ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ಅಭಿನಯದ “ನವೆಂಬರ್‌ನಲ್ಲಿ ನಾನು ಅವಳು’ ಚಿತ್ರ ಶುರುವಾಗಬೇಕಿತ್ತು. ಆದರೆ, ಹಲವು ಕಾರಣಗಳಿಂದ ಆ ಚಿತ್ರ ಸೆಟ್ಟೇರಲಿಲ್ಲ. ನಾಗಶೇಖರ್ ನಿರ್ದೇಶಿಸಬೇಕಿದ್ದ “ನವೆಂಬರ್‌ನಲ್ಲಿ ನಾನು ಅವಳು’ ಚಿತ್ರಕ್ಕೆ ಭರ್ಜರಿ ಫೋಟೋ ಶೂಟ್ ನಡೆಸಲಾಗಿತ್ತು. ಅಷ್ಟೇ ಅಲ್ಲ, ಫಸ್ಟ್‌ಲುಕ್ ಕೂಡ ಬಿಡುಗಡೆಯಾಗಿತ್ತು.
ಇನ್ನೇನು ಚಿತ್ರ ಶುರುವಾಗುತ್ತೆ ಅಂದುಕೊಳ್ಳುವಷ್ಟರಲ್ಲಿ, ನಾಗಶೇಖರ್ ಅಭಿಷೇಕ್ ಅಂಬರೀಶ್‌ಗೆ “ಅಮರ್’ ಚಿತ್ರ ಶುರುಮಾಡಿದರು. ಈಗೇಕೆ ವಿಕ್ರಮ್ ಚಿತ್ರದ ವಿಷಯ ಎಂಬ ಸಣ್ಣ ಪ್ರಶ್ನೆ ಎದುರಾಗಬಹುದು. ವಿಷಯ ಇದೆ. ವಿಕ್ರಮ್ ಈಗ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಸ್ವತಃ ರವಿಚಂದ್ರನ್ ಅವರೇ ಆ ಚಿತ್ರದ ಕಥೆ ಕೇಳಿ, ವಿಕ್ರಮ್‌ಗೆ ಸರಿಹೊಂದುವ ಕಥೆ ಎಂದು ಗ್ರೀನ್‌ಸಿಗ್ನಲ್ ಕೊಟ್ಟ ಬಳಿಕ ಸಿನಿಮಾ ಚಟುವಟಿಕೆಗಳು ಜೋರಾಗಿ ನಡೆದಿವೆ.
ಅಂದಹಾಗೆ, ವಿಕ್ರಮ್ ಅಭಿನಯಿಸುತ್ತಿರುವ ಚಿತ್ರಕ್ಕೆ ಸಹನಾ ಮೂರ್ತಿ ನಿರ್ದೇಶಕರು. ಈ ಹಿಂದೆ “ರೋಜ್’ ಹಾಗೂ “ಮಾಸ್ ಲೀಡರ್’ ಚಿತ್ರ ನಿರ್ದೇಶಿಸಿದ್ದ ಸಹನಾಮೂರ್ತಿ ಅವರಿಗೆ ಇದು ಮೂರನೇ ಚಿತ್ರ. ವಿಕ್ರಮ್‌ಗೆ ಮೊದಲ ಚಿತ್ರವಿದು. ಚಿತ್ರಕ್ಕಿನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಚಿತ್ರ ಘೋಷಣೆ ಮಾಡುವ ಯೋಚನೆ ನಿರ್ದೇಶಕರದ್ದು.
ಮುಂದಿನ ಯುಗಾದಿಗೆ ಚಿತ್ರಕ್ಕೆ ಚಾಲನೆ ಕೊಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ ನಿರ್ದೇಶಕರು. ಅಂದಹಾಗೆ, ಇದೊಂದು ಸ್ವಮೇಕ್ ಕಥೆ. ಪಕ್ಕಾ ಲವ್‌ಸ್ಟೋರಿ ಚಿತ್ರ ಇದಾಗಿದ್ದು, ವಿಕ್ರಮ್ ಅವರನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಉತ್ಸಾಹ ಚಿತ್ರತಂಡಕ್ಕಿದೆ. ಆ ನಿಟ್ಟಿನಲ್ಲಿ ವಿಕ್ರಮ್‌ಗೆ ಇಲ್ಲಿ ಹೊಸ ಗೆಟಪ್ ಇರಲಿದ್ದು, ಅದಕ್ಕಾಗಿ ಬಾಲಿವುಡ್‌ನಲ್ಲಿ ಹೇರ್‌ಸ್ಟೈಲರ್ ಕರೆಸಿ ಹೊಸ ಲುಕ್ ಕೊಡುವ ಬಗ್ಗೆಯೂ ಮಾತುಕತೆ ನಡೆಸಲಾಗುತ್ತಿದೆ.
