Advertisement
ಬಿ.ಎಸ್ಸಿ(ಕೃಷಿ) ವಿದ್ಯಾರ್ಥಿಗಳಿಗೆ ಅಂತಿಮ ವರ್ಷದಲ್ಲಿ “ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ’ ಅಂತ 2 ತಿಂಗಳು ಹಳ್ಳಿಯಲ್ಲಿದ್ದು, ವಿವಿಧ ಚಟುವಟಿಕೆಗಳನ್ನು ನಡೆಸಬೇಕಾಗುತ್ತದೆ. ಮೂರು ವರ್ಷ ತರಗತಿಯಲ್ಲಿ ಕಲಿತಿದ್ದರ ನೂರು ಪಟ್ಟನ್ನು ಎರಡೇ ತಿಂಗಳಲ್ಲಿ ಕಲಿಯಬಹುದು. ಆರಂಭದಲ್ಲಿ ಹಳ್ಳಿಯಲ್ಲಿ ಸಂಚರಿಸಿ, ರೈತರ ಬಗ್ಗೆ ಮಾಹಿತಿ ಕಲೆ ಹಾಕಬೇಕಿತ್ತು. ನಾವು ಹಳ್ಳಿಯ ಮನೆ ಮನೆಗೂ ಭೇಟಿ ಕೊಟ್ಟು, ಅವರಿಗೆ ನಮ್ಮ ಪರಿಚಯ, ಬಂದ ಉದ್ದೇಶ ತಿಳಿಸಿ, ಅವರ ಹೆಸರು, ಬೆಳೆಯುವ ಬೆಳೆ, ಹೊಲ ಎಷ್ಟಿದೆ, ನೀರಾವರಿ, ಹೊಲದಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೆವು. ಆ ಪ್ರಕ್ರಿಯೆಯಲ್ಲಿ ನಡೆದ ಕೆಲವು ತಮಾಷೆಯ ಘಟನೆಗಳು ಇಲ್ಲಿವೆ. ಹೀಗೆ ಮಾಹಿತಿ ಹುಡುಕಾಟದಲ್ಲಿ, ಒಂದು ಮನೆಗೆ ಹೋದೆವು. ಅಲ್ಲಿ ಯಾರೂ ಕಾಣಿಸಲಿಲ್ಲ. ಆಗ ನಮ್ಮಲೊಬ್ಬ, “ಅಣ್ಣಾರ! ಮನ್ಯಾಗ ಅದೀರೇನ್ರೀ?’ ಅಂತ ಕೂಗಿದ. ಆ ಕಡೆಯಿಂದ ಉತ್ತರ ಬರಲಿಲ್ಲ. ಒಂದೆರಡು ಸಲ ಕೂಗಿದ ನಂತರ, ಅಣ್ಣಾರ ಬದಲು ಅಕ್ಕಾರ ಅಂದ. ಆಗ ಒಳಗಿಂದ ಒಬ್ಟಾಕಿ “ಹೂನ್ರೀ’ ಅಂದಳು. “ನಾವು ಕೃಷಿ ಮಹಾವಿದ್ಯಾಲಯದಿಂದ ಬಂದೇವ್ರಿ. ಕೃಷಿ ಬಗ್ಗೆ ಮಾಹಿತಿ ಕೊಡ್ತೇವ್ರಿ. ಹೊಲದಾಗ ಏನಾರ ಸಮಸ್ಯೆ ಇದ್ರ, ಪರಿಹಾರಾನೂ ಕೊಡ್ತೇವ್ರಿ..’ ಅಂತ ಹೇಳುತ್ತಿದ್ದಾಗಲೇ, ಆ ಹೆಣ್ಮಗಳು “ಏನೋರಿ ಸರ! ನಮ್ಗೆàನ್ ಗೊತ್ ಆಗುದಿಲ್ರಿ. ಅಲ್ಲಿ ಅಂಗಡಿ ಕಟ್ಟಿ ಮ್ಯಾಲ… ನಮ್ಮ ಗಂಡಸ್ರು ಕುಂತಾರ್ರಿ, ನೀವ್ ಏನೇ ಕೊಡೋದಿದ್ರೂ ಅವರಿಗೆ ಕೊಟ್ ಬಿಡ್ರಿ’ ಅಂತ ನುಡಿದು ಬಿಟ್ಟಳು. ನಮಗೆ ಏನು ಹೇಳಬೇಕೋ ತಿಳಿಯದೆ, “ಆಯಿ ಅಕ್ಕಾರ’ ಅಂತ ಮುಂದೆ ಸಾಗಿದೆವು. ಎಷ್ಟು ಲೋಡ್ ಒಯ್ತಿರಪ್ಪಾ?
