತರು ಹಳ್ಳಗಳನ್ನು ಹೊಲ ಹಾಗೂ ತೋಟಗಳಾಗಿ ಮಾರ್ಪಡಿಸಿದ್ದರಿಂದ ಪ್ರವಾಹ ಉಂಟಾಗುತ್ತಿದೆ. ತುಪ್ಪರಿ ಹಳ್ಳ ಅಭಿವೃದ್ಧಿ ಪಡಿಸಲು 312 ಕೋಟಿ ರೂ. ಟೆಂಡರ್ ಕೂಡ ಕರೆಯಲಾಗಿದೆ. ಬೆಣ್ಣೆ ಹಳ್ಳಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಹವಾಮಾನ ಇಲಾಖೆಯಿಂದ ಎಷ್ಟು ಮಳೆಯಾಗಿದೆ ಎಂಬ ಹೊಸ ಅಂಕಿ-ಅಂಶಗಳನ್ನು ಪಡೆದುಕೊಂಡು, ಜಿಪಿಎಸ್ ಮಾದರಿ ಅನುಸರಿಸಿ, ಅಧಿಕಾರಿಗಳು ಸತ್ಯಾಸತ್ಯತೆ ಪರಿಶೀಲಿಸಿ ಮನೆ ಹಾನಿಗೆ ಪರಿಹಾರ ವಿತರಿಸಲಾಗುವುದು. ಸಂತ್ರಸ್ತರು ಭಯ ಪಡಬೇಕಾದ ಅವಶ್ಯಕತೆಯಿಲ್ಲ. ಸರಕಾರ ಎಲ್ಲ ರೀತಿಯ ಪರಿಹಾರ ನೀಡಲು ಸಿದ್ಧವಿದೆ ಎಂದರು.
ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒ ಗಂಗಾಧರ ಕಂದಕೂರ, ಕಿರೇಸೂರು ಗ್ರಾಪಂ ಅಧ್ಯಕ್ಷ ಬಸನಗೌಡ ಪಾಟೀಲ, ಸದಸ್ಯ ಹನುಮಂತಗೌಡ ರಾಯನಗೌಡ್ರ, ಸಂಜೀವರೆಡ್ಡಿ ನೀಲರೆಡ್ಡಿ, ಗುರು ರಾಯನಗೌಡ್ರ, ಹೆಬಸೂರು ಗ್ರಾಪಂ ಅಧ್ಯಕ್ಷೆ ಮಲ್ಲವ್ವ ಕುರಡಿಕೇರಿ, ಉಪಾಧ್ಯಕ್ಷ ಸಂತೋಷ ಹೊನ್ನಳ್ಳಿ, ಹೆಬಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಮುಖ್ಯ ಶಿಕ್ಷಕಿ ರತ್ನಾ ಗ್ರಾಮಪುರೋಹಿತ್, ಸದಸ್ಯರಾದ ಸುರೇಶ ಹಡಪದ, ಶಿವಾನಂದ ಲದ್ದಿ, ಫಕ್ಕಿರೇಶ ಹಡಪದ, ಸುನೀಲ ಗಣಿ, ಮಂಜುನಾಥ ನಾಗಾವಿ ಇನ್ನಿತರರಿದ್ದರು.