Advertisement

ಮೂಲ ಸೌಕರ್ಯ ಮರೀಚಿಕೆ

07:37 AM Mar 23, 2019 | Team Udayavani |

ಸಂತೆಮರಹಳ್ಳಿ: ಹಳ್ಳಬಿದ್ದ ರಸ್ತೆಗಳು, ನೀರು ಚಲಿಸದ ಚರಂಡಿ, ಪಾಚಿಕಟ್ಟಿರುವ, ಗಿಡಕಂಟಿ ಬೆಳೆದಿರುವ ಕುಡಿಯುವ ನೀರಿನ ತೊಂಬೆಗಳಲ್ಲಿ ನೀರು ತುಂಬಿಸಿಕೊಳ್ಳುವ ಅನಿವಾರ್ಯತೆ, ಉರಿಯದ ಬೀದಿ ದೀಪಗಳು ಕತ್ತಲೆಯಲ್ಲೇ ಕಾಲ ಕಳೆಯುವ ನಾಗರಿಕರು ! 

Advertisement

ಇದು ಯಳಂದೂರು ತಾಲೂಕಿನ ಮದ್ದೂರು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರುವ  ಉಪ್ಪಾರ ಹೊಸ ಬಡಾವಣೆಯ ಸಮಸ್ಯೆಗಳ ಪುಟ್ಟ ನೋಟ. ಸಮಾರು 50ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಇನ್ನೂ ಅನೇಕ ಖಾಲಿ ನಿವೇಶಗಳಿವೆ. ಆದರೆ ಸೌಲಭ್ಯಗಳಿಲ್ಲದ ಈ ಬಡಾವಣೆಯಲ್ಲಿ ಮನೆ ನಿರ್ಮಾಣಕ್ಕೆ ಕೆಲವರು ಹಿಂದೇಟು ಹಾಕುತ್ತಿದ್ದಾರೆ. 

ಇಲ್ಲಿ ಎಲ್ಲವೂ ಇಲ್ಲ: ಈ ಬಡಾವಣೆಯ ಹಲವೆಡೆ ರಸ್ತೆಗೆ ಕಲ್ಲು ಮಣ್ಣು ಸುರಿಯಲಾಗಿದೆ. ಆದರೆ ಕಾಂಕ್ರೀಟ್‌ ಹಾಕಿಲ್ಲ. ಚರಂಡಿ ನಿರ್ಮಿಸಲಾಗಿದೆ. ಆದರೆ ನೀರು ಸರಿಯಾಗಿ ಹಾದು ಹೋಗಲು ದಾರಿ ಮಾಡಿಲ್ಲ. ಇದರಿಂದ ಮನೆ ಮುಂಭಾಗದಲ್ಲೇ ಚರಂಡಿ ನೀರು ಮಡುಗಟ್ಟಿ ನಿಲ್ಲುತ್ತಿದೆ. ವಿದ್ಯುತ್‌ ಕಂಬಗಳಿದ್ದರೂ ಬೀದಿ ದೀಪಗಳಿಲ್ಲ. ಪರಿಣಾಮ ರಾತ್ರಿ ವೇಳೆ ಇಲ್ಲಿನ ವಾಸಿಗಳು ವಿಷಜಂತುಗಳ ಭಯದಿಂದ ಮನೆಯಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. 

ಸ್ವಚ್ಛತೆ ಮರೀಚಿಕೆ: ಈ ಬಡಾವಣೆಯಲ್ಲಿ ಪಾಳು ಬಿದ್ದಿರುವ ನಿವೇಶನಗಳಲ್ಲಿ ಗಿಡ ಗಂಟೆಗಳು, ಜಾಲಿ ಮುಳ್ಳು ಬೆಳೆದು ನಿಂತು ಸರಿಸೃಪಗಳು, ಬೀದಿ ನಾಯಿ, ಹಂದಿಗಳ ವಾಸ ಸ್ಥಾನವಾಗಿದೆ. ಈ ಬಡಾವಣೆಯ ಸುತ್ತಲೂ ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ. ರಾತ್ರಿ ವೇಳೆ ಸೊಳ್ಳೆ ಕ್ರಿಮಿಗಳ ಹಾವಳಿ ಹೆಚ್ಚಾಗಿದ್ದು ಇದರಿಂದ ಇಲ್ಲಿನ ನಿವಾಸಿಗಳಿಗೆ ಮಾರಕ ರೋಗಗಳು ಹರಡುವ ಸಂಭವವಿದೆ. 

ಕುಸಿದ ಡಕ್ಕುಗಳು: ಈ ಬಡಾವಣೆಯಲ್ಲಿ ರಸ್ತೆಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಡಕ್ಕುಗಳು ಕುಸಿದಿದ್ದು ಕೊಳಚೆ ನೀರು ಮುಂದೆ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ ಅಲ್ಲದೆ ಇಲ್ಲಿನ ನಿವಾಸಿಗಳು ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದೆ ಅನೇಕ ಮಂದಿ ಬಿದ್ದು ಗಾಯಗೊಂಡಿರುವ ನಿದರ್ಶನಗಳು ಇವೆ. 

Advertisement

ಉದ್ಯೋಗ ಖಾತ್ರಿ ಲಾಭವೂ ಲಭಿಸಿಲ್ಲ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸರ್ಕಾರವು  ಕೋಟ್ಯಂತರ ರೂ ಅನುದಾನ ನೀಡಿದ್ದರೂ ಬಡಾವಣೆಯ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಇದಕ್ಕೆ ಅಧಿಕಾರಿಗಳ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯೇ ಮುಖ್ಯ ಕಾರಣವಾಗಿದೆ.

ಅಲ್ಲದೆ ಬಡಾವಣೆ ಅಭಿವೃದ್ಧಿಗಾಗಿ ಬಳಸಿದ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ವಿಫ‌ಲರಾಗಿದ್ದಾರೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಈ ಬಡಾವಣೆ ಅಭಿವೃದ್ಧಿಪಡಿಸಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕಾಗಿದೆ ಎಂದು ಇಲ್ಲಿನ ನಿವಾಸಿ ಸಿದ್ದಶೆಟ್ಟಿ ಸೇರಿದಂತೆ ಇತರರು  ಒತ್ತಾಯಿಸಿದರು.

ಮದ್ದೂರು ಗ್ರಾಮದ ಉಪ್ಪಾರ ಹೊಸ ಬಡಾವಣೆಯಲ್ಲಿ ಸಮಸ್ಯೆಗಳ ಬಗ್ಗೆ ಯಾವುದೇ ರೀತಿಯ ಸಾರ್ವಜನಿಕರಿಂದ ದೂರುಗಳ ಅರ್ಜಿಗಳು ಬಂದಿಲ್ಲ. ಈ ಬಗ್ಗೆ ನಾನು ಹಾಗೂ ಸಂಬಂಧಪಟ್ಟ ಪಿಡಿಒ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸೌಲಭ್ಯಗಳ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು.
-ಬಿ.ಎಸ್‌.ರಾಜು, ತಾಪಂ ಇಒ 

* ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next