Advertisement

ವಿಕ್ರಂ ಆಸ್ಪತ್ರೆ ಬಳಿ ನೀರವ

11:41 AM Nov 25, 2018 | |

ಬೆಂಗಳೂರು: ಅನಾರೋಗ್ಯದಿಂದ ನಿಧನರಾದ ನಟ ಅಂಬರೀಶ್‌ ಅವರ ಪಾರ್ಥಿವ ಶರೀರ ಇಡಲಾಗಿದ್ದ ವಿಕ್ರಂ ಆಸ್ಪತ್ರೆಯೊಳಗೆ ನಿರವ ಮೌನ ಆವರಿಸಿತ್ತು. ಹಿರಿಯ ನಟ, ನಟಿಯರು, ರಾಜಕೀಯ ಮುಖಂಡರು ಸೇರಿದಂತೆ ನೂರಾರು ಮಂದಿ ಆಗಮಿಸಿ ನೆಚ್ಚಿನ ನಟನ ಅಂತಿಮ ದರ್ಶನ ಪಡೆದರು.

Advertisement

ನಟ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮುಂದಾಳತ್ವದಲ್ಲಿ ಆತ್ಮೀಯರಿಗಷ್ಟೇ ಅಂಬರೀಶ್‌ ಅವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಿರ್ದೇಶಕ ಯೋಗರಾಜ್‌ ಭಟ್‌, ನಟ ದೇವರಾಜ್‌, ಪುನೀತ್‌ ರಾಜ್‌ಕುಮಾರ್‌, ಶರಣ್‌, ಪ್ರೇಮ್‌, ರಕ್ಷಿತಾ ಪ್ರೇಮ್‌, ಜೈಜಗದೀಶ್‌, ನಟಿಯರಾದ ಬಿ.ಸರೋಜಾದೇವಿ ಸೇರಿದಂತೆ 120ಕ್ಕೂ ಹೆಚ್ಚು ಮಂದಿ ಕಲಾವಿದರು ಅಂತಿನ ದರ್ಶನ ಪಡೆದರು.

ಮುಗಿಲು ಮುಟ್ಟಿದ ಆಕ್ರಂದನ: ನಟ ಅಂಬರೀಶ್‌ ಅವರ ಸಹೋದರಿಯರು, ಪತ್ನಿ ಸುಮಲತಾ, ಪುತ್ರ ಅಭಿಷೇಕ್‌ ಸೇರಿದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಬಂದ ಸಹ ನಟರು, ರಾಜಕೀಯ ಮುಖಂಡರ ಕಣ್ಣಲ್ಲೂ ನೀರು ತುಂಬಿತ್ತು. ಆದರೂ ತಮ್ಮ ದುಃಖವನ್ನು ಸಂತೈಸಿಕೊಳ್ಳುತ್ತ ಅಂಬರೀಶ್‌ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮಂಡ್ಯ ಆಪ್ತರಿಂದ ಮನವಿ: ಅಂಬರೀಶ್‌ ಅವರ ಮಂಡ್ಯ ಅತ್ಯಾಪ್ತರಿಗಷ್ಟೇ ಆಸ್ಪತ್ರೆಯೊಳಗೆ ಅಂಬಿ ಅವರ ಅಂತಿಮ ದರ್ಶನಕ್ಕೆ ಅವಕಾಸ ಕಲ್ಪಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿಗಳು ಎಷ್ಟೇ ವಿಶೇಷ ಬಸ್‌ಗಳನ್ನು ಒದಗಿಸದರೇನು? ಅರ್ಧ ಮಂಡ್ಯ ಜನ ಅಂಬಿಗಾಗಿ ಬಂದೇ ಬರುತ್ತಾರೆ. ಅಂಬರೀಶ್‌ ಅವರ ಅಂತ್ಯಕ್ರಿಯೆಯನ್ನು ಮಂಡ್ಯದಲ್ಲೇ ಮಾಡಬೇಕು. ಅಂಬರೀಶ್‌ಗೆ ಮಂಡ್ಯದಲ್ಲಿ ಅಭಿಮಾನಿಗಳು ಹೆಚ್ಚು, ಅವರ ಪಿತ್ರಾರ್ಜಿತ ಆಸ್ತಿ ಕೂಡ ಅಲ್ಲೇ ಇದೆ ಎಂದು ಸಂಬಂಧಿಕರ ಬಳಿ ಮನವಿ ಮಾಡಿಕೊಂಡರು.

ಲಾಠಿ ಪ್ರಹಾರ: ನೆಚ್ಚಿನ ನಟನ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಆವರಣದಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿತ್ತು. ಅಂಬಿ ದರ್ಶನಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಕೆಲವರು ಬ್ಯಾರಿಕೇಡ್‌ಗಳನ್ನು ಎಸೆಯಲು ಯತ್ನಿಸಿದರು. ಈ ವೇಳೆ ಕಾನೂನು ಸುವ್ಯವಸ್ಥೆಗಾಗಿ ಅಭಿಮಾನಿಗಳ ಮೇಲೆ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು.

