Advertisement
ಖ್ಯಾತ ಮಾಜಿ ಕ್ರಿಕೆಟಿಗ, ಹಾಲಿ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಇನ್ನೂ ಕೆಲ ಕ್ರೀಡಾಪಟುಗಳು, ಉದ್ಯಮಿಗಳು, ಗಣ್ಯವ್ಯಕ್ತಿಗಳಿಂದ ಹಣ ಕಟ್ಟಿಸಿಕೊಂಡು 300 ಕೋಟಿ. ರೂಗಳಿಗೂ ಅಧಿಕ ಹಣ ಲಪಟಾಯಿಸಿರುವ ವಿಕ್ರಂ ಇನ್‌ವೆಸ್ಟ್‌ಮೆಂಟ್ ಕಂಪೆನಿಯ ವಂಚನೆ ಇದೀಗ ಜಗಜ್ಜಾಹೀರಾಗಿದೆ.
Related Articles
2008ರಲ್ಲಿ ಕಂಪೆನಿ ಸ್ಥಾಪಿಸಿರುವ ಆರೋಪಿಗಳು ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಕೆಲ ವರ್ಷಗಳ ಹಿಂದೆ ಸಂಪರ್ಕಿಸಿದ್ದ ಆರೋಪಿಗಳು, ಪಾಲಿಸಿ ಕಟ್ಟುವಂತೆ ದುಂಬಾಲು ಬಿದ್ದಿದ್ದರು. ಈಗಾಗಲೇ ದ್ರಾವಿಡ್ ಹೆಸರಿನಲ್ಲಿ 1 ಕೋಟಿ.ರೂ.ಗೂ ಅಧಿಕ ಹಣ ಕಂಪೆನಿಗೆ ಪಾವತಿಯಾಗಿದೆ. ಆದರೆ, ಅವರಿಗೆ ಹಣ ವಾಪಾಸ್ ನೀಡಿಲ್ಲ. ಇನ್ನುಳಿದಂತೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಂದಲೂ ಪ್ರೀಮಿಯಂ ಕಟ್ಟಿಸಿಕೊಂಡಿದ್ದು, ಪ್ರೀಮಿಯಂ ಪಾವತಿಸಿದ್ದಾರೆ. ಆದರೆ, ವಂಚನೆ ಸುಳಿವು ಕಂಡು ಬಂದಿದ್ದರಿಂದ ಹಣ ವಾಪಾಸ್ ಪಡೆದುಕೊಂಡು, ಪ್ರೀಮಿಯಂ ಕ್ಯಾನ್ಸಲ್ ಮಾಡಿಸಿದ್ದಾರೆ ಎಂದು ಅಧಿಕಾರಿ ಖಚಿತಪಡಿಸಿದರು.
Advertisement
ಹಣ ಸ್ವಂತಕ್ಕೆ ಬಳಕೆ ಆರೋಪಆರೋಪಿಗಳು ಗ್ರಾಹಕರಿಂದ ಹಣ ಕಟ್ಟಿಸಿಕೊಂಡಿದ್ದರೂ, ಕಳೆದ ಎರಡೂವರೆ ವರ್ಷದಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರಲಿಲ್ಲ. ಸ್ವಂತಕ್ಕೆ ಬಳಸಿಕೊಂಡಿರುವುದರಿಂದ ನಷ್ಟ ಅನುಭವಿಸಿದ್ದಾರೆ. ಉದ್ಯಮಿಗಳು, ಕ್ರೀಡಾಪಟುಗಳು ಹಲವು ಮಂದಿ ಗಣ್ಯರಿಗೆ ವಂಚಿಸಿರುವ ಸಾಧ್ಯತೆ ಇದೆ. ಈಗಾಗಲೇ ಆರೋಪಿಗಳ ಕಂಪೆನಿಯ ಕಚೇರಿ, ಆವರ ನಿವಾಸಗಳಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಐವರೂ ಪ್ರತ್ಯೇಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಕಂಪೆನಿ ಒಂದೇ ಅಕೌಂಟ್ ಹೊಂದಿದ್ದು, ಎಲ್ಲಾ ಖಾತೆಗಳಲ್ಲೂ ಹಣದ ವಹಿವಾಟು ನಡೆಸಿದ್ದಾರೆ. ಈಗಾಗಲೇ ಕಂಪೆನಿಯ ಬಾಗಿಲು ಮುಚ್ಚಿಸಲಾಗಿದ್ದು, ಎಲ್ಲರ ಬ್ಯಾಂಕ್ ಅಕೌಂಟ್ ಸೀಜ್ ಮಾಡಿಸಲಾಗಿದೆ. ಎರಡು ಕಾರು, ಬಾಂಡ್ ಪತ್ರಗಳುಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ನಂಬಿಕೆ, ನಂತರ ದೋಖಾ!
