Advertisement

ದಾರಿ ತಪ್ಪಿದ ಜಿಪಂ ಆಡಳಿತ ವ್ಯವಸ್ಥೆ!

10:44 AM Jul 28, 2019 | Team Udayavani |

ಬಾಗಲಕೋಟೆ: ಜಿಲ್ಲೆಯ ಗ್ರಾಮೀಣ ಜನರಿಗೆ ಸರ್ಕಾರದ ಯೋಜನೆ ತಲುಪಿಸುವ ಜತೆಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಮಹತ್ವದ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಪಂಚಾಯತ ಆಡಳಿತ ವ್ಯವಸ್ಥೆ ಸಂಪೂರ್ಣ ದಾರಿ ತಪ್ಪಿದ್ದು, ಯಾರ ಹಿಡಿತಕ್ಕೂ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

ಹೌದು, ಜಿಪಂ. ಸಿಇಒ ಗಂಗೂಬಾಯಿ ಮಾನಕರ ಅವರ ಆಡಳಿತ ವೈಖರಿಗೆ ಪಕ್ಷಾತೀತವಾಗಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರೆ, ಇನ್ನೊಂದೆಡೆ ಜಿಪಂ ಹಾಗೂ ಜಿಪಂ ವ್ಯಾಪ್ತಿಯ ಇಲಾಖೆಗಳ ಅಧಿಕಾರಿ- ಸಿಬ್ಬಂದಿ ಕೂಡ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಜಿಪಂಗೆ ಮೇಡಮ್‌ ಅವರು ಬಂದು, ಒಂದು ವರ್ಷವಾಗುತ್ತ ಬಂದರೂ, ಜಿಲ್ಲಾ ಪಂಚಾಯತ ಆಡಳಿತ ವ್ಯವಸ್ಥೆ, ನಿಯಮ, ಕಾನೂನು ಅರಿತು ಗಟ್ಟಿ ಆಡಳಿತ ನೀಡುತ್ತಿಲ್ಲ. ಇದರಿಂದ ಕೆಳ ಹಂತದ ಎಲ್ಲ ಅಧಿಕಾರಿ- ಸಿಬ್ಬಂದಿಗಳು ಕಾರ್ಯ ನಿರ್ವಹಿಸುವುದೇ ತೊಂದರೆಯಾಗುತ್ತಿದೆ ಎಂದು ಜಿಪಂನ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿ ಎದುರು ಬೇಸರ ಹಂಚಿಕೊಂಡರು.

ನಿಯಮ ಮೀರಿ ವರ್ಗಾವಣೆ: ಸದ್ಯ ಜಿಪಂನಲ್ಲಿ ಪಿಡಿಒ, ಕಾರ್ಯದರ್ಶಿ ಹಾಗೂ ಇತರೇ ಸಿಬ್ಬಂದಿ ವರ್ಗಾವಣೆ ವಿಷಯ ತೀವ್ರ ಅಸಮಾಧಾನ ಹಾಗೂ ಸಾಮಾನ್ಯ ಸಭೆಯಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಧ್ಯತೆ ದಟ್ಟವಾಗಿದೆ.

ಸೇವೆಯಲ್ಲಿರುವ ಒಟ್ಟು ಹುದ್ದೆಗಳಲ್ಲಿ ಶೇ. 6 ಪಿಡಿಒ, ಕಾರ್ಯದರ್ಶಿಗಳನ್ನು ಸೇವಾ ಹಿರಿತನ ಹಾಗೂ ನಿಯಮಾನುಸಾರ ವರ್ಗಾವಣೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಜಿಲ್ಲೆಯಲ್ಲಿ 198 ಗ್ರಾಪಂಗಳಿದ್ದು, ಎಲ್ಲಾ ಹುದ್ದೆಗಳಿಗೆ ಶೇ.6 ಪರಿಗಣಿಸಿದರೆ 11 ಜನ ಅರ್ಹ ಪಿಡಿಒಗಳನ್ನು ವರ್ಗಾವಣೆ ಮಾಡಬೇಕಿತ್ತು. ಆದರೆ, 14 ಜನ ಪಿಡಿಒಗಳ ವರ್ಗ ಮಾಡಿದ್ದು, ಅದರಲ್ಲೂ ಅರ್ಹರನ್ನು ಕೈಬಿಟ್ಟು, ತಮಗೆ ಆಪ್ತರೆನಿಸಿದ ಪಿಡಿಒಗಳಿಗೆ ಮಾತ್ರ ವರ್ಗಾವಣೆ ಭಾಗ್ಯ ಕಲ್ಪಿಸಿದ್ದಾರೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.

