ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ “ತ್ರಿವಿಕ್ರಮ’ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆರಂಭದಿಂದಲೂ ಒಂದಲ್ಲ, ಒಂದು ವಿಶೇಷ ಸುದ್ದಿ ಮಾಡುತ್ತಲೇ ಬಂದಿರುವ “ತ್ರಿವಿಕ್ರಮ’ ಈಗ ಮತ್ತೂಂದು ಹೊಸ ಸುದ್ದಿಗೆ ಕಾರಣವಾಗಿದೆ. ಹೌದು, ರಾಜಸ್ತಾನದಲ್ಲಿ ಚಿತ್ರೀಕರಣಗೊಂಡ “ತ್ರಿವಿಕ್ರಮ’ ಅಲ್ಲೊಂದು ವಿಶೇಷವಾದ ಸಾಹಸ ಮಾಡುವ ಮೂಲಕ ಸದ್ದು ಮಾಡಿದೆ. ಅದು ಒಂಟೆ ಮೇಲೆ ನಡೆಯೋ ಸಾಹಸ. ಚಿತ್ರಗಳಲ್ಲಿ ಸಾಂಗ್ ಮೇಕಿಂಗ್‌ಗೆ ಹೆಚ್ಚು ಆದ್ಯತೆ ಸಹಜ.
ಆದರೆ, “ತ್ರಿವಿಕ್ರಮ’ ಹಾಡುಗಳಷ್ಟೇ ಅಲ್ಲ, ಸಾಹಸ ದೃಶ್ಯದಲ್ಲೂ ಸಾಹಸ ಮೆರೆದಿದೆ ಎಂಬುದು ವಿಶೇಷ. ಒಂಟೆ ಮೇಲಿನ ಫೈಟ್ ಮತ್ತು ಒಂಟೆಗಳ ಮೂಲಕ ನಡೆಯುವ ಚೇಸಿಂಗ್ ದೃಶ್ಯಗಳು ಚಿತ್ರದ ಹೈಲೈಟ್‌ಗಳಲ್ಲೊಂದು. ಸಾಮಾನ್ಯವಾಗಿ ಬೈಕ್, ಜೀಪ್, ವಾಟರ್, ಸ್ಕೈ, ಕುದುರೆ, ಆನೆ ಹೀಗೆ ನಾನಾ ರೀತಿಯಲ್ಲಿ ಸ್ಟಂಟ್, ಚೇಸಿಂಗ್ ಕಾಮನ್ ಆಗಿರುತ್ತೆ. ಆದರೆ, ಇವೆಲ್ಲವುಗಳಿಗಿಂತ ಭಿನ್ನವಾಗಿಯೇ ಇರಬೇಕೆಂಬ ಕಾರಣದಿಂದ ನಿರ್ದೇಶಕ ಸಹನಾ ಮೂರ್ತಿ ಅವರು, ತಮ್ಮ ಚಿತ್ರದಲ್ಲಿ ಒಂಟೆಗಳ ಮೇಲೆ ಫೈಟ್ ಸೀನ್ ಮಾಡಿಸಿದ್ದಾರೆ.
ಅಂದಹಾಗೆ, ಇದು ಕನ್ನಡದಲ್ಲಿ ಮೊದಲ ಪ್ರಯತ್ನ ಎನ್ನಬಹುದು. ಫೈಟ್ ಜೊತೆಯಲ್ಲಿ ಒಂಟೆಗಳನ್ನು ಬಳಸಿಕೊಂಡು ಚೇಸಿಂಗ್ ದೃಶ್ಯಗಳನ್ನೂ ಸೆರೆ ಹಿಡಿಯಲಾಗಿದೆ. ಅಷ್ಟಕ್ಕೂ ಒಂಟೆಗಳನ್ನು ಬಳಸಿಕೊಂಡು ಸಾಹಸ ದೃಶ್ಯಗಳನ್ನು ಸಂಯೋಜಿಸಿರೋದು ವಿಜಿ ಮಾಸ್ಟರ್. “ಸೈರಾ’, “ದಬಾಂಗ್’, “ಬಾಡಿಗಾರ್ಡ್’, “ಪೋಕಿರಿ’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ಖ್ಯಾತಿ ವಿಜಿ ಮಾಸ್ಟರ್ ಅವರದ್ದು.
ಒಂಟೆ ಮೇಲೆ ಕೂತು ಸಾಗುವುದೇ ಕಷ್ಟ ಇರುವಾಗ, ಅವುಗಳ ಮೇಲೆ ಕುಳಿತು ಫೈಟ್ ಮಾಡೋದು ಸುಲಭದ ಕೆಲಸವಲ್ಲ. ನಾಯಕ ವಿಕ್ರಮ್ ಹಾಗು ಖಳನಟರು ಒಂಟೆಗಳ ಮೇಲೆ ಗಂಟೆಗಟ್ಟಲೆ ಕುಳಿತುಕೊಂಡು ಸಾಹಸ ಮಾಡಿದ್ದಾರೆ. ಈ ಸಾಹಸ ಚಿತ್ರೀಕರಣಕ್ಕೆ ಸುಮಾರು 15 ದಿನಗಳ ಕಾಲ ನಟಿ ಆಕಾಂಕ್ಷ ಶರ್ಮಾ, ಸಾಧು ಕೋಕಿಲ, ಬಾಲಿವುಡ್ ನಟ ರೋಹಿತ್ ರಾಯ್ ಸೇರಿದಂತೆ ಚಿತ್ರತಂಡ ರಾಜಸ್ಥಾನದಲ್ಲಿ ಕೆಲಸ ಮಾಡಿದೆ.
ಚಿತ್ರೀಕರಣ ವೇಳೆ ಒಂಟೆಗಳಿಗೆ ಯಾವುದೇ ತೊಂದರೆ ಆ ಗದಂತೆ ನೋಡಿಕೊಂಡಿರುವುದು ಚಿತ್ರತಂಡದ ಕಾಳಜಿ ತೋರಿಸುತ್ತದೆ. ಗೌರಿ ಎಂಟರ್‌ಟೈನರ್ಸ್ ಬ್ಯಾನರ್‌ನಲ್ಲಿ ಸೋಮಣ್ಣ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ರಾಜು ಸುಂದರಂ, ಪ್ರಭುದೇವ, ಕಲೈ ನೃತ್ಯ ನಿರ್ದೇಶನವಿದೆ.