ಹೊಸದಿಲ್ಲಿ: ಜಗತ್ತೇ ಎದುರು ನೋಡುತ್ತಿದ್ದ ಚಂದ್ರಯಾನ 2 ಸೆ. 7 ರಂದು ಚಂದ್ರನ ಮೇಲೆ ಇಳಿಯುವಾಗ ಸಂವಹನ ಕಡಿದುಕೊಂಡ ಡೇಟಾ ಅಧ್ಯಯನ ನಡೆಸಲಾಗಿದ್ದು, ಕೊನೆಯ ಕ್ಷಣದಲ್ಲಿ ಪಲ್ಟಿಹೊಡೆದು ಚಲಿಸಿದ್ದರಿಂದಲೇ ಸಮಸ್ಯೆ ಉಂಟಾಗಿರುವುದು ತಿಳಿದುಬಂದಿದೆ. ಈ ಬಗ್ಗೆ “ಇಂಡಿಯಾ ಟುಡೇ’ ವರದಿ ಮಾಡಿದ್ದು, ವಿಕ್ರಮ್ ಲ್ಯಾಂಡರ್ ಇಳಿಯುವ ಪ್ರಕ್ರಿಯೆ ಒಟ್ಟು 15 ನಿಮಿಷಗಳದ್ದಾಗಿದ್ದು, ಮೊದಲ 11 ನಿಮಿಷ ದವರೆಗೂ ಸರಿಯಾಗಿಯೇ ಕಾರ್ಯನಿರ್ವಹಣೆ ಮಾಡುತ್ತಿತ್ತು ಎಂದು ವರದಿ ಮಾಡಿದೆ. ಆದರೆ ಸುಮಾರು 11 ನಿಮಿಷದ ಹೊತ್ತಿಗೆ ಇಳಿಯುವಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಸಮಯದಲ್ಲಿ ವಿಕ್ರಮ್ ಲ್ಯಾಂಡರ್ ಸ್ವಲ್ಪ ಮಟ್ಟಿಗೆ ಚಂದ್ರನ ಮೇಲ್ಮೆ„ಕಡೆಗೆ ಬಾಗಬೇಕಿತ್ತು. ಹೀಗೆ ಬಾಗಿದರೆ ವಿಕ್ರಮ್‌ನ ತಲೆಮೇಲಿರುವ ಕ್ಯಾಮೆರಾದಿಂದ ಇಳಿಯಬೇಕಿರುವ ಸ್ಥಳವನ್ನು ಇಸ್ರೋ ವಿಜ್ಞಾನಿಗಳು ಗ್ರಹಿಸಲು ಸಾಧ್ಯವಾಗುತ್ತಿತ್ತು. ಈ ಅತ್ಯಂತ ಸಂಕೀರ್ಣ ಚಲನೆಯೇ ವಿಕ್ರಮ್‌ಗೆ ಮುಳುವಾಗಿದೆ. ಸ್ವಲ್ಪ ಬಾಗಬೇಕಿದ್ದ ವಿಕ್ರಮ್ ಈ ಸಮಯದಲ್ಲಿ ಸಂಪೂರ್ಣ ತಲೆಕೆಳಗಾಗಿದೆ.