ರೈತರ ಹೊಲಗಳಿಂದ ಮಣ್ಣು ಮಾದರಿ ಸಂಗ್ರಹಿಸಿ, ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಬೇಕಿತ್ತು. ಒಂದು ಗುಡಿಸಲ ಮುಂದೆ, 80-85ರ ಒಬ್ರು ಅಜ್ಜ ಕುಂತಿದ್ರು. ಅವರ ಹತ್ತಿರಕ್ಕೆ ಹೋಗಿ, “ಅಜ್ಜಾರ ನಮಸ್ಕಾರ್ರೀ, ನಾವು ಕೃಷಿ ವಿದ್ಯಾರ್ಥಿಗಳ್ರಿ’ ಅಂತ ಪರಿಚಯ ಮಾಡಿಕೊಂಡು, “ಅಜ್ಜಾರ ನಿಮ್ಮ ಹೊಲದಿಂದ ಮಣ್ಣನ್ನ ಪರೀಕ್ಷೆಗೆ ತೊಗೊಂಡ್ ಹೋಗಾಕೆ ಬಂದೇವ್ರಿ’ ಅಂತ ನಮ್ಮ ಉದ್ದೇಶ ತಿಳಿಸಿದೆವು. ಅದನ್ನ ಕೇಳಿ ತಾತನ ಮುಖದ ಚಹರೆಯೇ ಬದಲಾಯ್ತು. ಅಜ್ಜ ಗಂಭೀರವಾಗಿ, “ನೋಡ್ರೀಪಾ, ಇರೋದಾ 2-3 ಎಕರೆ ಹೊಲ, ನೀವ್ ನೋಡಿದ್ರ ನನ್ನ ಹೊಲದ ಮಣ್ಣಿನ ಮ್ಯಾಲ ಕಣ್ಣ ಹಾಕೀರಿ. ಅಲ್ಲಾ, ಎಷ್ಟ್ ಲೋಡ್ ಮಣ್ಣ ಒಯ್ತಿರಪಾ?’ ಅಂತ ದಿಗಿಲಿಂದ ಕೇಳಿದರು. “ಅಯ್ಯೋ ಅಜ್ಜಾರ, ಲೋಡ್ ತುಂಬಾ ಮಣ್ ಒಯ್ನಾಕ ನಾವು ಗಣಿ ಧನಿಗೊಳ ಅಲ್ಲಾರೀ’ ಅಂತ ಹೇಳಿ, ಮಣ್ಣು ಪರೀಕ್ಷೆಯ ವಿಧಾನವನ್ನು ವಿವರಿಸಿದೆವು. ಅಜ್ಜಾರಿಗೆ ಸಮಾಧಾನ ಆದಮೇಲಷ್ಟೇ, ನಮ್ಮನ್ನು ಹೊಲದೊಳಕ್ಕೆ ಬಿಟ್ಟಿದ್ದು.
