ನವದೆಹಲಿ: ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.
ವಿಕ್ರಮ್ ಕಿರ್ಲೋಸ್ಕರ್ ಅವರು ಪತ್ನಿ ಗೀತಾಂಜಲಿ ಕಿರ್ಲೋಸ್ಕರ್ ಮತ್ತು ಮಗಳು ಮಾನಸಿ ಕಿರ್ಲೋಸ್ಕರ್ ಅವರನ್ನು ಅಗಲಿದ್ದಾರೆ. ಭಾರತದಲ್ಲಿ ಟೊಯೊಟಾ ಕಾರನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಮಂಗಳವಾರ ರಾತ್ರಿ ವಿಕ್ರಮ್ ಕಿರ್ಲೋಸ್ಕರ್ ಅವರಿಗೆ ತೀವ್ರ ಹೃದಯಾಘಾತವಾಗಿತ್ತು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ನಿಧನಹೊಂದಿದ್ದಾರೆ.
ವಿಕ್ರಮ್ ಕಿರ್ಲೋಸ್ಕರ್ ಅವರು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದರು. ಅಲ್ಲದೆ ಕಿರ್ಲೋಸ್ಕರ್ ಗುಂಪಿನ ನಾಲ್ಕನೇ ತಲೆಮಾರಿನ ಮುಖ್ಯಸ್ಥರಾಗಿದ್ದರು. ಅವರು ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷರೂ ಆಗಿದ್ದರು.
ನವೆಂಬರ್ 25 ರಂದು ಮುಂಬೈನಲ್ಲಿ ನಡೆದ ಹೊಸ ತಲೆಮಾರಿನ ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಅನಾವರಣ ಸಮಾರಂಭದಲ್ಲಿ ವಿಕ್ರಮ್ ಕಿರ್ಲೋಸ್ಕರ್ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.
ಇಂದು(ಬುಧವಾರ) ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ: ಭೂ ನ್ಯಾಯಮಂಡಳಿ ಸದಸ್ಯರು ಮದ್ಯದ ಅಮಲಿನಲ್ಲಿ ತೀರ್ಪು ಬರೆದಿದ್ದಾರೆಯೇ?