Advertisement

ಪ್ರಜಾಧ್ವನಿ ಹೆಸರಿನಲ್ಲಿ ಬಬಲೇಶ್ವರ ಕ್ಷೇತ್ರದಲ್ಲಿ ಮತದಾರರಿಗೆ ಸೀರೆ ಹಂಚಿಕೆ: ವಿಜುಗೌಡ ಆರೋಪ

11:35 AM Feb 20, 2023 | keerthan |

ವಿಜಯಪುರ: ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಶಾಸಕರು ಸಿದ್ಧೇಶ್ವರ ಶ್ರೀಗಳ ಹೆಸರು ದುರ್ಬಳಕೆ ಮಾಡಿಕೊಂಡು ಹಾಗೂ ಮತದಾರರಿಗೆ ಈಗಿನಿಂದಲೇ ಸೀರೆ ಹಂಚುವ ಹೇಡಿತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಆರೋಪಿಸಿದರು.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಬಲೇಶ್ವರ ಕ್ಷೇತ್ರದ ರಾಜಕೀಯ ಕುತಂತ್ರದಿಂದ ನನಗೆ ಸೋಲಾಗಿದೆ. ಹಣ ಗಳಿಸಿಲ್ಲ, ಜನರ ಹೃದಯ ಗೆದ್ದಿದ್ದೇನೆ. ಹೀಗಾಗಿ ಹೇಡಿ ರಾಜಕಾರಣ ಮಾಡುವ ಕೆಲಸ ಮತ್ತೆ ಈಗಿನಿಂದಲೇ ಆರಂಭಗೊಂಡಿದೆ ಎಂದು ಪರೋಕ್ಷವಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ವಿರುದ್ಧ ದೋಷಾರೋಪ ಮಾಡಿದರು.

ಇಷ್ಟಕ್ಕೂ ಚುನಾವಣೆಯಲ್ಲಿ ಆಯ್ಕೆಯಾದ 4 ವರ್ಷ 9 ತಿಂಗಳ ಅವಧಿಯಲ್ಲಿ ಇವರು ಅಭಿವೃದ್ಧಿ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು.

ಬಬಲೇಶ್ವರ ಕ್ಷೇತ್ರದಲ್ಲಿ ನಿರಂತರ ಸೋಲು ಅನುಭವಿಸಿದರೂ 15 ವರ್ಷಗಳ ಕಾಲ ಬಬಲೇಶ್ವರ ಜನತೆಗಾಗಿ ನನ್ನ ಕೈಲಾದಷ್ಟು ಕೆಲಸ ಮಾಡಿದ್ದೇನೆ. ಇದನ್ನು ಗಮನಿಸಿ ಯಡಿಯೂರಪ್ಪ, ಪ್ರಹ್ಲಾದ ಜೋಶಿ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ನೀಡಿದ್ದಾರೆ ಎಂದರು.

ಇದನ್ನೂ ಓದಿ:ಅನಾರೋಗ್ಯ: ಮಂಗಳೂರಿನ ಆಸ್ಪತ್ರೆಯಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗೆ ಚಿಕಿತ್ಸೆ

Advertisement

ಬಬಲೇಶ್ವರ ಕ್ಷೇತ್ರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾಂಗ್ರೆಸ್ ಸೀರೆ, ಮೊಬೈಲ್ ಹಂಚುವ ಆಮಿಷದ ಅಕ್ರಮ ಮಾರ್ಗ ಅನುಸರಿಸುತ್ತಿದೆ ಎಂದು ದೂರಿದರು.

