Advertisement

ಜ್ಞಾನಯೋಗಾಶ್ರಮದಲ್ಲಿ ಆಕರ್ಷಕ ಯೋಗ ಪ್ರದರ್ಶನ

03:58 PM May 06, 2019 | Naveen |

ವಿಜಯಪುರ: ಸಸ್ಯಕಾಶಿಯಿಂದಾಗಿ ಪ್ರಶಾಂತ ಪರಿಸರ ಸೃಷ್ಟಿಸಿಕೊಂಡಿರುವ ನಗರದ ಜ್ಞಾನಯೋಗಾಶ್ರಮದಲ್ಲಿ ಸೂರ್ಯೋದಯಕ್ಕೆ ಮುನ್ನವೇ ಆಪರೂಪದ ವಾತಾವರಣ ನಿರ್ಮಾಣಗೊಂಡಿತ್ತು. ಮಕ್ಕಳು, ಯುವಕರು ಪ್ರಶಾಂತ ಪರಿಸರದಲ್ಲಿ ಸ್ಪರ್ಧೆಗಾಗಿ ವಿವಿಧ ಭಂಗಿಯ ಯೋಗಾಸನ ಪ್ರದರ್ಶನ ಮಾಡುವ ಮೂಲಕ ನೆರೆದವರ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿದರು.

Advertisement

ನಗರದ ಜಿಲ್ಲಾ ಯೋಗ ಅಸೋಸಿಯೇಷನ್‌ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಯೋಗ ಸ್ಪರ್ಧೆ ಈ ಅಪೂರ್ವ ದೃಶ್ಯಾವಳಿಗಳಿಗೆ ಸಾಕ್ಷಿಯಾಯಿತು. ಯೋಗ ಸ್ಪರ್ಧೆಗೆ ಚಾಲನೆ ನೀಡಿದ ಜ್ಞಾನ ಯೋಗಾಶ್ರಮದ ಬಸವಲಿಂಗ ಶ್ರೀಗಳು ಯೋಗದ ಮಹತ್ವ ಮನವರಿಕೆ ಮಾಡಿಕೊಡುತ್ತಲೇ ಸೂರ್ಯ ಕಣ್ತೆರೆದು ಜಗಕೆ ಬೆಳಕು ಹರಿಸುವ ಹೊತ್ತಿಗೆ ನೂರಾರು ಯೋಗಪಟುಗಳು ವಿವಿಧ ಆಸನಗಳನ್ನು ಪ್ರದರ್ಶನದ ಮೂಲಕ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅಣಿಯಾಗಿದ್ದರು.

ಜಿಲ್ಲಾ ಮಟ್ಟದ ಈ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಿಂದಗಿ, ಬಸವನಬಾಗೇವಾಡಿ, ಮುದ್ದೇಬಿಹಾಳ ಸೇರಿದಂತೆ ಹಲವಾರು ತಾಲೂಕುಗಳಿಂದ ಸುಮಾರು 40ಕ್ಕೂ ಹೆಚ್ಚು ಶಾಲೆಗಳಿಂದ 200ಕ್ಕೂ ಹೆಚ್ಚು ಮಕ್ಕಳು ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದರು. 8-11, 11-14 ಹಾಗೂ 14-17 ವರ್ಷದೊಳಗಿನ ವಿಭಾಗವಾರು ಯೋಗ ಸ್ಪರ್ಧೆ ನಡೆಯಿತು.

