Advertisement

ಹಳ್ಳಿ ಕಸಗಳಿಗೂ ಬರಲಿದೆ ಘನತ್ಯಾಜ್ಯ ಘಟಕ

10:41 AM Jul 19, 2019 | Team Udayavani |

ಶಿರಸಿ: ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡಲು ಅವಕಾಶವಿದೆ. ಮನೆಮನೆಯಿಂದ ಕಸ ಸಂಗ್ರಹಣೆಗೆ ಪ್ರತ್ಯೇಕ ವ್ಯವಸ್ಥೆ ಕೂಡ ಇರುತ್ತದೆ.

Advertisement

ಆದರೆ, ನಗರವಷ್ಟೇ ಬೆಳೆಯುತ್ತಿರುವ ಹಳ್ಳಿಯಲ್ಲೂ, ನಗರದ ಸವಲತ್ತಿಗಿಂತ ಏನು ಕಡಿಮೆ ಇಲ್ಲ. ನಗರದಲ್ಲಿ ಇರುವಂತೆ ಕಂಪ್ಯೂಟರ್‌ ತ್ಯಾಜ್ಯಗಳು, ಪ್ಲಾಸ್ಟಿಕ್‌ ತ್ಯಾಜ್ಯಗಳು ಇರುತ್ತಿದ್ದವು. ಇವನ್ನೆಲ್ಲ ಏನು ಮಾಡಬೇಕು ಎಂಬುದು ಹಳ್ಳಿಗರಿಗೆ ತಲೆ ನೋವಾಗಿತ್ತು.

ಏಕೆಂದರೆ, ಗ್ರಾಮೀಣ ಭಾಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳೇ ಇರಲಿಲ್ಲ.

ಹೊಸ ಬೆಳವಣಿಗೆ: ನಗರದಲ್ಲಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲೂ ಘನತ್ಯಾಜ್ಯ ವಸ್ತು ವಿಲೇವಾರಿಗೆ ಘಟಕ ತೆರೆಯುವ ಪ್ರಕ್ರಿಯೆಗಳು ಆರಂಭವಾಗಿದೆ.

ತಾಲೂಕಿನಲ್ಲಿ ಈಗಾಗಲೇ ಗ್ರಾಪಂವೊಂದರಲ್ಲಿ ಘಟಕ ನಿರ್ಮಾಣ ಮಂಜೂರಿ ಹಂತದಲ್ಲಿದ್ದು ಇನ್ನೂ ಐದು ಘಟಕಗಳಿಗೆ ಪ್ರಸ್ತಾವನೆ ಸಿದ್ಧವಾಗಿದೆ. ಈ ಘಟಕ ಆಗಬೇಕಾಗಿತ್ತು, ಆಗುತ್ತಿರುವುದು ಸಂತಸ ತಂದಂತಾಗಿದೆ.

Advertisement

ಗ್ರಾಮೀಣ ಕುಡಿಯುವ ನೀರು-ನೈರ್ಮಲ್ಯ ಇಲಾಖೆ ಯೋಜನೆಯಡಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ನಿರ್ಮಾಣಕ್ಕೆ ಹಲವು ತಿಂಗಳ ಹಿಂದೆ ಯೋಜನೆ ರೂಪಿತವಾಗಿತ್ತು. ಅದರ ಪ್ರಕಾರ ಶಿರಸಿ ತಾಲೂಕಿನ ಆರು ಗ್ರಾಪಂಗಳಲ್ಲಿ ಘನ ತ್ಯಾಜ್ಯದ ವಿಲೇವಾರಿಯ ನೂತನ ಘಟಕ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದರು.