Related Articles
ರೈತರೊಬ್ಬರ ಲಿಂಬೆ ತೋಟದಲ್ಲಿ ಎಲ್ಲ ಗಿಡಗಳು ಹುಲುಸಾಗಿ ಬೆಳೆದಿದ್ದವು. ಕೆಲವೊಂದು ಗಿಡಗಳು ಕಜ್ಜಿರೋಗ, ಸುರುಳಿ ಪುಚಿ ಮತ್ತು ಕರಿ ಹೇನು ಕೀಟಗಳಿಗೂ ತುತ್ತಾಗಿದ್ದವು. ನಾವು ಕೃಷಿ ತಜ್ಞರಂತೆ “ಕಜ್ಜಿರೋಗಕ್ಕೆ 1ಲೀ. ನೀರಿಗೆ 0.2 ಗ್ರಾಂ ಸ್ಟ್ರೆಪ್ಟೊಸೈಕ್ಲಿನ್, 0.5 ಗ್ರಾಂ ಬ್ಲೆ„ಟ್ಯಾಕ್ಸ್ ಮಿಕ್ಸ್ ಮಾಡಿ ಹೊಡೀರಿ’ ಅಂತೆಲ್ಲಾ ಹೇಳುತ್ತಾ ತೋಟದಲ್ಲಿ ಅಡ್ಡಾಡುತ್ತಿದ್ದೆವು. ಒಂದು ಗಿಡದ ಅರ್ಧ ಭಾಗ ಸಂಪೂರ್ಣ ಒಣಗಿದಂತಾಗಿತ್ತು. ನಮ್ಮಲೊಬ್ಬ, ಅದು ಕಜ್ಜಿರೋಗದ ಪರಮಾವಧಿ ಅಂದ. ಇನ್ನೊಬ್ಬ ಅಲ್ಲ ಅಲ್ಲ, ಅದು ಲಿಂಬೆಗಿಡದ ಹಿಮ್ಮುಖ ಒಣಗುವಿಕೆ ಅಂದ. ಹೀಗೆ, ನಮ್ಮನಮ್ಮಲ್ಲೇ ಚರ್ಚೆ ಆರಂಭವಾಯ್ತು. ನಮ್ಮನ್ನು ಗಮನಿಸಿದ ರೈತ “ಹೇ, ಸರ್ ಅದಕ್ಕೇನಾಗಿಲ್ರಿ, ಮೊನ್ನೆ ಹೊಲದಂದ ಕಸ ಎಲ್ಲಾ ಗುಂಪು ಮಾಡಿ ಅಲ್ಲಿ ಬೆಂಕಿ ಹಚ್ಚಿ ಸುಟ್ಟಿವ್ರಿ. ಅದರ ಜಳಾ ಬಡದ ಗಿಡ ಒಣಗಿದಂಗ ಆಗೇತ್ರೀ’ ಅಂತ ಗಿಡದ ಸ್ಥಿತಿಗೆ ಕಾರಣ ಹೇಳಿದ. ವಿಜ್ಞಾನದ ಉತ್ತುಂಗದಲ್ಲಿದ್ದ ನಾವು ಅವರ ಮಾತು ಕೇಳಿ ಒಮ್ಮೆಲೆ ನೆಲಕ್ಕೆ ಅಪ್ಪಳಿಸಿದಂತಾಯ್ತು.
Advertisement
ಹೀಗೆ ಆ ಎರಡು ತಿಂಗಳ ಗ್ರಾಮ ವಾಸ್ತವ್ಯದಿಂದ ರೈತರು ಎದುರಿಸುತ್ತಿರುವ ಪ್ರಾಯೋಗಿಕ ಸಮಸ್ಯೆಗಳ ಅರಿವಾಯ್ತು. ನೋವಿನಲ್ಲೂ ನಲಿಯುತ್ತಾ ಎಲ್ಲರನ್ನು ನಗಿಸುವ ಗ್ರಾಮಸ್ಥರ ಜೀವನೋತ್ಸಾಹ ಹೊಸಪಾಠವನ್ನೇ ಕಲಿಸಿತು. ರೈತರ ಬಗ್ಗೆ, ಅವರ ದುಡಿಮೆಯ ಬಗ್ಗೆ ಇದ್ದ ಗೌರವ ದುಪ್ಪಟ್ಟಾಯ್ತು.
ಅರುಣ ಬಾಳಪ್ಪ ಬಶೆಟ್ಟಿ