Advertisement

ಹಳ್ಳಿಹಕ್ಕಿ “ಸ್ಫೋಟಕ’ಮಾತುಗಳ ಹಿಂದಿದೆಯಾ ನೋವು?

11:02 PM Jun 01, 2019 | Lakshmi GovindaRaj |

ಬೆಂಗಳೂರು: “ಹಳ್ಳಿಹಕ್ಕಿ’ ಖ್ಯಾತಿಯ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರ “ಸ್ಫೋಟಕ’ ಮಾತುಗಳ ಹಿಂದಿನ ಮರ್ಮವೇನು? ಎಂಬುದು ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆ.ಆರ್‌.ನಗರ ಪುರಸಭೆ ಚುನಾವಣೆಯಲ್ಲಿ ಒಂದು ಟಿಕೆಟ್‌ ನೀಡದ ವಿಚಾರದಲ್ಲಿ ಸಚಿವ ಸಾ.ರಾ.ಮಹೇಶ್‌ ವಿರುದ್ಧ ಕೋಪಗೊಂಡಿರುವುದು ಮೇಲ್ನೋಟಕ್ಕೆ ಕಾಣುವ ಸತ್ಯವಾದರೂ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಸ್ಥಾನ “ನಾಮ್‌ಕಾವಾಸ್ತೆ’ ಆಗಿದೆ ಎಂಬ ನೋವು ಸಿಟ್ಟಾಗಿ ಪರಿವರ್ತನೆಯಾಗಿದೆ.

Advertisement

ಪಕ್ಷದಲ್ಲಿ ರಾಜ್ಯಾಧ್ಯಕ್ಷನಾದರೂ ಪದಾಧಿಕಾರಿ ನೇಮಕಾತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ “ಬಿ’ ಫಾರಂ ನೀಡುವ ಅಧಿಕಾರ ಇದ್ಯಾವುದೂ ಇರಲಿಲ್ಲ. ಹೀಗಾಗಿ, ಎಚ್‌.ವಿಶ್ವನಾಥ್‌ ಮುನಿಸಿಕೊಂಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿಂದೆಯೂ ಎಚ್‌.ವಿಶ್ವನಾಥ್‌ ಎರಡು ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿ, ರಾಜೀನಾಮೆ ಪತ್ರವನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ತಲುಪಿಸಿದ್ದರು. ಎಲ್ಲ ಸರಿಪಡಿಸಲಾಗುವುದು ಎಂದು ಸಮಾಧಾನಪಡಿಸಿದ್ದ ಗೌಡರು, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದ್ದರು.

ಸಿದ್ದರಾಮಯ್ಯ ಜತೆಗಿನ ಭಿನ್ನಾಭಿಪ್ರಾಯದಿಂದ ಪಕ್ಷ ತ್ಯಜಿಸಿ ಜೆಡಿಎಸ್‌ ಸೇರಿದ್ದ ವಿಶ್ವನಾಥ್‌ಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರೂ ಅದು ಕೇವಲ ಹೆಸರಿಗೆ ಮಾತ್ರ ಸೀಮಿತ. ಸಂಘಟನೆ ವಿಚಾರದಲ್ಲಾಗಲಿ, ಪಕ್ಷದ ಎಲ್ಲ ಘಟಕಗಳ ಪುನರ್‌ರಚನೆ ವಿಚಾರದಲ್ಲಾಗಲಿ ಅವರ “ಮಾತು’ ನಡೆಯುತ್ತಿಲ್ಲ ಎಂದು ಹೇಳಲಾಗಿದೆ.

ಹೀಗಾಗಿ, ಸಾ.ರಾ.ಮಹೇಶ್‌ ಅವರು ಪುರಸಭೆ ಚುನಾವಣೆಯಲ್ಲಿ ಒಂದೇ ಒಂದು ಟಿಕೆಟ್‌ ಕೊಡಲು ನಿರಾಕರಿಸಿದ್ದು, ಅದರಲ್ಲೂ ತಮ್ಮ ಸಮುದಾಯವನ್ನು ಕಡೆಗಣಿಸಿದ್ದು ವಿಶ್ವನಾಥ್‌ ಅವರನ್ನು ಕೆರಳಿಸಿದೆ. ಜೆಡಿಎಸ್‌ನಿಂದ ದೂರವಾಗಿರುವ ಕುರುಬ ಸಮುದಾಯವನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳುವ ಕಾರ್ಯತಂತ್ರದ ಭಾಗವಾಗಿಯೇ ವಿಶ್ವನಾಥ್‌ಗೆ ರಾಜ್ಯಾಧ್ಯಕ್ಷ ಸ್ಥಾನ, ಸುರೇಶ್‌ಬಾಬು ಅವರಿಗೆ ಬೂತ್‌ ಸಮಿತಿಗಳ ಅಧ್ಯಕ್ಷ ಸ್ಥಾನ, ಬಂಡೆಪ್ಪ ಕಾಶೆಂಪೂರ್‌ಗೆ ಸಚಿವ ಸ್ಥಾನ ನೀಡಲಾಗಿತ್ತು.