Advertisement

ಸರ್ಕಾರ, ಪಿಡಿಒಗಳ ವರ್ಗಾವಣೆಗಾಗಿಯೇ ನಿಯಮಾವಳಿ ನೀಡಿದೆ. ಕನಿಷ್ಠ ಒಂದು ಗ್ರಾ.ಪಂ.ನಲ್ಲಿ ಮೂರು ವರ್ಷ ಕೆಲಸ ಮಾಡಿದವರು, ಪರೀಕ್ಷಾ ಅವಧಿ ಪೂರ್ಣಗೊಂಡು, ಅತ್ಯುತ್ತಮ ಕೆಲಸ ಮಾಡುವ ಪಿಡಿಒಗಳನ್ನು ಪರಿಗಣಿಸಬೇಕು. ಆದರೆ, ವರ್ಗಾವಣೆಗೊಂಡ 14 ಪಿಡಿಒಗಳಲ್ಲಿ ಒಬ್ಬರು ಇನ್ನೂ ಪರೀಕ್ಷಾ ಅವಧಿ (ಪ್ರೊಬೇಷನ್‌ರಿ)ಯೇ ಪೂರ್ಣಗೊಳಿಸಿಲ್ಲ. ಅವರಿಗೂ ವರ್ಗ ಮಾಡಿರುವುದು, ಅರ್ಹತೆ ಹೊಂದಿರುವ ಪಿಡಿಒಗಳಿಗೆ ಬೇಸರ ಮೂಡಿಸಿದೆ.

ಖಾಸಗಿ ವ್ಯಕ್ತಿ ಆಪ್ತ ಸಹಾಯಕ !: ಜಿಲ್ಲಾಧಿಕಾರಿ, ಜಿಪಂ., ಸಿಇಒ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಕಾರ್ಯಭಾರದ ಸಹಾಯಕಕ್ಕೆ ಆಪ್ತ ಶಾಖೆ ಇರುತ್ತದೆ. ಜಿಲ್ಲಾಧಿಕಾರಿಗಳಿಗೆ ಇಬ್ಬರಿಂದ ಮೂವರು ಆಪ್ತ ಸಹಾಯಕರಿದ್ದರೆ, ಜಿಪಂ ಸಿಇಒಗೆ ಒಬ್ಬ ಆಪ್ತ ಸಹಾಯಕ, ಕಂಪ್ಯೂಟರ್‌ ಆಪರೇಟರ್‌ ಕಡ್ಡಾಯವಾಗಿ ಇರುತ್ತಾರೆ. ಆದರೆ, ಜಿಪಂಗೆ ಮಾನಕರ ಮೇಡಮ್‌ ಬಂದ ಒಂದೇ ವರ್ಷದಲ್ಲಿ ಮೂವರು ಆಪ್ತ ಸಹಾಯಕರನ್ನು ಬದಲಿಸಿದ್ದು, ಸದ್ಯ 20 ದಿನಗಳಿಂದ ಆಪ್ತ ಸಹಾಯಕರನ್ನೇ ನೇಮಕ ಮಾಡಿಕೊಂಡಿಲ್ಲ. ಬದಲಾಗಿ, ಬೆಳಗಾವಿ ಜಿಲ್ಲೆಯ ರಾಮದುರ್ಗದ ಖಾಸಗಿ ವ್ಯಕ್ತಿಯೊಬ್ಬರನ್ನು ಆಪ್ತ ಶಾಖೆಯಲ್ಲಿ ಕೆಲಸ ಮಾಡಲು ಸೂಚಿಸಿದ್ದು, ಆ ವ್ಯಕ್ತಿ, ಹಿರಿಯ- ಕಿರಿಯ ಅಧಿಕಾರಿಗಳೆನ್ನದೇ, ಗೌರವವೂ ಕೊಡದೇ ಎಲ್ಲ ಇಲಾಖೆಗಳ ಫೈಲ್ಗಳಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳ ಕಡತ ರಹಸ್ಯ ಕಾಯ್ದುಕೊಳ್ಳುವಿಕೆ ವಿಧಿ, ಇಲ್ಲಿ ಸಂಪೂರ್ಣ ಉಲ್ಲಂಘನೆ ಕೂಡ ಆಗುತ್ತಿದೆ ಎಂದು ಜಿಪಂ ಕಚೇರಿ ಮೂಲಗಳು ಬೇಸರ ವ್ಯಕ್ತಪಡಿಸಿವೆ.

