Advertisement

BJP: ಪಕ್ಷದ ಸಭೆ ವರದಿಯೊಂದಿಗೆ ವಿಜಯೇಂದ್ರ ಶೀಘ್ರ ದಿಲ್ಲಿಗೆ

11:53 PM Jan 11, 2024 | Team Udayavani |

ಬೆಂಗಳೂರು: ಲೋಕಸಭಾ ಅಭ್ಯರ್ಥಿ ಆಯ್ಕೆ ಹಾಗೂ ಸಿದ್ಧತೆಗೆ ಸಂಬಂಧಿಸಿ ಎರಡು ದಿನಗಳಿಂದ ನಡೆಯುತ್ತಿದ್ದ ಬಿಜೆಪಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್‌ನಿಂದಲೇ ಸ್ಪಷ್ಟನೆ ಪಡೆಯಲು ನಿರ್ಧರಿಸಲಾಗಿದೆ. ಫೆಬ್ರವರಿ ಮೊದಲ ವಾರದೊಳಗೆ ಅಭ್ಯರ್ಥಿ ಯಾರೆಂಬ ಬಗ್ಗೆ ರಾಜ್ಯ ನಾಯಕತ್ವಕ್ಕೆ ಸ್ಪಷ್ಟ ಚಿತ್ರಣ ಕೊಡುವಂತೆ ವರಿಷ್ಠರಲ್ಲಿ ಮನವಿ ಮಾಡಲು ನಿಶ್ಚಯಿಸಲಾಗಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು 8 ಕ್ಲಸ್ಟರ್‌ ಆಗಿ ವಿಭಜಿಸಿ ಸ್ಥಳೀಯ ಮುಖಂಡರು ಹಾಗೂ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಹಲವು ಕ್ಷೇತ್ರಗಳ ಹಾಲಿ ಸಂಸದರ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ಒಂದು ವರದಿ ಸಿದ್ಧಪಡಿಸಿ ಸದ್ಯದಲ್ಲೇ ವರಿಷ್ಠರನ್ನು ಭೇಟಿ ಮಾಡಿ ಬದಲಾವಣೆ ಬೇಕೋ, ಬೇಡವೋ ಎಂಬ ಬಗ್ಗೆ ಸ್ಪಷ್ಟನೆ ಪಡೆಯಲು ನಿರ್ಧರಿಸಲಾಗಿದೆ.

Advertisement

ಮಂಗಳೂರು ಕ್ಲಸ್ಟರ್‌ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕಿತ್ತೂರು ಕ್ಲಸ್ಟರ್‌ ವ್ಯಾಪ್ತಿಯ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಧಾರವಾಡ ಕ್ಲಸ್ಟರ್‌ ವ್ಯಾಪ್ತಿಯ ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಕ್ಲಸ್ಟರ್‌ ವ್ಯಾಪ್ತಿಯ ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಕೇಂದ್ರ ಲೋಕಸಭಾ ವ್ಯಾಪ್ತಿಗೆ ಸಂಬಂಧಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಬದಲಾವಣೆಯ ಕೂಗು
ಮಂಗಳೂರು ಕ್ಲಸ್ಟರ್‌ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಸಭೆಯಲ್ಲಿ ಅಪಸ್ವರ ಕೇಳಿ ಬಂದಿದೆ. ಕುತೂಹಲಕಾರಿ ಸಂಗತಿ ಎಂದರೆ ಮೂರ್‍ನಾಲ್ಕು ವರ್ಷಗಳಿಂದ ಪಕ್ಷದ ಅಧಿಕೃತ ಸಭೆಗಳಿಗೆ ಸತತವಾಗಿ ಗೈರಾಗಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಗುರುವಾರ ನಡೆದ ಸಭೆಗೆ ಹಾಜರಾಗಿದ್ದರು. ಉತ್ತರ ಕನ್ನಡಕ್ಕೆ ಪ್ರಧಾನಿ ಮೋದಿ ಆಗಮಿಸಿದ ಸಂದರ್ಭದಲ್ಲೂ ಅಂತರಕಾಯ್ದುಕೊಂಡಿದ್ದ ಅವರು ಈಗ ಇದ್ದಕ್ಕಿದ್ದಂತೆ ಚುರುಕಾಗಿದ್ದಾರೆ.