ಸೋಲುವ ಭೀತಿಯಿಂದ ಆಧುನಿಕ ಭಗೀರತ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮಹಿಳೆಯರಿಗೆ ಸೀರೆ ಹಾಗೂ ಮೊಬೈಲ್ ವಿತರಣೆ ಮಾಡುತ್ತಿದ್ದಾರೆ. ಆದರೂ ಬಬಲೇಶ್ವರ ಕ್ಷೇತ್ರದ ಜನರು ಇವರ ಸಣ್ಣತನದ ಆಮಿಷಕ್ಕೆ ಬಲಿಯಾಗುವುದಿಲ್ಲ. ಬಬಲಾಗಿ ಈ ಬಾರಿ ಕ್ಷೇತ್ರದ ಜನರು ಬಿಜೆಪಿ ಪಕ್ಷದ ಮೂಲಕ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೊಂದೆಡೆ 9 ಸಾವಿರ ರೂ. ಮೌಲ್ಯದ ಹಿಟ್ಟಿನ ಗಿರಣಿಯನ್ನು 20 ಸಾವಿರ ರೂ. ಮೌಲ್ಯ ಕಟ್ಟಿ, 10 ಸಾವಿರ ರೂ. ರಿಯಾಯಿತಿ ನೀಡುವ ನಾಟಕ ಆಡುತ್ತಿದ್ದಾರೆ ಎಂದು ಆರೋಪಿಸಿದರು.

ಸುಳ್ಳು ಹೇಳಿಕೆ ಮೂಲಕ ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಹೇಡಿ ರಾಜಕಾರಣ ಮಾಡುತ್ತಿದ್ದಾರೆ. ತಿರುಗಲು ಒಂದು ರಸ್ತೆಯನ್ನೂ ಮಾಡಲಾಗದವರು ತಮ್ಮನ್ನು ತಾವು ಅಭಿವೃದ್ಧಿ ಹರಿಕಾರ ಎಂದು ಕರೆಸಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.

ಸಿದ್ಧೇಶ್ವರ ಶ್ರೀಗಳ ಹೆಸರು ಬಳಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಈಚೆಗಷ್ಟೇ ಸಿದ್ಧೇಶ್ವರ ಶ್ರೀಗಳ ಸಂಪರ್ಕಕ್ಕೆ ಬಂದಿರುವ ಇವರಿಗೆ, ಮಲ್ಲಿಕಾರ್ಜುನ ಶ್ರೀಗಳಿಗೂ ನಮ್ಮ ಕುಟುಂಬಕ್ಕೆ ಇದ್ದ ಅವಿನಾಭಾವ ಸಂಬಂಧ ಇತ್ತು. ಆದರೂ ರಾಜಕೀಯ ಲಾಭಕ್ಕೆ ಬಳಸಿಕೊಂಡಿಲ್ಲ. 2013, 2018 ರಲ್ಲಿ ಬಬಲೇಶ್ವರ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದರು, ಆದರೆ ವಾಮ‌ಮಾರ್ಗದಿಂದ ನನ್ನ ಗೆಲುವಿನ ಸರ್ಟಿಫಿಕೇಟ್ ಕದಿಯುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಿಜಕ್ಕೂ ನೀವು ಅಭಿವೃದ್ಧಿ ಮಾಡಿದ್ದರೆ ಕ್ಷೇತ್ರದಲ್ಲಿ ನಾನೂ ಹಾಗೂ ನೀವು ಇಬ್ಬರೂ ಪ್ರಚಾರಕ್ಕೆ ಹೋಗುವುದು ಬೇಡ. ಕೇವಲ ನಾವು ಮಾಡಿದ ಕೆಲಸದ ಬಗ್ಗೆ ಹೇಳಿಕೆ ಕೊಟ್ಟು ನಮ್ಮ ಮನೆಯಲ್ಲಿ ಕುಳಿತುಕೊಳ್ಳೋಣ. ಜನರೇ ತೀರ್ಮಾನಿಸಲಿ ಎಂದು ಸವಾಲು ಹಾಕಿದರು.

ಬಿಜೆಪಿ ಬಬಲೇಶ್ವರ ಮಂಡಲ ಅಧ್ಯಕ್ಷ ವಿಠ್ಠಲ ಕಿರಸೂರು, ಯುವ ಮೋರ್ಚಾ ಅಧ್ಯಕ್ಷ ಶಂಕರಗೌಡ ಬಿರಾದಾರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next