Advertisement

ವಿಕ್ರೋಲಿ ಕನ್ನಡ ಸಂಘ:ವಾರ್ಷಿಕೋತ್ಸವ ಭಜನೆ,ಸಮೂಹ ನೃತ್ಯ ಸ್ಪರ್ಧೆ

04:38 PM Feb 07, 2018 | |

ಮುಂಬಯಿ: ವಿಕ್ರೋಲಿ ಕನ್ನಡ ಸಂಘವು ವೀಕೇಸ್‌ ಇಂಗ್ಲೀಷ್‌ ಶಿಕ್ಷಣ ಸಂಸ್ಥೆಯನ್ನು ಉಳಿಸಿ-ಬೆಳೆಸುವಲ್ಲಿ ಶಕ್ತಿಮೀರಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಮುಖಾಂತರ ನಾಡಿನ ಕಲೆ, ಸಂಸ್ಕೃತಿಯನ್ನು ಉಳಿಸಿ- ಬೆಳೆಸುವಲ್ಲೂ ಸಕ್ರಿಯರಾಗಿದ್ದೇವೆ. ನಮ್ಮಿ ಶಾಲೆಗೆ ಕಳೆದ ಹಲವು ವರ್ಷಗಳಿಂದ ಶೇ. ನೂರು ಫಲಿತಾಂಶ ಬರುತ್ತಿರುವುದು ಸಂತೋಷ ಆಗುತ್ತಿದೆ. ವಿಕ್ರೋಲಿ ಕನ್ನಡವು ಪರಿಸರದ ತುಳು- ಕನ್ನಡಿಗರ ಸಂಸ್ಥೆಯಾಗಿದೆ. ಆದ್ದರಿಂದ ಸಂಘವು ಬೆಳೆಯಲು ಎಲ್ಲರ ಸಹಕಾರ ಬೇಕು. ಇಲ್ಲಿನ ಕನ್ನಡಿಗರು ಸಂಘದ ಸದಸ್ಯತ್ವವನ್ನು ಪಡೆದು ನಮ್ಮ ನಾಡು-ನುಡಿ ಸೇವೆಗೆ ಸಹಕಾರ ನೀಡಬೇಕು. ಸಂಘವು 55 ವರ್ಷಗಳನ್ನು ಪೂರೈಸಿ ವಜ್ರಮಹೋತ್ಸವದೆಡೆ ದಾಪು ಗಾಲಿಡುತ್ತಿದ್ದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಮುಂದಿನ ಸಂಘದ ಯೋಜನೆ- ಯೋಚನೆಗಳಿಗೆ ನಮ್ಮೊಂದಿಗೆ ನೀವೆಲ್ಲರು ಕೈಜೋಡಿಸಬೇಕು ಎಂದು ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಂಸುಂದರ್‌ ಶೆಟ್ಟಿ  ಅವರು ಅಭಿಪ್ರಾಯಿಸಿದರು.

