Advertisement

ಸುಳ್ಯ ವಿ. ಸಭಾ ಕ್ಷೇತ್ರ: ಗ್ರಾಮ ವಿಕಾಸ ಯೋಜನೆ ಅಪೂರ್ಣ

09:21 AM May 30, 2022 | Team Udayavani |

ಸುಳ್ಯ: ಮಹಾತ್ವಾಕಾಂಕ್ಷೆಯ 2015-16ರಲ್ಲಿ ಜಾರಿಗೆ ತಂದ ಗ್ರಾಮ ವಿಕಾಸ ಯೋಜನೆಯ ಕಾಮಗಾರಿಗಳು ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಇನ್ನೂ ಅಪೂರ್ಣ ಸ್ಥಿತಿಯಲ್ಲಿದ್ದು, ಕೆಲವು ಗ್ರಾ.ಪಂ.ಗಳಿಗೆ ಪೂರ್ತಿ ಅನುದಾನವೇ ಬಿಡುಗಡೆಗೊಂಡಿಲ್ಲ. ಕೆಲವೆಡೆ ಪೂರ್ತಿಯಾದ ಕಾಮಗಾರಿಗೂ ಬಿಲ್‌ ಪಾವತಿಯಾಗಿಲ್ಲ.

Advertisement

ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದ ಗ್ರಾಮ ವಿಕಾಸ ಯೋಜನೆ ಜಾರಿ ಗೊಳಿಸಿದ್ದರು. ಯೋಜನೆಗೆ ಆಯ್ಕೆ ಯಾದ ಗ್ರಾಮಗಳ ನಿಯ ಮಿತ ಕಾಮಗಾರಿಗಳಿಗೆ 75 ಲಕ್ಷ ರೂ. ಅನುದಾನ ಬಿಡುಗಡೆ ಗೊಳಿ ಸಲಾಗಿತ್ತು. ಈ ಯೋಜನೆಯ ಪ್ರಗತಿಯನ್ನು ಪ್ರತೀ ಎರಡು ತಿಂಗಳಿಗೊಮ್ಮೆ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಪರಿಶೀಲನೆ ನಡೆಸಬೇಕೆಂದೂ ಸೂಚಿಸಲಾಗಿತ್ತು.

ಸುಳ್ಯ ವಿಧಾನ ಸಭೆ ಕ್ಷೇತ್ರದಲ್ಲಿ ಆಯ್ಕೆಯಾದ ಗ್ರಾಮಗಳಲ್ಲಿ ಹೆಚ್ಚಿನ ಕಡೆ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದ್ದರೂ ಅದರ ಬಿಲ್‌ ಪಾವತಿಗೆ ಬಾಕಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. ಕೆಲವು ಗ್ರಾಮಗಳಿಗೆ ಅರ್ಧ ಅನುದಾನ ಮಾತ್ರವೇ ಬಿಡುಗಡೆಗೊಂಡಿದೆ. ಒಟ್ಟಿನಲ್ಲಿ ಯೋಜನೆ ಜಾರಿಯಾಗಿ 7 ವರ್ಷಗಳಾಗುತ್ತಾ ಬಂದರೂ ಯೋಜನೆ ಪರಿಪೂರ್ಣ ಅನುಷ್ಠಾನ ಆಗಿಲ್ಲ. ಶೇ. 70ರಷ್ಟು ಕಾಮಗಾರಿಯಷ್ಟೇ ನಡೆದಿವೆ ಎಂದು ಅಂದಾಜಿಸಲಾಗಿದೆ.

8 ಗ್ರಾಮಗಳು

ಸುಳ್ಯ ವಿಧಾನ ಸಭ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮ ವಿಕಾಸ ಯೋಜನೆಗೆ 8 ಗ್ರಾಮಗಳು ಆಯ್ಕೆಯಾಗಿದ್ದವು. ಸುಳ್ಯ ತಾಲೂಕಿನ ಪೆರುವಾಜೆ, ಐವರ್ನಾಡು, ಕಲ್ಮಡ್ಕ, ನೆಲ್ಲೂರು ಕೆಮ್ರಾಜೆ, ಕಡಬ ತಾಲೂಕಿನ ಬಿಳಿನೆಲೆ, ನೂಜಿಬಾಳ್ತಿಲ, ಬಳ್ಪ, ಕೌಕ್ರಾಡಿ ಗ್ರಾಮಗಳು ಆಯ್ಕೆಯಾಗಿದ್ದವು. ಇವುಗಳಲ್ಲಿ ಐವರ್ನಾಡು, ಕಲ್ಮಡ್ಕ ಗ್ರಾಮಗಳಲ್ಲಿ ಯೋಜನೆಯ ಕಾಮಗಾರಿ ಪೂರ್ತಿಯಾಗಿದೆ ಎಂದು ಗ್ರಾ.ಪಂ. ತಿಳಿಸಿದೆ.