ಆದರೆ, “ನನಗೆ ಯಾವ ಸ್ವಾತಂತ್ರ್ಯವೂ ಇಲ್ಲದಂತಾಗಿದೆ. ಎಲ್ಲ ಪದಾಧಿಕಾರಿಗಳ ನೇಮಕ ಮೇಲಿನ ಮಟ್ಟದಲ್ಲೇ ಆಗುತ್ತಿದೆ. ರಾಜ್ಯಾಧ್ಯಕ್ಷನಾಗಿದ್ದರೂ ಒಂದು ಪುರಸಭೆ ಟಿಕೆಟ್‌ ಕೊಡಿಸಲು ಸಾಧ್ಯವಾಗದಿದ್ದರೆ ನಾನ್ಯಾಕೆ ಇರಬೇಕು. ನನ್ನ ಸಮುದಾಯಕ್ಕೆ ಟಿಕೆಟ್‌ ಕೊಡಿಸಲು ಆಗದಿದ್ದರೆ ನಾನಿದ್ದು ಏನು ಪ್ರಯೋಜನ. ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮೇಲಿನ ಗೌರವದಿಂದ ನಾನು ರಾಜ್ಯಾಧ್ಯಕ್ಷ ಸ್ಥಾನ ಒಪ್ಪಿಕೊಂಡಿದ್ದೇನೆ.

Advertisement

ಆದರೆ, ಸಚಿವರು, ಶಾಸಕರು, ಪಕ್ಷದ ಪದಾಧಿಕಾರಿಗಳು ರಾಜ್ಯಾಧ್ಯಕ್ಷನ ಮಾತು ಕೇಳದಿದ್ದರೆ ಪಕ್ಷ ಕಟ್ಟುವುದು ಹೇಗೆ?. ಆತುರದ ತೀರ್ಮಾನಗಳು, ಏಕಪಕ್ಷೀಯ ನಡವಳಿಕೆಗಳು, ಕೆಲವೇ ಮಂದಿಯ ಸಲಹೆಗಳಿಗೆ ಮಾತ್ರ ಪಕ್ಷದಲ್ಲಿ ಬೆಲೆ ಸಿಗುತ್ತಿದೆ’ ಎಂದು ಆಪ್ತರ ಬಳಿ ಬೇಸರ ಹೊರಹಾಕಿದ್ದಾರೆ ಎಂದು ಹೇಳಲಾಗಿದೆ.

ಇದೇ ಕಾರಣಕ್ಕೆ ದುಡ್ಡು, ದೌಲತ್ತು, ಜಾತಿ ಬಲ ಯಾವುದೂ ಕೆಲಸ ಮಾಡುವುದಿಲ್ಲ. ಜನರು ಬಯಸಿದರಷ್ಟೇ ನಾಯಕರಾಗಲು ಸಾಧ್ಯ. ಮಂಡ್ಯದಲ್ಲಿ ಜನರು ಬಯಸಿದ್ದಕ್ಕೆ ಸುಮಲತಾ ಸಂಸದೆಯಾದರು ಎಂದು ಹೇಳಿ ಆ ಮೂಲಕ ಚುನಾವಣಾ ಉಸ್ತುವಾರಿ ವಹಿಸಿದ್ದ ಸಾ.ರಾ.ಮಹೇಶ್‌ಗೆ ಚುಚ್ಚಿದ್ದಾರೆ.