ಹೀಗೆ ತಲೆಕೆಳಗಾಗುತ್ತಿದ್ದಂತೆ ವಿಕ್ರಮ್‌ನ ಕೆಳಭಾಗದಲ್ಲಿದ್ದ ವೇಗ ನಿಯಂತ್ರಕ ಇಂಜಿನ್‌ಗಳು ಮೇಲ್ಮುಖವಾಗಿವೆ. ಹೀಗಾಗಿ ಲ್ಯಾಂಡರ್ ಅನ್ನು ನಿಧಾನವಾಗಿಸುವುದರ ಬದಲಿಗೆ ಈ ಇಂಜಿನ್‌ಗಳು ವಿಕ್ರಮ್ ಅನ್ನು ವೇಗಗೊಳಿಸಿ, ಚಂದ್ರನ ಮೇಲ್ಮೆ„ಯತ್ತ ವೇಗವಾಗಿ ನೂಕಿವೆ. 11 ನಿಮಿಷ 28 ಸೆಕೆಂಡಿನಲ್ಲಿ ವಿಕ್ರಮ್‌ನ ವೇಗ ಪ್ರತಿ ಸೆಕೆಂಡಿಗೆ 42.9 ಮೀಟರ್ ಇತ್ತು. ಆದರೆ ಒಂದೂವರೆ ನಿಮಿಷದ ಅನಂತರ ಇದರ ವೇಗ ಹೆಚ್ಚಳಗೊಂಡು, ಪ್ರತಿ ಸೆಕೆಂಡಿಗೆ 58.9 ಮೀಟರ್ ಆಗಿದೆ. ಹಾಗೆ ವೇಗ ಹೆಚ್ಚಿಸಿಕೊಂಡ ಕೆಲವೇ ಸೆಕೆಂಡುಗಳಲ್ಲಿ ವಿಕ್ರಮ್ ಸಂಪರ್ಕವನ್ನೂ ಕಡಿದುಕೊಂಡಿದೆ. ಆಗ ಸಂಪರ್ಕ ಕಡಿದುಕೊಂಡ ಅನಂತರ, ಈವರೆಗೂ ಇಸ್ರೋ ಸಂಪರ್ಕಕ್ಕೆ ವಿಕ್ರಮ್ ಸಿಕ್ಕಿಲ್ಲ. ಅನಂತರ ಆರ್ಬಿಟರ್ ಸಹಾಯದಿಂದ ವಿಕ್ರಮ್ ಇರುವ ಸ್ಥಳವನ್ನು ಗರುತಿಸಲಾಗಿದೆಯಾದರೂ, ಅದರೊಂದಿಗೆ ಸಂವಹನ ನಡೆಸುವ ಈವರೆಗಿನ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ.
ಕೆಲವೇ ದಿನಗಳು ಬಾಕಿ: ವಿಕ್ರಮ್ ಲ್ಯಾಂಡರ್ ಜತೆ ಸಂಪರ್ಕ ಸಾಧಿಸುವ ಸಾಧ್ಯತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹದಿನಾಲ್ಕು ದಿನಗಳವರೆಗೆ ಅಂದರೆ ಚಂದ್ರನಲ್ಲಿ ಒಂದು ದಿನಕ್ಕೆ ಸಾಕಾಗುವಷ್ಟು ವಿದ್ಯುತ್ತು ಬ್ಯಾಟರಿಯಲ್ಲಿ ಇದೆ. ಅಂದರೆ ಈಗಾಗಲೇ ಒಂದು ವಾರದಿಂದ ಚಂದ್ರನ ಮೇಲೆ ಇರುವ ವಿಕ್ರಮ್ ಲ್ಯಾಂಡರ್ ಜತೆ ಸಂವಹನ ನಡೆಸುವ ಅವಕಾಶ ಇನ್ನೊಂದು ವಾರಗಳವರೆಗೆ ಮಾತ್ರ ಇರಲಿದೆ. ಸೆ. 21 ರ ಅನಂತರ ವಿಕ್ರಮ್ ಲ್ಯಾಂಡರ್ ಇರುವ ಭಾಗದಲ್ಲಿ ಕತ್ತಲು ಆವರಿಸುವುದರಿಂದ ಯಾವುದೇ ರೀತಿಯ ಸಂವಹನ ನಡೆಸುವುದೂ ಕಷ್ಟಕರವಾಗಲಿದೆ. ಅಲ್ಲಿಯ ವರೆಗೂ ಲ್ಯಾಂಡರ್ ಜತೆ ಸಂವಹನ ನಡೆಸುವ ಪ್ರಯತ್ನ ನಡೆಸಲಾಗುತ್ತದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿ ದ್ದಾರೆ. ಈ ಮಧ್ಯೆ ನಾಸಾ ಕೂಡ ವಿಕ್ರಮ್ ಜೊತೆಗೆ ಸಂಪರ್ಕ ಸಾಧಿಸುವ ಯತ್ನ ನಡೆಸಿದೆ.
ತನ್ನ ಡೀಪ್ ಸ್ಪೇಸ್ ನೆಟ್‌ವರ್ಕ್‌ನಿಂದ ಸಂಕೇತಗಳನ್ನು ವಿಕ್ರಮ್ ಕಡೆಗೆ ಕಳುಹಿಸಿದೆಯಾದರೂ ಯಾವುದೇ ಸಂವಹನ ಸಾಧ್ಯವಾಗಲಿಲ್ಲ. ನಾಸಾದ ಲೇಸರ್ ರೆಟ್ರೋರಿಫ್ಲೆಕ್ಟರ್ ಅರ್ರೆ ಉಪಕರಣ ವಿಕ್ರಮ್‌ನಲ್ಲಿದ್ದು, ಇದಕ್ಕೆ ಸಂವಹನ ಕಳುಹಿಸಲಾಗುತ್ತಿದೆ.