Advertisement

ಫೆ. 4 ರಂದು ಅಪರಾಹ್ನ 2 ರಿಂದ  ವಿಕ್ರೋಲಿ ಪೂರ್ವದ ಕನ್ನಮ್‌ವಾರ್‌ ನಗರ, ವಿಕ್ರೋಲಿ ಕೋರ್ಟ್‌ ಸಮೀಪದಲ್ಲಿರುವ ಕಾಮಾYರ್‌ ಕಲ್ಯಾಣ್‌ ಭವನದಲ್ಲಿ ವಿಕ್ರೋಲಿ ಕನ್ನಡ ಸಂಘದ 55 ನೇ ವಾರ್ಷಿಕೋತ್ಸವದ ಅಂಗವಾಗಿ ನಮ್ಮ ನಡಿಗೆ ವಜ್ರ ಮಹೋತ್ಸವದೆಡೆಗೆ ಘೋಷಣೆ ಯೊಂದಿಗೆ ನಗರ ಮತ್ತು ಉಪನಗರಗಳ ಸಂಘಟನೆಗಳಿಗೆ ಭಜನೆ ಮತ್ತು ಸಮೂಹ ನೃತ್ಯ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಯಕ್ಷಗಾನಕ್ಕೆ ಸಂಘದ ಕೊಡುಗೆ ಅಪಾರವಾಗಿದೆ. ಯುವಪೀಳಿಗೆ ಸಂಘದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಸಂಘವು ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಸಂಘಟಿತರಾಗಿ ಇನ್ನಷ್ಟು ಕಾರ್ಯಕ್ರಮಗಳನ್ನು ನೀಡುವ ಆಶಯವನ್ನು ಸಂಘವು ಹೊಂದಿದೆ. ಅದಕ್ಕಾಗಿ ವಿಕ್ರೋಲಿಯ ಸಮಸ್ತ ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಎಸ್‌. ಶೆಟ್ಟಿ ಅವರು ಮಾತನಾಡಿ, ಸಂಘವು ಕಲೆ, ಸಂಸ್ಕೃತಿಯ ಉಳಿವಿಗಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಪ್ರಸ್ತುತ ವರ್ಷ ನಗರದ ಎಲ್ಲರಿಗೂ ಭಜನೆ ಮತ್ತು ಸಮೂಹ ನೃತ್ಯ ಸ್ಪರ್ಧೆಯನ್ನು ಆಯೋಜಿಸಿ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡಲಾಗಿದೆ. ಇದಕ್ಕೆ ಉತ್ತಮ ರೀತಿಯ ಸ್ಪಂದನೆಯೂ ಲಭಿಸಿದೆ. ನಾಡಿನ ಕಲೆ, ಸಂಸ್ಕೃತಿ, ಆಚಾರ-ವಿಚಾರಗಳು ಮುಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು. ವಿಕ್ರೋಲಿ ಕನ್ನಡ ಸಂಘವು ಕೇವಲ ಸಮಿತಿಯವರ ಸಂಘವಲ್ಲ. ಇದು ಪರಿಸರದ ಕನ್ನಡಿಗರ ಸಂಘವಾಗಿದೆ. ನಮಗೆ ಮುಂದಿನ ದಿನಗಳಲ್ಲೂ ನಿಮ್ಮೆಲ್ಲರ ಸಹಕಾರ ಸದಾಯಿರಲಿ ಎಂದು ನುಡಿದು ಸಂಘ ನಡೆದು ಬಂದ ಬಗೆಯನ್ನು ವಿವರಿಸಿದರು.

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಉದಯ ಎಲ್‌. ಶೆಟ್ಟಿ ಪೇಜಾವರ ಅವರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಂಘದ ಅಭಿವೃದ್ಧಿಯಲ್ಲಿ ಮಹತ್ತರ ಸಾಧನೆಗೈದ ಸಂಘದ ಮಾಜಿ ಪದಾಧಿಕಾರಿಗಳಾದ ಎನ್‌. ಆರ್‌. ಶೆಟ್ಟಿ, ವೈ. ವಿ. ಅಮೀನ್‌, ದೇವಲ್ಕುಂದ ಭಾಸ್ಕರ್‌ ಶೆಟ್ಟಿ, ಜಿ. ಡಿ. ಕರ್ಕೇರ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು  ಶಾಲು ಹೊದೆಸಿ ಸಮ್ಮಾನಿಸಿ ಗೌರವಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಜಿ. ಡಿ. ಕರ್ಕೇರ ಅವರು, ನಾನು ಸಂಘದ ಹಲವು ಹುದ್ದೆಗಳನ್ನು ಅಲಂಕರಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಅದನ್ನು ಮನಗಂಡು ಸಂಘವು ನನ್ನನ್ನು ಸಮ್ಮಾನಿಸಿದ್ದು ಸಂತೋಷವಾಗುತ್ತಿದೆ ಎಂದು ಭಾವುಕರಾಗಿ ನುಡಿದರು. ವಿಕ್ರೋಲಿ ಪರಿಸರದ ಪ್ರತಿಭಾವಂತ ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. 

Advertisement

ಅತಿಥಿ-ಗಣ್ಯರುಗಳನ್ನು ಅಧ್ಯಕ್ಷ ಶ್ಯಾಂಸುಂದರ್‌ ಶೆಟ್ಟಿ ಅವರು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಗೌರವಿಸಿದರು.

ಸಮಾರಂಭದಲ್ಲಿ ಪಾಲ್ಗೊಂಡ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಸಂಘದ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್‌. ಬಿ. ಕರ್ಕೇರ, ಗೌರವ ಜತೆ ಕಾರ್ಯದರ್ಶಿಗಳಾದ  ಸತೀಶ್‌ ಐಲ್‌ ಮತ್ತು ವಸಂತ ಎಸ್‌. ಶೆಟ್ಟಿ, ಗೌರವ ಜೊತೆ ಕೋಶಾಧಿಕಾರಿಗಳಾದ ಉಮೇಶ್‌ ಎನ್‌. ಪೂಜಾರಿ ಮತ್ತು ಪ್ರವೀಣ್‌ ಕೆ. ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಇದೇ ಸಂದರ್ಭದಲ್ಲಿ ನಗರ ಹಾಗೂ ಉಪನಗರಗಳ ವಿವಿಧ ಭಜನ ಮಂಡಳಿಗಳು ಹಾಗೂ ಸಂಘಟನೆಗಳಿಗೆ ಭಜನ ಮತ್ತು ಸಮೂಹ ನೃತ್ಯ ಸ್ಪರ್ಧೆ ನಡೆಯಿತು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು.

ಸಂಪೂರ್ಣ ಕಾರ್ಯಕ್ರಮವನ್ನು ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಅವರು ನಿರ್ವಹಿಸಿದರು. ಸಮ್ಮಾನ ಕಾರ್ಯಕ್ರಮವನ್ನು ಸಮಿತಿಯ ಸದಸ್ಯ ಸತೀಶ್‌ ಸಾಲ್ಯಾನ್‌ ನಡೆಸಿಕೊಟ್ಟರು. ಅನುಷಾ ಪೂಜಾರಿ ಮತ್ತು ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಹಕರಿಸಿದರು. ಗಾಯಕ ಭರತ್‌ ಶೆಟ್ಟಿ ಅವರಿಂದ ರಸಮಂಜರಿ ನಡೆಯಿತು. ಅಪರಾಹ್ನ 2 ರಿಂದ ನಡೆದ ಸ್ಪರ್ಧೆಗಳಿಗೆ ಸಂಘದ ಅಧ್ಯಕ್ಷ ಶ್ಯಾಮ್‌ಸುಂದರ್‌ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಚಾಲನೆ ನೀಡಿದರು. 

ಕನ್ನಡ ಕೀರ್ತಿ ಪತಾಕೆಯನ್ನು ಉತ್ತುಂಗ ಶಿಖಕ್ಕೇರಿಸುವಲ್ಲಿ ವಿಕ್ರೋಲಿ ಕನ್ನಡ ಸಂಘದ ಕಾರ್ಯ ಅಭಿನಂದನೀಯ. ಸ್ವಂತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿರುವುದಲ್ಲದೆ, ಇದು ಇತರ ಸಂಘ- ಸಂಸ್ಥೆಗಳಿಗೆ ಮಾದರಿಯಾಗಬೇಕು. ಇಂತಹ ಸ್ಪರ್ಧೆಗಳ ಆಯೋಜನೆಯಿಂದ ಮಕ್ಕಳಲ್ಲಿ  ಸ್ಪರ್ಧಾತ್ಮಕ ಗುಣ ಬೆಳೆಯುವುದಲ್ಲದೆ, ಅವರ ಪ್ರತಿಭೆಗೆ ವೇದಿಕೆ ಕಲ್ಪಿಸಿದಂತಾಗುತ್ತದೆ. ಇಂದಿನ ಸಮಾರಂಭವನ್ನು ಕಂಡು ಬಹಳಷ್ಟು ಸಂತೋಷವಾಯಿತು. ಶ್ಯಾಂಸುಂದರ್‌ ಶೆಟ್ಟಿ ಅವರ ನೇತೃತ್ವದಲ್ಲಿ ಸಂಘವು ಇನ್ನಷ್ಟು ಬೆಳೆದು, ವಜ್ರಮಹೋತ್ಸವವನ್ನು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಆಚರಿಸಿ, ಶತಮಾನೋ ತ್ಸವದೆಡೆಗೆ ದಾಪುಗಾಲಿಡಲಿ  
– ನ್ಯಾಯವಾದಿ ಸುಭಾಶ್‌ ಬಿ. ಶೆಟ್ಟಿ (ಅಧ್ಯಕ್ಷರು : ಬೋಂಬೇ ಬಂಟ್ಸ್‌ ಅಸೋಸಿಯೇಶನ್‌).