ಮಾನಕರ ಅವರು ಜಿಪಂ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ವೇಳೆ ಆರ್‌ಡಿಪಿಆರ್‌ಗೆ ಸಂಬಂಧಿಸಿದ ವೈ.ಆರ್‌. ಪಾಟೀಲ ಎಂಬ ಆಪ್ತ ಸಹಾಯಕರಿದ್ದರು. ಅವರ ಬಳಿಕ ನಾಗರಾಜ ಕುಂಬಾರ ಬಂದರು. ಅವರನ್ನೂ ಬದಲಿಸಿ, ಜಿಪಂ ಗುತ್ತಿಗೆ ನೌಕರ ವೈ.ಬಿ. ಪಾರ್ಸಿ ಅವರನ್ನು ಆಪ್ತ ಸಹಾಯಕ ಹುದ್ದೆಗೆ ನೇಮಿಸಲಾಗಿತ್ತು. ಈಗ ಪಾರ್ಸಿ ಅವರನ್ನೂ ಹೊರ ಹಾಕಿ, ಬಸವರಾಜ ಎಂಬ ಖಾಸಗಿ ವ್ಯಕ್ತಿ, ಸಿಇಒ ಅವರ ಆಪ್ತ ಸಹಾಯಕ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ಸಾಮಾನ್ಯ ಸಭೆಯಲ್ಲಿ ಸಂಘರ್ಷ ಸಾಧ್ಯತೆ: ಸಿಇಒ ಅವರ ಕಾರ್ಯ ವೈಖರಿ, ಪಿಡಿಒಗಳ ವರ್ಗಾವಣೆ ವಿಷಯದಲ್ಲಿ ನಿಯಮ ಮೀರಿದ ಆದೇಶ ಸೇರಿದಂತೆ ಹಲವು ವಿಷಯಗಳ ಕುರಿತು ಇದೇ ಜು. 31ರಂದು ನಿಗದಿಯಾಗಿರುವ ಸಾಮಾನ್ಯ ಸಭೆಯಲ್ಲಿ, ಸಿಇಒ ವಿರುದ್ಧ ಸದಸ್ಯರು ಪಕ್ಷಾತೀತವಾಗಿ ಮುಗಿಬೀಳುವ ಸಾಧ್ಯತೆ ದಟ್ಟವಾಗಿದೆ. ಜಿಪಂ ವ್ಯಾಪ್ತಿಯ ಹಲವು ಇಲಾಖೆಗಳ ಅಧಿಕಾರಿಗಳು, ತಾವು ನಿತ್ಯ ಕಚೇರಿಯಲ್ಲಿ ಅನುಭವಿಸುತ್ತಿರುವ ಸಮಸ್ಯೆ ಕುರಿತು, ಜಿಪಂ ಸದಸ್ಯರ ಎದುರು ಹೇಳಿಕೊಂಡಿದ್ದಾರೆ. ಹಲವು ಪ್ರಸಂಗಗಳ ಕುರಿತು ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ. ಹೀಗಾಗಿ ಸಾಮಾನ್ಯ ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಸಹಿತ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು, ಒಟ್ಟಾಗಿ ಮುಗಿಬೀಳುವ ಸಾಧ್ಯತೆ ಇದೆ. ಜತೆಗೆ ನಮ್ಮ ಜಿ.ಪಂ.ಗೆ ಮಾನಕರ ಮೇಡಮ್‌ ಬೇಡ ಎಂಬ ಠರಾವು ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಜಿಪಂ ಸದಸ್ಯರೊಬ್ಬರು ತಿಳಿಸಿದ್ದಾರೆ.

ಪಿಡಿಒಗಳ ವರ್ಗಾವಣೆಯಲ್ಲಿ ನಿಯಮ ಮೀರಿದ್ದಾರೆ ಎಂಬ ಆರೋಪ ನನಗೂ ಬಂದಿವೆ. ಅವರ ಕಾರ್ಯ ವೈಖರಿ ಬಗ್ಗೆ ನನಗೂ ಬೇಸರವಿದೆ. ತಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆಯಬೇಕು ಎಂಬ ಧೋರಣೆ ಅನುಸರಿಸುತ್ತಿದ್ದಾರೆ. ಈ ಕುರಿತು ಅವರಿಗೆ ಸಾಕಷ್ಟು ಬಾರಿ ಹೇಳಿದ್ದೇವೆ. ಎಲ್ಲ ಸದಸ್ಯರು ಚರ್ಚಿಸಿ, ಮುಂದಿನ ನಡೆ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ.• ಗಂಗೂಬಾಯಿ (ಬಾಯಕ್ಕ) ಮೇಟಿ,ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ

ಎಷ್ಟೇ ಒತ್ತಡ ಬಂದರೂ ವರ್ಗಾವಣೆ ವಿಷಯದಲ್ಲಿ ಸೊಪ್ಪು ಹಾಕಿಲ್ಲ. ಸರ್ಕಾರದ ನೀತಿ- ನಿಯಮದ ಪ್ರಕಾರವೇ ಪಿಡಿಒ, ಕಾರ್ಯದರ್ಶಿಗಳ ವರ್ಗಾವಣೆ ಮಾಡಲಾಗಿದೆ. ಸದಸ್ಯರ ಆರೋಪ ಸುಳ್ಳು.• ಗಂಗೂಬಾಯಿ ಮಾನಕರ,ಜಿಲ್ಲಾ ಪಂಚಾಯತ್‌ ಸಿಇಒ

ಪಿಡಿಒಗಳ ವರ್ಗಾವಣೆಯಲ್ಲಿ ಸಿಇಒ ನಿಯಮ ಮೀರಿದ್ದಾರೆ. ಪರೀಕ್ಷೆ ಅವಧಿ ಮುಗಿಯದವರನ್ನು ವರ್ಗ ಮಾಡಿದ್ದಾರೆ. ಅರ್ಹತೆ ಹೊಂದಿದವರನ್ನು ಪರಿಗಣಿಸಿಲ್ಲ. ತಮ್ಮ ಮನಸ್ಸಿಗೆ ಬಂದಂತೆ ಜಿಪಂನಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡುತ್ತೇವೆ.• ಶೋಭಾ ವೆಂಕಣ್ಣ ಬಿರಾದಾರಪಾಟೀಲಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ

 

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next