ಈ ಸಭೆಯಲ್ಲಿ ಅನಂತಕುಮಾರ ಹೆಗಡೆ ಬದಲಾವಣೆ ಬಗ್ಗೆ ಯಾರೂ ನೇರವಾಗಿ ಮಾತನಾಡಿಲ್ಲ. ಆದರೆ ಈ ಬಾರಿಯೂ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು. ಹೀಗಾಗಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕೆಂಬ ಪ್ರಸ್ತಾವ ವ್ಯಕ್ತವಾಗಿದೆ. ಈ ಸಭೆಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಟಾರ್‌ ಗೈರಾಗಿರುವುದು ಕುತೂಹಲಕಾರಿ ಸಂಗತಿ. ಹೀಗಾಗಿ ಚುನಾವಣೆ ಹೊಸ್ತಿಲಲ್ಲಿ ಅವರು ಕಾಂಗ್ರೆಸ್‌ ಸೇರ್ಪಡೆಗೊಳ್ಳಬಹುದೆಂಬ ಅನುಮಾನ ಇನ್ನೂ ಉಳಿದುಕೊಂಡಿದೆ.

ಶೋಭಾ ಕರಂದ್ಲಾಜೆ ಗೈರು
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಗುರುವಾರ ನಡೆದ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಆದರೆ ಅಭ್ಯರ್ಥಿ ಬದಲಾವಣೆ ಬಗ್ಗೆ ಈ ಸಭೆಯಲ್ಲಿ ಮುಖಂಡರು ಪ್ರಸ್ತಾವಿಸಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿಯೇ ಅಭ್ಯರ್ಥಿ ಆಯ್ಕೆ ಮಾಡ ಬೇಕೆಂಬ ಬೇಡಿಕೆ ವ್ಯಕ್ತವಾಗಿದ್ದು, ಸಿ.ಟಿ.ರವಿ, ಪ್ರಮೋದ್‌ ಮಧ್ವರಾಜ್‌ ಹೆಸರು ಪ್ರಸ್ತಾವವಾಗಿದೆ. ಬೆಳಗಾವಿ, ಚಿತ್ರದುರ್ಗ, ಬೆಂಗಳೂರು ಉತ್ತರ ಕ್ಷೇತ್ರದ ಬಗ್ಗೆ ಪರ್ಯಾಯ ಹೆಸರು ಪ್ರಸ್ತಾಪವಾಗಿದೆ. ಸಂಸದ ತೇಜಸ್ವಿ ಸೂರ್ಯ ಜತೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್‌ ಹೆಸರೂ ಪ್ರಸ್ತಾವವಾಗಿದೆ.

Advertisement

ಸ್ಥಳೀಯರಿಗೆ ಕೊಡಿ
ಹಾವೇರಿ ಲೋಕಸಭಾ ಕ್ಷೇತ್ರದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ತಮ್ಮ ಪುತ್ರನಿಗೆ ಟಿಕೆಟ್‌ ಬೇಕು ಎಂದು ವರಿಷ್ಠರಿಗೆ ಒತ್ತಡ ಮಾಡಿರುವುದರ ಮಧ್ಯೆಯೇ ಸ್ಥಳೀಯರಿಗೆ ಅವಕಾಶ ಕೊಡಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದು ಇನ್ನೊಂದು ವಿಶೇಷ.

ಸುಮಲತಾ-ಜೆಡಿಎಸ್‌ ವಿಚಾರವೂ ಚರ್ಚೆ
ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಕ್ಕೆ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ವಿರೋಧ ಇರುವುದು ಸಭೆಯಲ್ಲಿ ಚರ್ಚೆಯಾಗಿದೆ. ಸುಮಲತಾ ಅವರ ಮನವೊಲಿಸುವುದು ಸಹಿತ ಪರ್ಯಾಯ ಮಾರ್ಗಗಳೇನೆಂಬ ಬಗ್ಗೆ ಪ್ರಸ್ತಾವವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸದ್ಯದಲ್ಲೇ ಸುಮಲತಾ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next