Advertisement

Dengue ನಿಯಂತ್ರಣಕ್ಕೆ ಗ್ರಾಮ ಸಮಿತಿ: ಸಚಿವ ಪ್ರಿಯಾಂಕ್‌ ಖರ್ಗೆ

11:49 PM Jul 07, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸಲು ಎಲ್ಲ ಗ್ರಾಮ ಪಂಚಾಯತ್‌ಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಈಗಾಗಲೇ ಇರುವ ಗ್ರಾಮ ಮಟ್ಟದ ಸಮಿತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ನಿರ್ದೇಶನ ನೀಡಿದ್ದಾರೆ.

Advertisement

ಈ ಕುರಿತು ವಿಸ್ತೃತ ಸೂಚನೆಗಳನ್ನು ಹೊರಡಿಸಿರುವ ಸಚಿವರು, ಗ್ರಾಮ ಮಟ್ಟದಲ್ಲಿರುವ “ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿ’ಯನ್ನು ಡೆಂಗ್ಯೂ ನಿಯಂತ್ರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಗ್ರಾ.ಪಂ.ಗಳು ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಕುಡಿಯುವ ನೀರಿನ ಸರಬರಾಜು ಟ್ಯಾಂಕ್‌ಗಳು, ತೆರೆದ ತೊಟ್ಟಿಗಳು ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ನೀರು ಶೇಖರಣೆ ಮಾಡುವ ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಡೆಂಗ್ಯೂ ಹರಡುವುದನ್ನು ತಡೆಗಟ್ಟಲು ಹಲವು ತುರ್ತು ಕ್ರಮಗಳನ್ನು ಸೂಚಿಸಿದ್ದು, ಪಂಚಾಯತ್‌ ಮಟ್ಟದಲ್ಲಿ ಲೋಪವಾಗದಂತೆ ಅನುಷ್ಠಾನಗೊಳಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಮನೆಗಳು, ಅಂಗಡಿ-ಮುಂಗಟ್ಟುಗಳು, ಹೊಟೇಲ್‌ಗಳು, ವಾಣಿಜ್ಯ ಸಂಕೀರ್ಣಗಳು, ಸಾರ್ವಜನಿಕ ಸ್ಥಳಗಳು ಹಾಗೂ ಖಾಲಿ ಜಾಗಗಳಲ್ಲಿ ನೀರು ದೀರ್ಘ‌ಕಾಲ ನಿಲ್ಲದಂತೆ ಕ್ರಮ ವಹಿಸಬೇಕು ಮತ್ತು ಆವರಣಗಳು ಸ್ವತ್ಛವಾಗಿರುವಂತೆ ನೋಡಿಕೊಳ್ಳುಬೇಕು. ನಿರುಪಯುಕ್ತ ಮತ್ತು ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಶೀಘ್ರ ಹಾಗೂ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು ಎಂದು ಆದೇಶಿಸಿದ್ದಾರೆ.

ದಂಡ ಪ್ರಯೋಗ
ಗ್ರಾಮಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕಟ್ಟಿಸಿರುವ ತೊಟ್ಟಿಗಳನ್ನು ವಾರಕ್ಕೊಮ್ಮೆ ಕಡ್ಡಾಯವಾಗಿ ಸ್ವತ್ಛಗೊಳಿಸಬೇಕು. ಖಾಲಿ ನಿವೇಶನಗಳಲ್ಲಿ ಘನತ್ಯಾಜ್ಯ ವಸ್ತುಗಳು ಮತ್ತು ಮಳೆ ನೀರು ಸಂಗ್ರಹವಾಗದಂತೆ ಕ್ರಮ ವಹಿಸಲು ನಿವೇಶನಗಳ ಮಾಲೀಕರಿಗೆ ಸೂಚನೆ ನೀಡಬೇಕು ಹಾಗೂ ಸೂಚನೆ ಪಾಲಿಸದವರಿಗೆ ನಿಯಮಾನುಸಾರ ದಂಡ ವಿಧಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

