ಮಣಿಪಾಲ: ಜಿಲ್ಲೆಯಲ್ಲಿ ಸೆ.29ರಂದು ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನಡೆಯಲಿರುವ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯನ್ನು ಯಾವುದೇ ಅವ್ಯವಹಾರಗಳಿಗೆ ಆಸ್ಪದ ನೀಡದೆ ಪಾರದರ್ಶಕ, ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಗುರುವಾರ ಪರೀಕ್ಷೆಯ ಪೂರ್ವ ಸಿದ್ಧತೆ ಸಂಬಂಧಿಸಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾದ್ಯಂತ 17 ಕೇಂದ್ರಗಳಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30 ರ ವರೆಗೆ ಪರೀಕ್ಷೆ ನಡೆಯಲಿದೆ. ಪರೀûಾರ್ಥಿಗಳು ಕೇಂದ್ರದಲ್ಲಿ ತಪಾಸಣೆ ನಡೆಸುವ ಸಿಬಂದಿಯೊಂದಿಗೆ ಮತ್ತು ಪರೀಕ್ಷಾ ಕೊಠಡಿಯ ವೀಕ್ಷಕರೊಂದಿಗೆ ಸಹಕರಿಸಿ ತಪಾಸಣೆಗೆ ಒಳಗಾಗುವುದು ಕಡ್ಡಾಯ ಎಂದರು.
ಮೊಬೈಲ್, ಟ್ಯಾಬ್ಲೆಟ್, ಪೆನ್‌ಡ್ರೈವ್, ಬ್ಲೂಟೂತ್ ಡಿವೈಸ್, ಸ್ಮಾರ್ಟವಾಚ್, ಕ್ಯಾಲ್ಕುಲೇಟರ್ ಮತ್ತು ಇತರ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಲಾಗ್ ಟೇಬಲ್ಸ್ ಇನ್ನಿತರ ಯಾವುದೇ ರೀತಿಯ ಉಪಕರಣಗಳನ್ನು ಕೊಂಡೊಯ್ಯು ವಂತಿಲ್ಲ. ಹೀಯರಿಂಗ್ ಏಡ್ ಉಪಕರಣ ಧರಿಸಿರುವ ಅಭ್ಯರ್ಥಿಗಳು ವೈದ್ಯಕೀಯ ದಾಖಲೆಗಳೊಂದಿಗೆ ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮುಂಚಿತವಾಗಿ ಸಂಪೂರ್ಣ ವಿಶೇಷ ತಪಾಸಣೆಗೆ ಒಳಗಾಗಬೇಕು ಎಂದು ಹೇಳಿದರು.
ಅಭ್ಯರ್ಥಿಗಳು ಶೂ, ಸಾಕ್ಸ್‌ಗಳನ್ನು ಧರಿಸುವಂತಿಲ್ಲ. ತುಂಬು ತೋಳಿನ ಶರ್ಟ್, ಕುರ್ತಾ ಪೈಜಾಮ್, ಜೀನ್ಸ್ ಪ್ಯಾಂಟ್, ಯಾವುದೇ ಆಭರಣ, ಮೆಟಲ್ ಮತ್ತು ನಾನ್ ಮೆಟಲ್ (ಮಂಗಳ ಸೂತ್ರ ಹಾಗೂ ಕಾಲುಂಗುರ ಹೊರತುಪಡಿಸಿ) ಪುಲ್ಲೋವರ್ಸ್, ಜಾಕೆಟ್ ಮತ್ತು ಸ್ವೆಟರ್ಸ್, ಮಾಸ್ಕ್, ಟೋಪಿ ಧರಿಸುವಂತಿಲ್ಲ.
ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಬಿಇಒ ಡಾ| ಯಲ್ಲಮ್ಮ, ತಹಶೀಲ್ದಾರ್‌ಗಳು, ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು ಉಪಸ್ಥಿತರಿದ್ದರು.