ಜಾಗದ್ದೂ ಸಮಸ್ಯೆ: ಘನ ತ್ಯಾಜ್ಯ ಘಟಕ ಎಂದರೆ ನಮ್ಮಲ್ಲಿ ಬೇಡ ಎಂಬುದು ಈವರೆಗೆ ನಗರದಲ್ಲಿತ್ತು. ನಗರಸಭೆ ಗ್ರಾಮೀಣ ಭಾಗದಲ್ಲಿ ಇಂತಹ ಘಟಕಕ್ಕೆ ಮುಂದಾದಾಗಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಸಮಸ್ಯೆ ಆಯ್ಕೆಯಾದ ಗ್ರಾಪಂಗಳಲ್ಲಿ ಘಟಕ ನಿರ್ಮಾಣಕ್ಕೆ ಅಗತ್ಯ ಜಾಗದ ಕೊರತೆ ಕೂಡ ಕಾಡುವಂತಾಯಿತು. ಈ ಕಾರಣದಿಂದಲೇ ಸರಕಾರಕ್ಕೆ ಸಲ್ಲಿಸಬೇಕಿದ್ದ ಪ್ರಸ್ತಾವನೆ ಸಲ್ಲಿಕೆಯಾಗಿರಲಿಲ್ಲ. ಈ ಮಧ್ಯೆ ಹುಲೇಕಲ್ ಗ್ರಾಪಂನಲ್ಲಿ ಅಂತೂ ಇಂತೂ ಸೂಕ್ತ ಸ್ಥಳ ಸಿಕ್ಕಿತ್ತು. ಈ ಪಂಚಾಯ್ತಿಯಲ್ಲಿ ನೂತನ ಘನತ್ಯಾಜ್ಯ ಘಟಕ ಶೀಘ್ರ ನಿರ್ಮಾಣ ಆಗುವ ಆಶಯವಿದೆ. ಇನ್ನೂ ನಾಲ್ಕು ಗ್ರಾಪಂಗಳಲ್ಲಿ ಜಾಗದ ಸಮಸ್ಯೆ ನಿವಾರಿಸಿ ಅದಕ್ಕೂ ಪ್ರಸ್ತಾವನೆ ಕಳುಹಿಸುವುದಕ್ಕೆ ಸಿದ್ಧತೆ ನಡೆಸಲಾಗುತ್ತದೆ.
ಒಂದೆರಡೇ ಅಲ್ಲ: ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ಮನೆಮನೆ ಕಸ ಸಂಗ್ರಹಣ, ಹಸಿ, ಒಣ ಕಸ ವಿಲೇವಾರಿ ಕಾರ್ಯ ನಡೆಯುತ್ತದೆ. ಅದರಂತೆ ಗ್ರಾಮೀಣ ಭಾಗದಲ್ಲೂ ಕಸ ವಿಲೇವಾರಿ ಮಾಡುವು ಅಗತ್ಯವಿದೆ. ಏಕೆಂದರೆ ಗ್ರಾಮೀಣ ಭಾಗದ ರಸ್ತೆಯಂಚಿನಲ್ಲಿ ಎಲ್ಲೆಂದರಲ್ಲಿ ಘನತ್ಯಾಜ್ಯಗಳನ್ನು ಎಸೆಯಲಾಗುತ್ತದೆ. ಅವು ಮಣ್ಣಲ್ಲಿ ಕರಗದೇ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಇಂತಹ ಸಮಸ್ಯೆ ದೂರವಾಗಿಸುವ ನಿಟ್ಟಿನಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಯೋಜನೆ ರೂಪಿಸಿತ್ತು. ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯಗಳನ್ನು ಮನೆಮನೆಗೆ ತೆರಳಿ ಸಂಗ್ರಹಿಸುವ ಯೋಜನೆಯಿದು. ಇದಕ್ಕಾಗಿ 20ಲಕ್ಷ ರೂ.ಮಂಜೂರಿ ಮಾಡಲಾಗುತ್ತದೆ. ಶಿರಸಿ ತಾಲೂಕಿನಲ್ಲಿ ಹುಲೇಕಲ್, ಯಡಳ್ಳಿ, ಇಸಳೂರು, ಅಂಡಗಿ, ಗುಡ್ನಾಪುರ, ಬನವಾಸಿ ಗ್ರಾಪಂಗಳಲ್ಲಿ ಘಟಕ ನಿರ್ಮಾಣ ಮಾಡಲು ಆಯ್ಕೆ ಮಾಡಲಾಗಿದೆ. ಘಟಕ ನಿರ್ಮಾಣದ ಬಳಿಕ ಮನೆಮನೆಗೆ ತೆರಳಿ ಘನತ್ಯಾಜ್ಯ ಸಂಗ್ರಹಕ್ಕೆ ವಾಹನವೊಂದನ್ನು ನೀಡಲಾಗುತ್ತದೆ. ಹೀಗೆ ಸಂಗ್ರಹಿಸಿದ ಪ್ಲಾಸ್ಟಿಕ್‌, ಕಬ್ಬಿಣ, ಬಾಟಲಿ ಮುಂತಾದ ಘನತ್ಯಾಜ್ಯಗಳನ್ನು ವಿಲೇವಾರಿ ಮಾಡುವುದಕ್ಕೆ ಘಟಕ ನಿರ್ಮಿಸುವ ಯೋಜನೆ ಇದಾಗಿದೆ.

ಜಿಲ್ಲೆಯ 55ಕ್ಕೂ ಹೆಚ್ಚು ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ಹಂತದಲ್ಲಿ ಆರು ಗ್ರಾಪಂಗಳಲ್ಲಿ ನೂತನ ಘನತ್ಯಾಜ್ಯ ಘಟಕ ನಿರ್ಮಾಣದ ಪ್ರಸ್ತಾವನೆ ಇದ್ದು, ಸ್ಥಳದ ಸಮಸ್ಯೆ ಕೂಡ ಇತ್ಯರ್ಥವಾಗಿದೆ.•ಎಫ್‌.ಜಿ. ಚಿನ್ನಣ್ಣವರ, ತಾಪಂ ಇಒ

ಸಮಸ್ಯೆ ನಿವಾರಣೆ ಆದ್ರೆ ಸಾಕು. ಎಲ್ಲಿ ಬಾಟಲಿ, ಪ್ಲಾಸ್ಟಿಕ್‌ ಹಾಕಬೇಕು, ಹಾಳಾದ ಮೊಬೈಲ್ ಎಲ್ಲಿ ಬಿಸಾಕಬೇಕು ಗೊತ್ತಿರಲಿಲ್ಲ. ಹಸಿ ತ್ಯಾಜ್ಯವನ್ನು ಗೊಬ್ಬರ ಕೂಡ ಮಾಡಲಿ.•ಗಣೇಶ ಹೆಗಡೆ, ರೈತ

•ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next