ಸಂಘ-ಸಂಸ್ಥೆಗಳು ವಾರ್ಷಿಕೋತ್ಸವವನ್ನು ಆಚರಿಸುವುದರಿಂದ ಪರಿಸರದ ಮಕ್ಕಳಿಗೆ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆ ಲಭಿಸುತ್ತದೆ. ಈ ಮೂಲಕ ಯುವ ಜನತೆಯನ್ನು ಸಂಘ-ಸಂಸ್ಥೆಗಳಲ್ಲಿ ಬೆರೆಯುವಂತೆ ಮಾಡಬಹುದು. ಸಂಸ್ಥೆಯ ಅಭಿವೃದ್ಧಿಯತ್ತ ಸಾಗಲು ಇದೊಂದು  ಪ್ರೇರಣೆಯಾಗುತ್ತದೆ. ಸಂಸ್ಥೆ ಗಾಗಿ ಕಾರ್ಯನಿರ್ವಹಿಸಿದ ಹಿರಿಯರನ್ನು ಗುರುತಿಸಿ ಸಮ್ಮಾನಿಸುತ್ತಿರುವುದು ಅಭಿ ನಂದನೀಯ. ಇಷ್ಟೊಂದು ಸಂಖ್ಯೆಯಲ್ಲಿ ತುಳು- ಕನ್ನಡಿಗರು ಪಾಲ್ಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಸಂಘದ ಎಲ್ಲಾ ಯೋಜನೆ-ಯೋಚನೆಗಳಿಗೆ ನನ್ನ ಸಂಪೂರ್ಣ ಪ್ರೋತ್ಸಾಹ, ಸಹಕಾರವಿದೆ  
– ಕುಶಲ್‌ ಸಿ. ಭಂಡಾರಿ (ಅಧ್ಯಕ್ಷರು : ಥಾಣೆ ಬಂಟ್ಸ್‌ ಅಸೋಸಿಯೇಶನ್‌).

ನನಗೆ ಹಲವು ಸಮ್ಮಾನಗಳು ದೊರೆತಿ ರಬಹುದು. ಆದರೆ ಈ ಸಮ್ಮಾನದಿಂದ ದೊರೆತ ಸಂತೋಷ ಅಷ್ಟಿಷ್ಟಲ್ಲ.  ಎಲ್ಲ  ಕನ್ನಡ ಸಂಘಗಳಲ್ಲಿ ಮಹಿಳಾ ವಿಭಾಗವಿದೆ. ಆದರೆ ಇಲ್ಲಿ ಮಹಿಳಾ ವಿಭಾಗದ ಕೊರತೆಯಿದೆ. ಇದರ ಬಗ್ಗೆ ನಾನು ಕಳೆದ ಹಲವು ವರ್ಷಗಳಿಂದ ವಿನಂತಿಸುತ್ತಿದ್ದೇನೆ. ಇನ್ನಾದರೂ ಆದಷ್ಟು ಬೇಗ ಸಂಘವು ಮಹಿಳಾ ವಿಭಾಗವನ್ನು ಸ್ಥಾಪಿಸಬೇಕು. ಮಹಿಳೆಯರು ಸಂಘಟನೆಯಲ್ಲಿ ಸಕ್ರಿಯರಾದಾಗ ಸಂಘಕ್ಕೆ ಮತ್ತಷ್ಟು ಹೊಳಪು ಬರುತ್ತದೆ. ವಿಕ್ರೋಲಿಯಲ್ಲಿ ಪ್ರತಿಭಾವಂತ ಮಹಿಳೆಯರಿದ್ದು, ಅವರಿಗೆ ವೇದಿಕೆಯನ್ನು ಕಲ್ಪಿಸಿಕೊಡುವಲ್ಲಿ ಸಂಘವು ಮುಂದಾಗಬೇಕು. ಯುವಪೀಳಿಗೆಯನ್ನು ಸಂಘದೊಳಗೆ ಸೇರಿಸಿಕೊಂಡು ಭವಿಷ್ಯದಲ್ಲಿ ಸಂಘವನ್ನು ನಡೆಸಲು ಅವರಿಗೆ ನೀವೆಲ್ಲರು ದಾರಿದೀಪವಾಗಬೇಕು. ವಜ್ರಮಹೋತ್ಸವದ ಹೊಸ್ತಿಲಲ್ಲಿ ಎಲ್ಲರನ್ನು ಗುರುತಿಸುವ ಕೆಲಸವನ್ನು ಅಧ್ಯಕ್ಷ ಶ್ಯಾಂಸುಂದರ್‌ ಶೆಟ್ಟಿ  ಮಾಡಬೇಕು 
– ದೇವಲ್ಕುಂದ ಭಾಸ್ಕರ ಶೆಟ್ಟಿ (ಸಂಘದ ಮಾಜಿ ಪದಾಧಿಕಾರಿ, ಸಮ್ಮಾನಿತರು).

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next