ಯೋಗ ಸ್ಪರ್ಧಿಗಳು ನಿರ್ಣಾಯಕರು ಹೇಳುವ ಆಸನಗಳನ್ನು ಅತ್ಯಂತ ಆಸಕ್ತಿಯಿಂದ ಪ್ರದರ್ಶಿಸುವ ಮೂಲಕ ತಮ್ಮಲ್ಲಿರುವ ಯೋಗಶಕ್ತಿ ಅನಾವರಣ ಮಾಡಿದರು. ಯೋಗದಲ್ಲಿ ಸಾಧನೆ ಮಾಡಿರುವ ಹುಬ್ಬಳ್ಳಿ, ದಾವಣಗೆರೆ, ಧಾರವಾಡ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ನಿರ್ಣಾಯಕರು ಸ್ಪರ್ಧಿಗಳು ಪ್ರದರ್ಶಿಸುವ ಆಸನಗಳ ಆಧಾರದಲ್ಲಿ ನಿರ್ಣಯ ನೀಡಿದರು.

ವಿವಿಧ ವಿಭಾಗವಾರು ಬೇರೆ ಬೇರೆ ಆಸನಗಳನ್ನು ಸರ್ಧೆಗೆ ನಿಗದಿಗೊಳಿಸಲಾಗಿತ್ತು. ವಿದ್ಯಾರ್ಥಿಗಳು ತಮಗೆ ನೀಡಲಾದ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಸಾರ್ವಜನಿಕರು ಸಹ ವಿದ್ಯಾರ್ಥಿಗಳಿಂದ ನಡೆದ ಯೋಗವನ್ನು ವೀಕ್ಷಿಸಿ ಆನಂದಿಸಿದರು.

Advertisement

8ರಿಂದ 10 ವರ್ಷದೊಳಗಿನ ವಿದ್ಯಾರ್ಥಿಗಳು ಪಾದ ಹಸ್ತಾಸನ, ಆಕರ್ಣ ಧನುರ್‌ ಆಸನ, ಚಕ್ರಾಸನ, ಸರ್ವಾಂಗಾಸನ ಪ್ರದರ್ಶಿಸಿದರೆ, 11-14 ವರ್ಷದೊಳಗಿನ ವಿದ್ಯಾರ್ಥಿಗಳು ಗರುಡಾಸನ, ಪಶ್ಚಿಮೋತ್ಥಾಸನ, ಬಕಾಸನ, ಪುರಾಣ ಸುಪ್ತ ವಜ್ರಾಸನ, ಏಕಪಾದ ಚಕ್ರಾಸನ, ಪೂರ್ಣ ಮತ್ಸಾಸನ ಹಾಗೂ 14-17 ವರ್ಷದೊಳಗಿನ ವಿದ್ಯಾರ್ಥಿಗಳು ವೀರಭದ್ರಾಸನ, ಚಕ್ರಬಂಧಾಸನ, ಪೂರ್ಣಸುಪ್ತ ವಜ್ರಾಸನ, ಪೂರ್ಣ ಭುಜಂಗಾಸನ ಸೇರಿದಂತೆ ಹತ್ತಾರು ಆಸನಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ಕಳೆದ ವರ್ಷವೂ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ, ಈ ಬಾರಿಯೂ ಭಾಗವಹಿಸುತ್ತಿದ್ದೇನೆ. ದೊಡ್ಡ ಪ್ರಮಾಣದಲ್ಲಿ ಯೋಗ ಸ್ಪರ್ಧೆ ಆಯೋಜನೆ ಮಾಡುವುದರಿಂದ ಈ ಭಾಗದ ಯೋಗ ಪ್ರತಿಭೆಗಳ ಯೋಗ ಪ್ರತಿಭಾ ಪ್ರಕಾಶನಗೊಳ್ಳುತ್ತಿದೆ ಎಂದು ಯೋಗಪಟು ಪ್ರಮೋದ ಪಾಟೀಲ ಸಂತೋಷ ವ್ಯಕ್ತಪಡಿಸಿದರು.

ಮಕ್ಕಳಲ್ಲಿ ಯೋಗದ ಕುರಿತು ಜಾಗೃತಿ ಮೂಡಿಸುವ ಕಾರ್ಯದಿಂದ ಈ ಯೋಗ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಗೆ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ ಎಂದು ಸಂಘಟಕರಾದ ಸುರೇಶ ಆನಂದಿ ಮೊದಲಾದವರು ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next