ಬ್ರಹ್ಮಾವರ : ಪ್ರತಿ ಮನೆಗೆ ಆಮಂತ್ರಣ ಪತ್ರ ನೀಡಿ, ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಕರೆಯಿಸಿ ಗ್ರಾಮ ಮಟ್ಟದಲ್ಲಿ ಜನಸಂಪರ್ಕ ಸಭೆ ಆಯೋಜಿಸಿರುವುದು ದೇಶದಲ್ಲೇ ಪ್ರಥಮ ಎಂದು ದಾಖಲೆ ನಿರ್ಮಿಸಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಶನಿವಾರ ಕುಮ್ರಗೋಡು ಸ.ಹಿ.ಪ್ರಾ. ಶಾಲೆಯಲ್ಲಿ ಉಡುಪಿ ಕ್ಷೇತ್ರದ 59ನೇ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಆಗಿದ್ದನ್ನು ಪರಾಮರ್ಶಿಸಿ, ಆಗಬೇಕಾ ಗಿರುವುದನ್ನು ತಿಳಿಯುವುದೇ ಜನ ಸಂಪರ್ಕದ ಉದ್ದೇಶ ಎಂದರು.
ಅವಕಾಶ ಬಳಸಿಕೊಳ್ಳಿ
ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಬಿಪಿಎಲ್ ಕಾರ್ಡ್ ಹಾಗೂ ಉದ್ಯೋಗ ಖಾತರಿ ಯೋಜನೆಯಡಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಚಿವ ಪ್ರಮೋದ್ ಕರೆ ನೀಡಿದರು.
ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ, ಹಂದಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರತಿಮಾ ಶೆಟ್ಟಿ, ವಿಶೇಷ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.ರಾಜೇಶ್ ಶೆಟ್ಟಿ ಕುಮ್ರಗೋಡು ಸ್ವಾಗತಿಸಿ, ಪಿಡಿಒ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
ಪ್ರಮೋದ್ ಮಧ್ವರಾಜ್ ಅವರು ಶಾಸಕರಾದ ಬಳಿಕ ಉಡುಪಿ ಕ್ಷೇತ್ರಕ್ಕೆ 1,799 ಕೋಟಿ ರೂ. ಅನುದಾನ ತಂದಿರುವುದು ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ. ಚುನಾವಣಾ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯನ್ನು ಕಾರ್ಯರೂಪಕ್ಕೆ ತರುತ್ತಿರು ವುದು ಅವರ ಛಲ ಹಾಗೂ ಇಚ್ಛಾಶಕ್ತಿಯನ್ನು ಸೂಚಿಸುತ್ತದೆ.
ನಿತ್ಯಾನಂದ ಶೆಟ್ಟಿ ಹಾರಾಡಿ, ತಾ.ಪಂ. ಮಾಜಿ ಅಧ್ಯಕ್ಷ