Advertisement

6 ಗ್ರಾಮಗಳಲ್ಲಿ ಯೋಜನೆ ಪೂರ್ತಿ ಪ್ರಮಾಣದಲ್ಲಿ ನಡೆದಿಲ್ಲ. ಬಿಳಿನೆಲೆ ಗ್ರಾಮದಲ್ಲಿ ಯೋಜನೆಯಲ್ಲಿ ಹೆಚ್ಚಿನ ಕಾಮಗಾರಿ ನಡೆದಿದ್ದು, ಕೇವಲ 4 ಲಕ್ಷ ರೂ. ಮೊತ್ತದ ಕಾಮಗಾರಿ ನಡೆಯಲು ಬಾಕಿ ಇದ್ದು, ಕ್ರಿಯಾ ಯೋಜನೆ ನಡೆಸಲಾಗಿದೆ. ನೂಜಿಬಾಳ್ತಿಲ ಗ್ರಾಮದ ಸಭಾಂಗಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಪೆರುವಾಜೆ ಗ್ರಾಮದಲ್ಲಿ ಆದ ಕೆಲ ಕಾಮಗಾರಿಗಳಿಗೆ ಬಿಲ್‌ ಪಾವತಿ ಬಾಕಿ ಇದ್ದು, ಸಭಾಂಗಣದ ಕಾಮಗಾರಿ ಕೊನೆ ಹಂತದಲ್ಲಿದೆ. ಬಳ್ಪ, ನೆಲ್ಲೂರು ಕೆಮ್ರಾಜೆ, ಕೌಕ್ರಾಡಿ ಗ್ರಾಮಗಳಿಗೆ 35 ಲಕ್ಷ ರೂ. ಅನುದಾನ ಮಾತ್ರವೇ ಬಿಡುಗಡೆಗೊಂಡಿದ್ದು, ಅವುಗಳ ಕಾಮಗಾರಿ ನಡೆದಿದೆ ಎಂದು ಗ್ರಾ.ಪಂ. ತಿಳಿಸಿದೆ. ಬಾಕಿ ಹಣ ಬಂದಿಲ್ಲ ಎನ್ನಲಾಗಿದೆ.

ಬಿಲ್‌ ಬಾಕಿ

ಯೋಜನೆಯ ಕಾಮಗಾರಿಯ ಉಸ್ತುವಾರಿಯನ್ನು ಕೆಆರ್‌ಡಿಎಲ್‌ ಸಂಸ್ಥೆ ವಹಿಸಿಕೊಂಡಿದೆ. ಸರಕಾರದ ಅನುದಾನ ನೇರವಾಗಿ ಅವರಿಗೆ ವರ್ಗಾವಣೆಯಾಗುತ್ತದೆ. ಹೆಚ್ಚಿನ ಗ್ರಾಮಗಳಲ್ಲಿ ಕಾಮಗಾರಿ ನಡೆದಿದ್ದರೂ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಸಂಸ್ಥೆ ಬಿಲ್‌ ಪಾವತಿಸಿಲ್ಲ ಎಂಬ ದೂರು ಕೇಳಿ ಬಂದಿದೆ. ಹೀಗಾಗಿ ಕಾಮಗಾರಿ ಪೂರ್ಣಗೊಂಡರೂ ಗ್ರಾ.ಪಂ.ಗೆ ಬಿಟ್ಟು ಕೊಡಲು ಸಾಧ್ಯವಾಗುತ್ತಿಲ್ಲ. ಗುತ್ತಿಗೆದಾರರು ಬಿಲ್‌ ವಿಚಾರಿಸುತ್ತಿರುವುದು ಗ್ರಾ.ಪಂ. ಗೆ ತಲೆನೋವಾಗಿ ಪರಿಣಮಿಸಿದೆ.

ಅನುಷ್ಠಾನದಲ್ಲಿ ಹಿನ್ನಡೆ

ಗ್ರಾಮ ವಿಕಾಸ ಯೋಜನೆಯಲ್ಲಿ ನಡೆಸುವ ಕಾಮಗಾರಿಗಳು ಶಾಶ್ವತವಾಗಿ ಬಳಕೆಗೆ ಬರುವಂತಹದ್ದಾಗಿರಬೇಕು ಎಂದು ಸೂಚಿಸಲಾಗಿತ್ತು. ಆದರೆ ಗ್ರಾ.ಪಂ. ಕ್ರಿಯಾ ಯೋಜನೆ ಸಲ್ಲಿಸಿದರೂ ಸಂಬಂಧಿಸಿದ ಸಂಸ್ಥೆಯವರು ಕಾಮಗಾರಿ ನಿರ್ವಹಣೆಯಲ್ಲಿ ಸೂಕ್ತ ರೀತಿಯಲ್ಲಿ ಮುಂದಾಗದೆ ಹೆಚ್ಚಿನ ಕಡೆ ಕಾಮಗಾರಿ ಪೂರ್ಣಗೊಂಡಿಲ್ಲ ಎನ್ನುವ ದೂರು ಕೇಳಿ ಬಂದಿದೆ. ಕಾಮಗಾರಿಯಲ್ಲಿ ಕೆಲವೆಡೆ ಹಣದ ದುರುಪಯೋಗ ಆದ ಬಗ್ಗೆಯೂ ಆರೋಪ ಕೇಳಿಬಂದಿತ್ತು. ಒಟ್ಟಿನಲ್ಲಿ ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆಯಾದ ಗ್ರಾಮಗಳಲ್ಲಿ ನಡೆಯಲಿರುವ ಕಾಮಗಾರಿ, ಬಾಕಿ ಹಣದ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಾಮಗಾರಿ ಪ್ರಗತಿಯಲ್ಲಿ

ಗ್ರಾಮ ವಿಕಾಸ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಪೂರ್ಣ ಗೊಂಡಿರುವ ರಿಪೋರ್ಟ್‌ ನೀಡಿದಲ್ಲಿ ಬಿಲ್‌ ಪಾವತಿ ಸಲಾಗುತ್ತದೆ. ಈ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಲಾಗುವುದು. -ಡಾ| ಕುಮಾರ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದ.ಕ. ಜಿಲ್ಲಾ ಪಂಚಾಯತ್‌

ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next