Advertisement

ಕಂಟ್ರೋಲ್‌ ವಾಲ್ಸ್‌ ಕಡ್ಡಾಯ
ಅಂಗನವಾಡಿ, ಶಾಲಾ-ಕಾಲೇಜುಗಳು, ವಸತಿ ಶಾಲೆಗಳ ಚಾವಣಿಗಳು ಮತ್ತು ಆವರಣಗಳಲ್ಲಿ ಮಳೆನೀರು ಸಂಗ್ರಹವಾಗದಂತೆ, ನೀರಿನ ಶೇಖರಣೆಗಳಲ್ಲಿ ಈಡಿಸ್‌ ಸೊಳ್ಳೆಗಳು ಉತ್ಪತ್ತಿಯಾಗದಂತೆ ಕ್ರಮ ವಹಿಸುವುದು, ಸಾರ್ವಜನಿಕ ಸ್ಥಳಗಳು, ರಸ್ತೆಗಳಲ್ಲಿ ಮಳೆಯ ನೀರು ನಿಲ್ಲದಂತೆ ಗುಂಡಿ ಹಾಗೂ ತಗ್ಗುಗಳನ್ನು ಮುಚ್ಚಬೇಕು.

ಸಾರ್ವಜನಿಕ ನಲ್ಲಿಗಳು ಹಾಗೂ ಕೊಳವೆ ಬಾವಿಗಳಿಂದ ಹೆಚ್ಚುವರಿ ನೀರು ಸರಾಗವಾಗಿ ಹರಿಯುವಂತೆ ಸೂಕ್ತ ಚರಂಡಿ ವ್ಯವಸ್ಥೆ ಮಾಡಬೇಕು. ಈಗಾಗಲೇ ಇರುವ ಚರಂಡಿಗಳಲ್ಲಿ ಶೇಖರಣೆಗೊಂಡಿರುವ ಹೂಳನ್ನು ಎತ್ತಿ ನೀರು ಸರಾಗವಾಗಿ ಹರಿಯುವಂತೆ ಮತ್ತು ಚರಂಡಿಗಳು ಸ್ವತ್ಛವಾಗಿರುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಪೂರೈಕೆ ನಳ್ಳಿಗಳಿಗೆ ಕಂಟ್ರೋಲ್‌ ವಾಲ್ಸ… ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ನಳ್ಳಿಗಳ ಸುತ್ತಲಿನ ಗುಂಡಿಗಳಲ್ಲಿ ನೀರು ಶೇಖರಣೆಯಾಗುವುದನ್ನು ಹಾಗೂ ಈಡಿಸ್‌ ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಯಬಹುದು ಎಂದು ಖರ್ಗೆ ಸಲಹೆ ನೀಡಿದ್ದಾರೆ.

ಎಳನೀರು ಮಾರಾಟಗಾರರಿಗೆ ಸೂಚನೆ
ಎಳನೀರು ಮಾರಾಟಗಾರರು ಒಡೆದ ಎಳೆನೀರು ಚಿಪ್ಪುಗಳಲ್ಲಿ ಮಳೆ ನೀರು ಶೇಖರಣೆಯಾಗುವುದನ್ನು ತಡೆಗಟ್ಟಲು ಎಳೆನೀರು ಬುರುಡೆಗಳನ್ನು ನಾಲು ಭಾಗಗಳಾಗಿ ಒಡೆದು, ಬೋರಲು ಇಡುವಂತೆ ಸೂಚಿಸಬೇಕು ಮತ್ತು ಪ್ರತೀದಿನ ಕಡ್ಡಾಯವಾಗಿ ವಿಲೇವಾರಿ ಮಾಡುವಂತೆ ನೋಡಿಕೊಳ್ಳಬೇಕು.

ಆರೋಗ್ಯ ಸಿಬಂದಿ ಜತೆಗೆ ಗ್ರಾಮ ಪಂಚಾಯತ್‌ಗಳ ಸದಸ್ಯರು, ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರು, ಅಂಗನವಾಡಿ, ಶಾಲೆ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಶಿಕ್ಷಣದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next