ಗುಡಿಸಲಿನಲ್ಲಿ ವಾಸಿಸುತ್ತಿದ್ದ ಹಾಗೂ ರಸ್ತೆಯಲ್ಲಿ ಬೋರ್‌ವೆಲ್‌ ಮುಂದೆ ನಿಂತು ಸ್ನಾನ ಮಾಡುತ್ತಿದ್ದ ಸಾಮಾನ್ಯ ವ್ಯಕ್ತಿ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದಾನೆ ಎಂದು ಪ್ರತಾಪಚಂದ್ರ ಸಾರಂಗಿ ಅವರ ಉದಾಹರಣೆ ಕೊಟ್ಟು, ಜೆಡಿಎಸ್‌ ಪಕ್ಷವು ಜನರ ವಿಶ್ವಾಸ ಗಳಿಸದಿದ್ದರೆ ಕಷ್ಟ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ನಾಮ್‌ಕಾವಾಸ್ತೆ: ಜೆಡಿಎಸ್‌ನಲ್ಲಿ ಮೊದಲಿನಿಂದಲೂ ರಾಜ್ಯಾಧ್ಯಕ್ಷರು “ಗೌಣ’. ಹೆಸರಿಗಷ್ಟೇ ಪದವಿ. ಅಧಿಕಾರ ಏನೂ ಇರುವುದಿಲ್ಲ. ಇದು ಅಧ್ಯಕ್ಷರಾದವರಿಗೂ ಗೊತ್ತಿರುವ ಸತ್ಯ. ಈ ಹಿಂದೆ ಎನ್‌.ತಿಪ್ಪಣ್ಣ, ಮಿರಾಜುದ್ದೀನ್‌ ಪಟೇಲ್‌, ಎ.ಕೃಷ್ಣಪ್ಪ ಅವರು ಜೆಡಿಎಸ್‌ನಲ್ಲಿ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಸಂದರ್ಭದಲ್ಲೂ ಅಧ್ಯಕ್ಷ ಹುದ್ದೆ “ನಾಮ್‌ಕಾವಾಸ್ತೆ’ ಎಂಬ ಮಾತುಗಳು ಕೇಳಿ ಬಂದಿದ್ದವು.

ವಿಶ್ವನಾಥ್‌ ಹೇಳಿದ್ದೇನು?
ಮೈಸೂರು: ರಾಜ್ಯಾಧ್ಯಕ್ಷನಾಗಿದ್ದರೂ ಪಕ್ಷದೊಳಗೆ ತಮಗೆ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ಕೆ.ಆರ್‌.ನಗರ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸೋಲಿಗೆ ನಮ್ಮ ದುರಹಂಕಾರವೇ ಕಾರಣ ಎಂದು ಕ್ಷೇತ್ರದ ಶಾಸಕರೂ ಆದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಶನಿವಾರ ಕೆ.ಆರ್‌.ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ರಾಜ್ಯಾಧ್ಯಕ್ಷನಾಗಿ, ನಾನಿರುವ ವಾರ್ಡ್‌ನಲ್ಲಿ, ನಾನು ಶಿಫಾರಸು ಮಾಡಿದ ವ್ಯಕ್ತಿಗೆ ಟಿಕೆಟ್‌ ನೀಡಲಿಲ್ಲ. ಜೆಡಿಎಸ್‌ ನಾಯಕರಿಗೆ ಹಣ ಬಲವೇ ಮುಖ್ಯವಾಗಿದೆ. ಹಣದಿಂದಲೇ ಗೆಲ್ಲಬಹುದು ಎಂಬ ನಮ್ಮ ಅಹಂಕಾರಕ್ಕೆ ಜನತೆ ಸೋಲಿನ ಪಾಠ ಕಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ವಿಶ್ವನಾಥ್‌, “ನಾನು ಮಾತನಾಡಿದ್ದು ಸಚಿವ ಸಾ.ರಾ.ಮಹೇಶ್‌ ವಿರುದ್ಧ. ದೇವೇಗೌಡ ಅಥವಾ ಕುಮಾರಸ್ವಾಮಿ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಿರಿಯರಾದ ವಿಶ್ವನಾಥ್‌ಗೆ ರಾಜಕಾರಣದಲ್ಲಿ 40 ವರ್ಷಗಳ ಅನುಭವವಿದೆ. ನಮ್ಮಂತವರಿಗೆ ಸಲಹೆ-ಸೂಚನೆ ನೀಡುವ ಸಂಪೂರ್ಣ ಹಕ್ಕು ಅವರಿಗಿದೆ. ಅವರ ಸಲಹೆ-ಸೂಚನೆಗಳಲ್ಲಿ ಸತ್ಯಾಂಶಗಳಿದ್ದರೆ ಸರಿಪಡಿಸಿಕೊಳ್ಳುತ್ತೇನೆ.
-ಸಾ.ರಾ.ಮಹೇಶ್‌, ಸಚಿವ

* ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next