ಕಂಪೆನಿಯ ಮಾಲೀಕ ರಾಘವೇಂದ್ರ, ಷೇರು ಮಾರುಕಟ್ಟೆ ಮಾದರಿಯಲ್ಲಿ ಚಿನ್ನಾಭರಣ, ಕಾಪರ್ ಹಾಗೂ ತಾಳೆ ಎಣ್ಣೆ ಕಂಪೆನಿಯಲ್ಲಿ ಹೂಡಿಕೆ ಮಾಡಿದರೆ ಕೆಲವೇ ತಿಂಗಳಲ್ಲಿ ಹೆಚ್ಚಿನ ಲಾಭಾಂಶ ನೀಡುತ್ತೇವೆ ಎಂದು ಗ್ರಾಹಕರಿಗೆ ನಂಬಿಸಿದ್ದರು. ನಾಲ್ವರು ಆರೋಪಿಗಳಲ್ಲಿ ಕೆಲವರು ಎಲ್‌ಐಸಿ ಏಜೆಂಟರು ಹಾಗೂ ಮಾಜಿ ಪತ್ರಕರ್ತರಾಗಿದ್ದಾರೆ. ಹೀಗಾಗಿ ಬಹುತೇಕ ಹೈ ಪ್ರೊಫೈಲ್ ಗ್ರಾಹಕರನ್ನೇ ಟಾರ್ಗೆಟ್ ಮಾಡಿಕೊಂಡು ವಿವಿಧ ಸ್ಕೀಂಗಳ ಅನ್ವಯ ಲಕ್ಷ ರೂ.ಗಳಿಂದ ಆರಂಭವಾಗಿ ಕೋಟಿ ರೂ.ಗಳವರೆಗೆ ಹಣ ಕಟ್ಟಿಸಿಕೊಂಡಿದ್ದಾರೆ. ಆರಂಭದಲ್ಲಿ ನೀಡಿದ್ದ ಭರವಸೆಯಂತೆ ಗ್ರಾಹಕರಿಗೆ ಹೆಚ್ಚಿನ ಲಾಭಾಂಶ ನೀಡುತ್ತಿದ್ದರು. ಈ ವಿಚಾರ ಗೊತ್ತಿದ್ದರಿಂದ ಬಾಲಾಜಿ ಅಗರಬತ್ತಿ ಕಂಪೆನಿ ಮಾಲೀಕರನ್ನು 2016ರಲ್ಲಿ ಹಣಕಟ್ಟುವಂತೆ ಪುಸಲಾಯಿಸಿದ್ದರು. ಆರೋಪಿಗಳ ಮಾತು ನಂಬಿದ್ದ ಬಾಲಾಜಿ ಕಂಪೆನಿಯ ಮಾಲೀಕ ಸಹೋದರರಿಬ್ಬರು ಒಟ್ಟು 11.74 ಕೋಟಿ ರೂ. ಹೂಡಿಕೆ ಮಾಡಿದ್ದರು. ಹಣ ಕಟ್ಟಿಸಿಕೊಂಡ ಬಳಿಕ ಕಂಪೆನಿ ಯಾವುದೇ ರೀತಿಯ ಲಾಭಾಂಶದ ಬಗ್ಗೆ ಮಾಹಿತಿ ನೀಡುತ್ತಿರಲಿಲ್ಲ. ಹೀಗಾಗಿ ಹಣ ವಾಪಾಸ್ ನೀಡುವಂತೆ ಕೇಳಿದರೂ ಇನ್ನಿಲ್ಲದ ಸಬೂಬು ಹೇಳಿ ಕಳುಹಿಸಿದ್ದರು. ಇದರಿಂದ ಬೇಸತ್ತು ಕಡೆಗೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇಡೀ ಹಗರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಈ ಪ್ರಕರಣದಲ್ಲಿ ಆರೋಪಿಗಳು ಗ್ರಾಹಕರಿಗೆ ನೂರಾರು ಕೋಟಿ ವಂಚಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ದೊರೆಯಲಿದೆ. ಪ್ರಕರಣದ ಕೂಲಂಕಶ ತನಿಖೆಗಾಗಿ ಆರೋಪಿಗಳ ವಿಚಾರಣೆ ಮುಂದುವರಿಸಲಾಗಿದೆ.
– ಡಾ.ಎಸ್.ಡಿ.ಶರಣಪ್ಪ, ದಕ್ಷಿಣ ವಿಭಾಗದ ಡಿಸಿಪಿ