ಚೆನ್ನೈ: ನಟ ವಿಜಯ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ತಮಿಳು ಸಿನಿಮಾ ಮೆರ್ಸಲ್ ಬಿಡುಗಡೆಗೊಂಡ 2 ದಿನದಲ್ಲಿ ಬಾಕ್ಸಾಫೀಸ್ ನಲ್ಲಿ ನೂರು ಕೋಟಿ ಬಾಚುವತ್ತ ಮುನ್ನುಗ್ಗುತ್ತಿದ್ದರೆ, ಮತ್ತೊಂದೆಡೆ ಸಿನಿಮಾದಲ್ಲಿನ ಜಿಎಸ್ ಟಿ ಕುರಿತ ಡೈಲಾಗ್ ತೀವ್ರ ವಿವಾದಕ್ಕೊಳಗಾಗಿದೆ.
ವಿಜಯ್ ಅಭಿನಯದ ಮೆರ್ಸಲ್ ಸಿನಿಮಾದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಿಎಸ್ ಟಿ ಕುರಿತು ಟೀಕಿಸಲಾಗಿದೆ. ಈ ಡೈಲಾಗ್ ಗೆ ಕತ್ತರಿ ಹಾಕಬೇಕೆಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಸೌಂದರಾಜನ್ ಆಗ್ರಹಿಸಿದ್ದಾರೆ. ಏತನ್ಮಧ್ಯೆ ಜಿಎಸ್ ಟಿ ಕುರಿತ ವಿಜಯ್ ಡೈಲಾಗ್ ಇಂಟರ್ನೆಟ್ ನಲ್ಲಿ ಹಿಟ್ ಆಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಸಿನಿಮಾದಲ್ಲಿ ಜಿಎಸ್ ಟಿ ಬಗ್ಗೆ ಅಸಮರ್ಪಕವಾದ ಮಾಹಿತಿಯನ್ನು ನೀಡಲಾಗಿದೆ ಎಂದು ಬಿಜೆಪಿ ನಟ ವಿಜಯ್ ಹಾಗೂ ನಿರ್ದೇಶಕ ಅಟ್ಲೀಯನ್ನು ಕಟುವಾಗಿ ಟೀಕಿಸಿದೆ.
ವಿಜಯ್ ಬೆಂಬಲಕ್ಕೆ ನಿಂತ ಕಮಲ್ ಹಾಸನ್!
ಮೆರ್ಸಲ್ ಸಿನಿಮಾದಲ್ಲಿನ ಜಿಎಸ್ ಟಿ ಡೈಲಾಗ್ ಗೆ ಕತ್ತರಿ ಪ್ರಯೋಗ ಮಾಡಬೇಕೆಂಬ ಬಿಜೆಪಿ ಆಗ್ರಹವನ್ನು ಖಂಡಿಸಿ ತಮಿಳು ಚಿತ್ರರಂಗ ವಿಜಯ್ ಬೆಂಬಲಕ್ಕೆ ನಿಂತಿದೆ.
ಟೀಕೆಯ ಸದ್ದಡಗಿಸಬೇಡಿ, ವಾಕ್ ಸ್ವಾತಂತ್ರ್ಯಕ್ಕೆ ಭಾರತದಲ್ಲಿ ಮಹತ್ವ ಇದೆ. ಮೆರ್ಸಲ್ ಸಿನಿಮಾವನ್ನು ಸೆನ್ಸಾರ್ ಮಾಡಿಯೇ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಮತ್ತೆ ಸೆನ್ಸಾರ್ ಮಾಡೋದು ಬೇಡ. ಟೀಕೆ ಎನ್ನುವುದು ತರ್ಕಬದ್ಧವಾದ ಪ್ರತಿಕ್ರಿಯೆಯಾಗಿದೆ ಎಂದು ಖ್ಯಾತ ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.