Advertisement

ಸ್ಕೇಟಿಂಗ್‌ನಲ್ಲಿ ಚಿನ್ನ ಪಡೆದ ಹಳ್ಳಿಹೈದ

02:45 PM Aug 06, 2018 | Team Udayavani |

ಹರಪನಹಳ್ಳಿ: ನಗರದಲ್ಲಿ ಉತ್ತಮ ಸೌಲಭ್ಯದ ಜತೆಗೆ ತರಬೇತಿ ಪಡೆದು ಸಾಧನೆ ಮಾಡುವವರ ನಡುವೆ ಹಳ್ಳಿಹೈದನೊಬ್ಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಕಿರಿ ವಯಸ್ಸಿನಲ್ಲಿ ಸಾಧನೆ ಶಿಖರವೇರಿದ್ದಾನೆ.

Advertisement

ಹರಿಹರ ವಿದ್ಯಾದಾಯಿನಿ ಶಾಲೆಯಲ್ಲಿ 8ನೇ ತರಗತಿ ಅಭ್ಯಾಸ ಮಾಡುತ್ತಿರುವ ತಾಲೂಕಿನ ಮೈದೂರು ಗ್ರಾಮದ ವಕೀಲ ಬಿ. ರೇವನಗೌಡ ಹಾಗೂ ರೇಣುಕಮ್ಮ ಅವರ ಪುತ್ರ ಬಿ. ವಿನಾಯಕ. ಥೈಲ್ಯಾಂಡ್‌ಲ್ಲಿ ಜು. 27ರಿಂದ 31ರವರೆಗೆ
ವಿದ್ಯಾರ್ಥಿ ಒಲಿಂಪಿಕ್ಸ್‌ ಸಂಘದ ಆಯೋಜಿಸಿದ್ದ 4ನೇ ಅಂತಾರಾಷ್ಟ್ರೀಯ ವಿದ್ಯಾರ್ಥಿ ಒಲಿಂಪಿಕ್‌ ಕ್ರೀಡಾಕೂಟದಲ್ಲಿ
ಭಾಗವಹಿಸಿ ಸ್ಕೇಟಿಂಗ್‌ಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನ ಮುಡಿಗೇರಿಸಿಕೊಂಡಿದ್ದಾನೆ.

14 ವರ್ಷದೊಳಗಿನ ಸ್ಕೇಟಿಂಗ್‌ ಸ್ಪರ್ಧೆಯಲ್ಲಿ ಪಾಕಿಸ್ತಾನ, ಶ್ರೀಲಂಕಾ, ಮಲೇಷಿಯಾ, ಬರ್ಮಾ, ಥೈಲಾಂಡ್‌ ಕ್ರೀಡಾಪಟುಗಳ ತೀವ್ರ ಪೈಪೋಟಿ ನಡುವೆ 100 ಮೀಟರ್‌ ವಿಭಾಗದಲ್ಲಿ ಪ್ರಥಮ, 1000 ಮೀಟರ್‌ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ್ದಾನೆ. ಹರಿಹರ ತರಬೇತುದಾರ ಮಹ್ಮದ್‌ ಆಲಿ ಗರಡಿಯಲ್ಲಿ ಪಳಗಿರುವ ವಿನಾಯಕ ಓದಿನ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಛಾಪು ಮೂಡಿಸುತ್ತಿದ್ದಾನೆ.

ವಿನಾಯಕ ಪ್ರಥಮ ಬಾರಿಗೆ ಬಳ್ಳಾರಿ ನಗರದಲ್ಲಿ ನಡೆದ ಅಂತರ್‌ ಜಿಲ್ಲಾ ಮಟ್ಟದ ಸ್ಕೇಟಿಂಗ್‌ ಸ್ಪರ್ಧೆಯಲ್ಲಿ ಪ್ರಥಮ,
ಹರಿಹರದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ, ಮಹಾರಾಷ್ಟ್ರದ ಸೊಲ್ಲಾಪುರದ ಉಜ್ಜಯಿನಿ ಹಾಗೂ ಹರಿಯಾಣದಲ್ಲಿ ನಡೆದ
ಅಂತಾರಾಜ್ಯ ಸ್ಪರ್ಧೆಯಲ್ಲಿಯೂ ಪ್ರಥಮ ಪಡೆದಿದ್ದಾನೆ. 2017-18ರ ಮೇ 11ರಿಂದ 17ವರೆಗೆ ಮಲೇಷಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ 100 ಮೀಟರ್‌ನಲ್ಲಿ ಚಿನ್ನ, 300 ಮೀಟರ್‌ ನಲ್ಲಿ ಬೆಳ್ಳಿ ಪದಕಕ್ಕೆ ಭಾಜನನಾಗಿದ್ದಾನೆ.

ವಕೀಲರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುವ ವಿನಾಯಕ ತಂದೆ ಬಿ. ರೇವನಗೌಡ ಅವರು ಮಗನ ಆಸಕ್ತಿಯಂತೆ ಕ್ರೀಡಾ ಚಟುವಟಿಕೆಗೆ ಉತ್ತೇಜನ ನೀಡುತ್ತಿದ್ದಾರೆ. ಮಗನ ಆಸೆಯಂತೆ ಅಭ್ಯಾಸದ ಜೊತೆಗೆ ಕ್ರೀಡೆಗೂ ಪ್ರೋತ್ಸಾಹ ನೀಡಿದ್ದೇವೆ. ಅನ್ಯ ದೇಶದ ಮಕ್ಕಳ ನಡುವೆ ನಮ್ಮ ಮಗನೂ ಪೈಪೋಟಿ ನೀಡುವಾಗ ರೋಮಾಂಚನವಾಗುತ್ತಿತ್ತು. ವಿದೇಶ ನೆಲದಲ್ಲಿ ಮಗನ ಸಾಧನೆ ಕಂಡು ಹೆಮ್ಮೆ ಆಗುತ್ತಿದೆ. ಮಗನ ಅಭಿರುಚಿಗಳಿಗೆ ನೀರೆರೆದು ಪೋಷಿಸುವ ಕೆಲಸ ಮಾಡುತ್ತೇನೆ ಎನ್ನುತ್ತಾರೆ ವಿನಾಯಕ ತಂದೆ ಬಿ.ರೇವನಗೌಡ.

Advertisement

 ಪ್ರತಿಭೆ ಎನ್ನುವುದು ಎಲ್ಲಿದ್ದರೂ ಪ್ರಜ್ವಲಿಸುತ್ತದೆ ಎಂಬುವುದಕ್ಕೆ ಗ್ರಾಮೀಣ ಭಾಗದ ಹಳ್ಳಿಹೈದ ವಿನಾಯಕ ಉತ್ತಮ ನಿದರ್ಶನವಾಗಿದ್ದಾನೆ. ಬಾಲಕನ ಸಾಧನೆಗೆ ವಿವಿಧ ಸಂಘ, ಸಂಸ್ಥೆಗಳ ಗಣ್ಯರು, ಶಾಲೆಯ ಮುಖ್ಯಸ್ಥರು, ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

ಥೈಲಾಂಡ್‌ನ‌ಲ್ಲಿ ನಡೆದ ಕ್ರೀಡಾಕೂಟದಲ್ಲಿ ತೀವ್ರ ಪೈಪೋಟಿ ಇತ್ತು. ತರಬೇತುದಾರ ಗುರುಗಳ ಮಾರ್ಗದರ್ಶನ ಹಾಗೂ
ಪೋಷಕರ ಪ್ರೋತ್ಸಾಹದಿಂದ ಗೆಲುವು ನನ್ನದಾಗಿದೆ. ಅನ್ಯ ದೇಶಗಳ ಕ್ರೀಡಾಪಟುಗಳು ಸಹ ಉತ್ತಮ ಪ್ರದರ್ಶನ
ತೋರಿದರು. ಸ್ಕೇಟಿಂಗ್‌ ಜೊತೆಗೆ ಅಥ್ಲೆಟಿಕ್ಸ್‌, ಕೇರಂ ಆಟದಲ್ಲಿ ನನಗೆ ಆಸಕ್ತಿಯಿದ್ದು, ಬಿಡುವಿನ ವೇಳೆಯಲ್ಲಿ ಇತರೆ ಆಟಗಳಲ್ಲಿಯೂ ತೊಡಗಿಸಿಕೊಳ್ಳುತ್ತೇನೆ.
 ಬಿ.ವಿನಾಯಕ, ಕ್ರೀಡಾಪಟು 

Advertisement

Udayavani is now on Telegram. Click here to join our channel and stay updated with the latest news.

Next