Advertisement

ಏರಿಳಿತದ‌ ರಾಜಕೀಯ ಪಯಣ: 1994ರಲ್ಲಿ ಕಾಂಗ್ರೆಸ್‌ ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದಿದ್ದ ಅಂಬರೀಶ್‌ 1996 ರಲ್ಲಿ ಜನತಾದಳ ಪಕ್ಷ ಸೇರ್ಪಡೆಗೊಂಡು 1996 ರಲ್ಲಿ ರಾಮನಗರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ ನ ಸಿಎಂ ಲಿಂಗಪ್ಪ ವಿರುದ್ಧ ಸೋಲು ಕಂಡರು. 1998 ರಲ್ಲಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಲೋಕಸಭಾ ಸದಸ್ಯರಾಗಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದ ಅವರು 1999 ಮತ್ತೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 2006 ರಲ್ಲಿ ಡಾ. ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆಯ ರಾಜ್ಯ ಸಚಿವರಾಗಿ ನೇಮಕಗೊಂಡಿದ್ದರು. ಆ ಸಂದರ್ಭದಲ್ಲಿ ಕಾವೇರಿ ವಿವಾದ ಭುಗಿಲೆದ್ದಿದ್ದರಿಂದ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2008 ರಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜೆಡಿಎಸ್‌ ಅಭ್ಯರ್ಥಿ ರಮೇಶ್‌ ಬಂಡಿಸಿದ್ದೇಗೌಡ ವಿರುದ್ಧ ಸೋಲು ಕಂಡಿದ್ದರು. 2013 ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ.ಸ್ಪರ್ಧಿಸಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಆರಂಭದಲ್ಲಿಯೇ ವಸತಿ ಸಚಿವರಾಗಿ ನೇಮಕಗೊಂಡರು.  

ಆದರೆ, ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ 14 ಜನ ಸಚಿವರನ್ನು ಸಂಪುಟದಿಂದ ಕೈ ಬಿಡುವ ಸಂದರ್ಭದಲ್ಲಿ ಅಂಬರೀಶ್‌ ಅವರನ್ನೂ ಸಂಪುಟದಿಂದ.ಕೈ ಬಿಡಲಾಯಿತು.  ಪಕ್ಷದ ನಡೆಯಿಂದ ಬೇಸತ್ತ ಅವರು ಶಾಸಕ ಸ್ಥಾನದ ರಾಜೀನಾಮೆಗೂ ಮುಂದಾಗಿದ್ದರು.

ಆದರೆ, ಶಾಸಕರಾಗಿ ಮುಂದುವರಿದರೂ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದುಕೊಂಡರು.2018 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಕಾಂಗ್ರೆಸ್‌ ಅವರಿಗೆ ಮಂಡ್ಯದಿಂದ ಟಿಕೆಟ್‌ ನೀಡುವ ಭರವಸೆ ನೀಡಿದ್ದರೂ ಅಂಬರೀಶ್‌ ರಾಜಕೀಯದ ಬಗ್ಗೆ ಆಸಕ್ತಿ ಕಳೆದುಕೊಂಡು ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿ ಕಾರ್ಯಪ್ರವೃತ್ತರಾಗಿದ್ದರು.

ರಾಜ್ಯವ್ಯಾಪಿ ಪೊಲೀಸ್‌ ಭದ್ರತೆ: ಭಾನುವಾರ ಬೆಳಗ್ಗೆ 8 ಗಂಟೆಯಿಂದಲೇ ನಗರದ ಕಂಠೀರವ ಸ್ಟೇಡಿಯಂನಲ್ಲಿ ಅಂಬರೀಶ್‌ ಅವರ ಪಾರ್ಥಿವ ಶರೀರರವನ್ನು  ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಅಕ್ಕ-ಪಕ್ಕದ ರಾಜ್ಯಗಳಿಂದ ರಾಜಕೀಯ ಮುಖಂಡರು, ಗಣ್ಯರು, ಸಿನಿಮಾ ನಟರು ಆಗಮಿಸುವ ಹಿನ್ನೆಲೆಯಲ್ಲಿ ನಗರಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಟೇಡಿಯಂ ಸುತ್ತ-ಮುತ್ತ 10 ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಸಿಬ್ಬಂದಿ ಹಾಗೂ ನಗರಾದ್ಯಂತ ಸಂಚಾರ ಪೊಲೀಸರು ಸೇರಿದಂತೆ ಮೂವರು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