ಇಲ್ಲಿ ಲವ್ವು, ತಾಯಿ ಸೆಂಟಿಮೆಂಟ್, ಎಮೋಷನ್ಸ್ ಹಾಗು ಒಂದಷ್ಟು ಗೆಳೆತನ ಇತ್ಯಾದಿ ವಿಷಯಗಳು ಹೈಲೈಟ್ ಆಗಿದ್ದು, ಎಮೋಷನ್ಸ್ ಆಳವಾಗಿರಲಿದೆಯಂತೆ. ಇನ್ನು, ಚಿತ್ರದ ಪಾತ್ರಕ್ಕಾಗಿ ವಿಕ್ರಮ್ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರಂತೆ. ಅವರಿಗೆ ವರ್ಕ್‌ಶಾಪ್ ಕೂಡ ನಡೆಸಲಾಗುತ್ತಿದ್ದು, ಅಭಿನಯ ತರಂಗದಲ್ಲಿ ನಟನೆ ತರಬೇತಿ, ಡ್ಯಾನ್ಸ್ ಮಾಸ್ಟರ್ ಕಲೈ ಅವರ ಬಳಿ ನೃತ್ಯ ತರಬೇತಿ, ರವಿವರ್ಮ ಅವರಿಂದ ಸ್ಟಂಟ್ಸ್ ಟಿಪ್ಸ್ ಸೇರಿದಂತೆ ಜಿಮ್ನಾಸ್ಟಿಕ್ ಕೂಡ ಮಾಡುತ್ತಿದ್ದಾರೆ.
ವಿಶೇಷವೆಂದರೆ, ವಿಕ್ರಮ್ ಅವರಿಲ್ಲಿ ಸಿಕ್ಸ್ ಪ್ಯಾಕ್ ಮಾಡುತ್ತಿದ್ದಾರೆಂಬುದು ಸುದ್ದಿ. ರವಿಚಂದ್ರನ್ ಅವರ ಪುತ್ರ ಎಂಬ ಕಾರಣಕ್ಕೆ, ಚಿತ್ರದಲ್ಲಿ ರವಿಚಂದ್ರನ್ ಅವರ ಯಾವುದೇ ಶೇಡ್ ಇಲ್ಲಿರುವುದಿಲ್ಲ. ಇಲ್ಲಿ ಎಲ್ಲವೂ ರಿಯಾಲಿಟಿಯಾಗಿ ಇರಲಿದೆ. ಆ್ಯಕ್ಷನ್ ಸಿನಿಮಾದ ಇನ್ನೊಂದು ವಿಶೇಷ. ಚಿತ್ರಕ್ಕೆ ಸೋಮಶೇಖರ್ ಮತ್ತು ಸುರೇಶ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಥೆ ಏನೆಲ್ಲಾ ಕೇಳಲಿದೆಯೋ, ಅಷ್ಟು ಹಣ ಹಾಕಿ ದೊಡ್ಡ ಬಜೆಟ್‌ನಲ್ಲಿ ಚಿತ್ರ ನಿರ್ಮಿಸುವ ಉತ್ಸಾಹದಲ್ಲಿದ್ದಾರೆ ನಿರ್ಮಾಪಕರು.
ಇನ್ನು, ಸುಮಾರು 70 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಚನೆಯಲ್ಲಿರುವ ನಿರ್ದೇಶಕರು, ಈ ಬಾರಿ ಹೊಸ ಪ್ರಯತ್ನದೊಂದಿಗೆ ಹೊಸತನ್ನು ಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಲಿದ್ದು, ಸಂಗೀತ ನೀಡುವ ಕುರಿತು ಅರ್ಜುನ್ ಜನ್ಯ ಬಳಿ ಮಾತುಕತೆ ನಡೆಯುತ್ತಿದೆ. ಸದ್ಯಕ್ಕೆ ನಾಯಕಿಯ ಆಯ್ಕೆ ನಡೆಯಬೇಕಿದೆ. ಕನ್ನಡದ ಹುಡುಗಿಯೇ ಇರಬೇಕೆಂಬುದು ತಂಡದ ಯೋಚನೆ. ಇಷ್ಟರಲ್ಲೇ ಆಡಿಷನ್ ನಡೆಸಿ, ಆ ಮೂಲಕ ಆಯ್ಕೆ ನಡೆಸಲಿದೆ.