15 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ: ಹಿರಿಯ ನಟ ಅಂಬರೀಶ್‌ ನಿಧನ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಭಾರೀ ಭದ್ರತೆ ನಿಯೋಜಿಸಲಾಗಿದೆ. ರಾಜ್ಯದ್ಯಂತ 100ಕ್ಕೂ ಕೆಎಸ್‌ಆರ್‌ಪಿ ತುಕಡಿ ಹಾಗೂ 4 ಸಿಆರ್‌ಪಿಎಫ್ ಪಡೆಗಳು ಸೇರಿದಂತೆ 15 ಸಾವಿರಕ್ಕೂ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಎಲ್ಲಡೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಕಮಲ್‌ ಪಂಥ್‌ ಹೇಳಿದರು.

ಮಂಡ್ಯ ಮತ್ತು ಮೈಸೂರಿನಲ್ಲಿ ಹೆಚ್ಚಿನ ಭದ್ರತೆವಹಿಸುವಂತೆ ಆಯಾ ವಲಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಗತ್ಯಬಿದ್ದಲ್ಲಿ ಕೇಂದ್ರೀಯ ಪಡೆಗಳನ್ನು ಹೆಚ್ಚುವರಿಯಾಗಿ ಕರೆಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.  ನಟ ಅಂಬರೀಶ್‌ ನಿಧನ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ  ವಿಕ್ರಂ ಆಸ್ಪತ್ರೆ ಮುಂಭಾಗ ಭಾರೀ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು.

ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ಇಬ್ಬರು ಡಿಸಿಪಿಗಳು, 8 ಮಂದಿ ಎಸಿಪಿಗಳು ಹಾಗೂ 15ಕ್ಕೂ ಹೆಚ್ಚು ಇನ್‌ಸ್ಪೆಕ್ಟರ್‌ ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಹಾಗೂ 10 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು. ಜತೆಗೆ ಜೆ.ಪಿ.ನಗರದಲ್ಲಿರುವ ಅವರ ನಿವಾಸದ ಬಳಿ ಸಹ ಡಿಸಿಪಿ ಅಣ್ಣಾಮಲೈ ನೇತೃತ್ವದಲ್ಲಿ 300ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು..

ಆಸ್ಪತ್ರೆ ಬಳಿ ಅಭಿಮಾನಿಗಳ ಆಕ್ರಂದನ: ಕಲಿಯುಗ ಕರ್ಣ ಖ್ಯಾತಿಯ ನಟ ಅಂಬರೀಶ್‌ ವಿಧಿವಶರಾದ ಸುದ್ದಿ ಕೇಳಿ ಅಭಿಮಾನಿ ಬಳಗ ಶೋಕ ಸಾಗರದಲ್ಲಿ ಮುಳುಗಿತು. ಅಂಬರೀಶ್‌ ಅವರ ಅಕಾಲಿಕ ನಿಧನ ಸುದ್ದಿ ಅಭಿಮಾನಿಗಳು, ಬೆಂಬಲಿಗರಿಗೆ ಬರ ಸಿಡಿಲಿನಂತೆ ಎರಗಿತು. ಶನಿವಾರ ರಾತ್ರಿ 11ರ ಹೊತ್ತಿಗೆ ಅಭಿಮಾನಿಗಳ ದಂಡು ಆಸ್ಪತ್ರೆಯತ್ತ ದೌಡಾಯಿಸಿತು.

ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ವಿಕ್ರಂ ಆಸ್ಪತ್ರೆ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದರು. ಸಮಯ ಕಳೆದಂತೆ ಆಸ್ಪತ್ರೆಯ ಬಳಿ ಅಭಿಮಾನಿಗಳು, ಬೆಂಬಲಿಗರ ಸಂಖ್ಯೆ ಹೆಚ್ಚಾಗಲಾರಂಭಿಸಿತು. ಆಸ್ಪತ್ರೆಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲದೆ ಕಂಗಾಲಾಗಿದ್ದ ಅಭಿಮಾನಿಗಳು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು.

ಕೆಲವರು ಅಂಬರೀಶ್‌ ಅವರ ಪರ ಜೈಕಾರ ಕೂಗಿದರೆ, ಹಲವರು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ವಿಕ್ರಂ ಆಸ್ಪತ್ರೆಯ ಸುತ್ತಮುತ್ತಲ ಕಟ್ಟಡಗಳ ಮೇಲೇರಿ ನಿಂತ ಅಭಿಮಾನಿಗಳು ನೆಚ್ಚಿನ ನಟನನ್ನು ಕೊನೆಯ ಬಾರಿ ನೋಡಲು ಹಂಬಲಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಇನ್ನೊಂದೆಡೆ ಹಿರಿಯ ನಟರು, ಕಲಾವಿದರು, ಸಂಬಂಧಿಗಳು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next